More

    ಫಾಸ್ಟ್ಯಾಗ್ ರಹಿತ ವಾಹನಗಳಿಗೆ ಬಿಸಿ

    ವಿಜಯವಾಣಿ ಸುದ್ದಿಜಾಲ ಮಂಗಳೂರು/ಉಡುಪಿ
    ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ಫಾಸ್ಟ್ಯಾಗ್ ರಹಿತ ವಾಹನಗಳಿಗೆ ಗುರುವಾರದಿಂದ ಟೋಲ್‌ಗೇಟ್‌ಗಳಲ್ಲಿ ದಂಡ ವಿಧಿಸುವ ಬದಲು ಇರುವ ಸೌಲಭ್ಯಗಳನ್ನು ಮತ್ತಷ್ಟು ಕಡಿತಗೊಳಿಸಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಆದೇಶ ಹೊರಡಿಸಿದೆ. ಪರಿಣಾಮ, ಗುರುವಾರ ಅಪರಾಹ್ನ ಟೋಲ್‌ಗೇಟ್‌ಗಳ ನಗದು ರಹಿತ ಕೌಂಟರ್‌ಗಳ ಎದುರು ವಾಹನಗಳ ಉದ್ದುದ್ದ ಸಾಲಿತ್ತು.
    ಎಲ್ಲ ಟೋಲ್‌ಗಳಲ್ಲಿ ಉಭಯ ದಿಕ್ಕುಗಳಿಗೆ ಸಾಗುವ ತಲಾ ಒಂದು ಸಾಲನ್ನು ಮಾತ್ರ ನಗದು ಪಾವತಿ ಸಾಲು ಆಗಿ ಉಳಿಸಲಾಗಿದೆ. ಈ ಸಾಲಿನಲ್ಲಿ ಸಾಗುವ ವಾಹನಗಳಿಗೆ ಬಂದು ಹೋಗುವ ಎರಡು ದಿಕ್ಕುಗಳ ಪ್ರಯಾಣದ ಟಿಕೆಟ್‌ಗಳನ್ನು ಒಂದೇ ಬಾರಿ ಪಡೆಯುವ ಸೌಲಭ್ಯ ಜ.16ರಿಂದ ಇರುವುದಿಲ್ಲ.

    ಉದಾಹರಣೆಗೆ ಸುರತ್ಕಲ್ ಪ್ಲಾಜಾದಲ್ಲಿ ಇಲ್ಲಿವರೆಗೆ ಕಾರಿನಲ್ಲಿ ಒಂದು ಕಡೆಗೆ ಪ್ರಯಾಣಿಸುವವರಿಗೆ 50 ರೂ. ಇರುತ್ತಿತ್ತು. ಹೋಗಿ ಬರಲು 85 ರೂ. ಪಾವತಿಸಿದರೆ ಸಾಕಿತ್ತು. ಆದರೆ ಇನ್ನು ಸಿಂಗಲ್ ಪೇಮೆಂಟ್ ವ್ಯವಸ್ಥೆ ಮಾತ್ರ ಜಾರಿಯಲ್ಲಿರುತ್ತದೆ. ಪ್ರತ್ಯೇಕ ಶುಲ್ಕ ಪಾವತಿಸುವುದರಿಂದ ಫಾಸ್ಟ್ಯಾಗ್ ರಹಿತ ದೊಡ್ಡ ವಾಹನಗಳಿಗೆ ಹೆಚ್ಚು ನಷ್ಟವಾಗಲಿದೆ.
    ಇದು ಟೋಲ್‌ಗಳಲ್ಲಿ ಫಾಸ್ಟ್ಯಾಗ್ ವ್ಯವಸ್ಥೆಯನ್ನು ಹಂತಹಂತವಾಗಿ ಕಡ್ಡಾಯಗೊಳಿಸುವ ಭಾಗವಾಗಿದೆ.

    ಹೀಗೆ ಮಾಡಿದರೆ ದಂಡ: ಫಾಸ್ಟ್ಯಾಗ್ ಇದ್ದು, ಖಾತೆಯಲ್ಲಿ ಹಣವಿಲ್ಲದಿದ್ದರೆ ಇನ್ನು ನಿಗದಿತ ಶುಲ್ಕದ ಇಮ್ಮಡಿ ಮೊತ್ತ ಪಾವತಿಸಬೇಕಾಗುತ್ತದೆ. ಇಲ್ಲಿವರೆಗೆ ಇಂತಹ ವಾಹನಗಳಿಗೆ ಫಾಸ್ಟ್ಯಾಗ್ ಸಾಲಿನಲ್ಲಿಯೇ ಸಾಮಾನ್ಯ ಶುಲ್ಕ ಪಾವತಿಸಿ ಪ್ರಯಾಣಿಸಲು ಅವಕಾಶ ಇತ್ತು. ಫಾಸ್ಟ್ಯಾಗ್ ರಹಿತ ವಾಹನಗಳು ಫಾಸ್ಟ್ಯಾಗ್ ಸಾಲಿನಲ್ಲಿ ಪ್ರಯಾಣಿಸಿದರೂ ಇಮ್ಮಡಿ ಶುಲ್ಕ ಪಾವತಿಸಬೇಕು.

    ನಗದು ಪಾವತಿಗೆ ಕನಿಷ್ಠ ಕೌಂಟರ್:
    ನವಯುಗ ಸಂಸ್ಥೆ ನಿರ್ವಹಿಸುತ್ತಿರುವ ತಲವಾಡಿ ಟೋಲ್‌ನಲ್ಲಿ ಒಟ್ಟು 10 ಸಾಲುಗಳು ಇದ್ದು, ಇದರಲ್ಲಿ ಉಭಯ ಕಡೆಗಳಿಗೆ ತಲಾ ಒಂದು ನಗದು ಪಾವತಿ ಸಾಲು ಮಾತ್ರ ಉಳಿಸಿಕೊಳ್ಳಲಾಗಿದೆ. ತಲಾ ನಾಲ್ಕು ಫಾಸ್ಟ್ಯಾಗ್ ಸಾಲುಗಳು ಇದ್ದು, ಇದರಲ್ಲಿ ತಲಾ ಒಂದು ಸಾಲನ್ನು ಆ್ಯಂಬುಲೆನ್ಸ್ ಸಹಿತ ತುರ್ತು ಸೇವೆಗಳಿಗೂ ಬಳಸಲಾಗುತ್ತಿದೆ.

    ನವಯುಗದ ಹೆಜಮಾಡಿ ಟೋಲ್‌ನಲ್ಲಿ ಉಭಯ ಕಡೆಗಳಲ್ಲಿ ತಲಾ ಏಳು ಸಾಲುಗಳಿದ್ದು, ತಲಾ ಒಂದು ಸಾಲು ನಗದು ಪಾವತಿ ಮತ್ತು ತಲಾ ಒಂದು ತುರ್ತು ಸೇವೆಗೆ ಮೀಸಲಿಡಲಾಗಿದೆ. ಉಳಿದ ತಲಾ ಐದು ಫಾಸ್ಟ್ಯಾಗ್ ಸಾಲುಗಳಾಗಿರುತ್ತವೆ.
    ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಬ್ರಹ್ಮರಕೂಟ್ಲು ಟೋಲ್‌ನಲ್ಲಿ ತಲಾ ಎರಡು ಸಾಲುಗಳಿದ್ದು, ಇದರಲ್ಲಿ ಒಂದು ಸಾಲನ್ನು ನಗದು ಪಾವತಿಗೆ ಮೀಸಲಿಡಲಾಗಿದೆ. ಸಾಲು ಕೊರತೆ ಇದ್ದ ಕಾರಣ ಇಲ್ಲಿ ಗುರುವಾರ ಸಾಯಂಕಾಲ ತನಕ ಹೊಸ ನೀತಿ ಜಾರಿಯಾಗಿರಲಿಲ್ಲ. ಆದರೆ ಎನ್‌ಎಚ್‌ಎಐ ಮೇಲಧಿಕಾರಿಗಳ ಸೂಚನೆಯಂತೆ ಗುರುವಾರ ಸಾಯಂಕಾಲವೇ ಪರಿಷ್ಕೃತ ನಿಯಮ ಜಾರಿಗೊಂಡಿದೆ.

    ಬ್ರಹ್ಮರಕೂಟ್ಲುವಿನಲ್ಲಿ ಸಾಲು ಕೊರತೆ
    ಎನ್‌ಎಚ್‌ಎಐಯ ಬ್ರಹ್ಮರಕೂಟ್ಲುವಿನಲ್ಲಿ ಉಭಯ ದಿಕ್ಕುಗಳಿಗೆ ತಲಾ ಎರಡು ಸಾಲುಗಳಿದ್ದು, ಇದರಲ್ಲಿ ತಲಾ ಒಂದು ಸಾಲು ಮಾತ್ರ ಫಾಸ್ಟ್ಯಾಗ್ ಮತ್ತು ನಗದು ಪಾವತಿಗೆ ಮೀಸಲಿಡಲು ಅವಕಾಶವಿದೆ. ತಲಾ ಒಂದು ಹೊಸ ಸಾಲು (ಒಟ್ಟು ಎರಡು) ನಿರ್ಮಿಸುವ ಶೇ.90 ಕಾಮಗಾರಿ ಮುಗಿದು ಒಂದು ವರ್ಷವಾಗಿದ್ದು, ಇಲ್ಲಿ ಬೆಳಗ್ಗೆ ಮತ್ತು ಸಾಯಂಕಾಲ ವಾಹನ ದಟ್ಟಣೆಯ ಸಂದರ್ಭ ಸಾಲು ಕೊರತೆಯಿಂದ ಸಮಸ್ಯೆ ನಿಶ್ಚಿತ.

    ಸ್ಟಿಕರ್ ರೀಡಿಂಗ್ ಸಮಸ್ಯೆ: ಹೆಜಮಾಡಿ, ಸಾಸ್ತಾನ ಟೋಲ್‌ಗೇಟ್‌ಗಳಲ್ಲಿ ಫಾಸ್ಟ್ಯಾಗ್ ಸ್ಟಿಕರ್‌ಗಳು ಸಮರ್ಪಕವಾಗಿ ರೀಡ್ ಆಗದ ಪರಿಣಾಮ ವಾಹನ ಸಂಚಾರ ವೇಗವಾಗಿಲ್ಲ. ಇದಕ್ಕೂ ನಗದು ಪಾವತಿಸುವ ಗೇಟ್‌ಗೂ ವ್ಯತ್ಯಾಸ ಇಲ್ಲದಂತಾಗಿದೆ ಎಂಬುದು ಸಾರ್ವಜನಿಕರ ದೂರು. ಕೆಲವರು ಸ್ಟಿಕರ್‌ಗಳನ್ನು ವ್ಯವಸ್ಥಿತವಾಗಿ ಅಂಟಿಸಿರುವುದಿಲ್ಲ. ಡ್ಯಾಮೇಜ್ ಇದ್ದಾಗಲೂ ಈ ರೀತಿ ಸಮಸ್ಯೆಯಾಗುತ್ತದೆ ಎನ್ನುತ್ತಾರೆ ನವಯುಗ ಸಂಸ್ಥೆಯ ಅಧಿಕಾರಿ ಶಿವಪ್ರಸಾದ್ ರೈ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts