ಶರವೇಗದ ನಾಟಿ ಕಾರ್ಯ

ಹರಿಪ್ರಸಾದ್ ನಂದಳಿಕೆ, ಬೆಳ್ಮಣ್
ಕೃಷಿಕರು ಕೃಷಿ ಬದುಕಿನಿಂದ ದೂರ ಸರಿಯುತ್ತಿರುವ ಈ ಕಾಲದಲ್ಲಿ ಕಾರ್ಕಳ ತಾಲೂಕಿನ ಸಂಕಲಕರಿಯ ಸುಧಾಕರ ಸಾಲ್ಯಾನ್‌ರ ನಾಲ್ಕು ಎಕರೆ ಕೃಷಿ ಭೂಮಿಯನ್ನು ಗಂಗಾವತಿ ಮೂಲದ ೨೨ ಮಹಿಳೆಯರು ಒಂದೇ ದಿನದಲ್ಲಿ ನಾಟಿ ಮಾಡಿ ಮುಗಿಸಿ ಕೃಷಿ ಕ್ಷೇತ್ರದಲ್ಲಿ ಅದ್ಭುತ ಸಾಧಿಸಿ ಹೊಸ ಭರವಸೆ ಮೂಡಿಸಿದ್ದಾರೆ.
ಇಚ್ಛಾಶಕ್ತಿಯಿದ್ದರೆ ಏನು ಬೇಕಾದರೂ ಸಾಧಿಸಬಹುದು ಎಂಬುದನ್ನು ಸಂಕಲಕರಿಯದ ಸುಧಾಕರ ಸಾಲ್ಯಾನ್ ಹಾಗೂ ಈ ಮಹಿಳೆಯರು ತೋರಿಸಿಕೊಟ್ಟಿದ್ದಾರೆ. ಮಂಗಳವಾರ ಬೆಳಗ್ಗೆ ೧೧ ಗಂಟೆಯೊಳಗೆ ನಾಲ್ಕು ಎಕರೆಗೆ ಬೇಕಾದಷ್ಟು ನೇಜಿ ಕಿತ್ತು ಬಳಿಕ ಸಾಯಂಕಾಲದೊಳಗೆ ನಾಟಿ ಮುಗಿಸಿದ್ದಾರೆ.

ಗಂಗಾವತಿ ಮೂಲದ ೫೦ ಮಂದಿಯ ತಂಡವೊಂದನ್ನು ಶಿವಮೊಗ್ಗ ಮೂಲದ ಮಾಲತೇಶ್ ಎಂಬುವರು ಕರೆದುಕೊಂಡು ಬಂದು ಜಮೀನನ್ನು ಮಾಲೀಕರಿಂದ ನಾಟಿ ಕಾರ್ಯಕ್ಕೆ ಗುತ್ತಿಗೆ ಪಡೆದುಕೊಂಡು ಕೃಷಿ ಕಾರ್ಯ ಮುಗಿಸಿಕೊಡುತ್ತಾರೆ. ಎಕರೆಗೆ ನಾಲ್ಕು ಸಾವಿರ ರೂ. ಪಡೆಯುವ ಮಾಲತೇಶ್ ಈ ತಂಡವನ್ನು ಗುತ್ತಿಗೆ ರೂಪದಲ್ಲಿ ನಡೆಸುತ್ತಿದ್ದಾರೆ. ಕರಾವಳಿ ಭಾಗದ ಕೃಷಿಕರಿಗೆ ಇದು ಒಂದು ರೀತಿಯಲ್ಲಿ ವರದಾನವೆಂಬಂತಾಗಿದೆ. ಕೂಲಿ ಕಾರ್ಮಿಕರ ಕೊರತೆಯಿಂದ ನಲುಗಿದ್ದ ಕೃಷಿ ಕ್ಷೇತ್ರಕ್ಕೆ ಈ ಜನರಿಂದ ಚೇತರಿಕೆ ದೊರಕಿದಂತಾಗಿದೆ. ಅವಿಭಜಿತ ದ.ಕ, ಉಡುಪಿ ಜಿಲ್ಲೆಯಲ್ಲಿ ಕೃಷಿ ಚಟುವಟಿಕೆಗೆ ಇಲ್ಲಿನ ಕಾರ್ಮಿಕರು ಸಿಗುವುದು ಕಡಿಮೆ. ಸಿಕ್ಕರೂ ಇಷ್ಟೊಂದು ವೇಗದಲ್ಲಿ ಕೃಷಿ ಚಟುವಟಿಕೆ ನಡೆಯುವುದು ಕಷ್ಟ.

ಅಲ್ಲಿ ಸಂಬಳ ಕಡಿಮೆ ಇಲ್ಲಿ ಪರ್ವಾಗಿಲ್ಲ: ಗಂಗಾವತಿ ತುಂಗಭದ್ರಾ ಅಣೆಕಟ್ಟುನಲ್ಲಿ ನೀರಿನ ಕೊರತೆ ಇದೆ, ನಮ್ಮೂರಲ್ಲಿ ಕೂಲಿ ಕೆಲಸಗಳಿಲ್ಲ ಎನ್ನುವ ಈ ಮಹಿಳೆಯರು ಕೂಲಿ ಸಿಕ್ಕರೂ ಕೇವಲ ೧೨೦ ರೂ. ಅದು ನಮ್ಮ ಜೀವನ ನಿರ್ವಹಣೆಗೆ ಏನೇನೂ ಸಾಲದು. ಹಾಗಾಗಿ ನಿಮ್ಮೂರಿಗೆ ಬಂದಿದ್ದೇವೆ ಎನ್ನುತ್ತಾರೆ. ಬೆಳಗ್ಗೆ ೮ರಿಂದ ನಾಟಿ ಕೆಲಸ ಪ್ರಾರಂಭಿಸಿದರೆ ತಾವು ವಹಿಸಿದ ಕೆಲಸ ಮುಗಿಯುವವರೆಗೂ ವಿರಮಿಸುವುದಿಲ್ಲ ಈ ತಂಡ. ಊಟ, ಚಹಾ ಹಾಗೂ ಇತರ ವ್ಯವಸ್ಥೆಗಳನ್ನು ಈ ತಂಡವೇ ನಿರ್ವಹಿಸುತ್ತದೆ. ಹೊಲದ ಮಾಲೀಕರಿಗೆ ಯಾವುದೇ ಹೊರೆಯಿಲ್ಲ. ಈ ತಂಡದಲ್ಲಿ ಕೆಲ ಪುರುಷರೂ ಇದ್ದಾರೆ. ತಂಡದ ಈ ರೀತಿಯ ಶರವೇಗದ ನಾಟಿ ಊರ ಕಾರ್ಮಿಕರಲ್ಲಿ ಅಚ್ಚರಿ ಮೂಡಿಸಿದೆ.

ಮಾದರಿ ಯುವ ಕೃಷಿಕ ಸುಧಾಕರ ಸಾಲ್ಯಾನ್: ಸಂಕಲಕರಿಯ ಸುಧಾಕರ ಸಾಲ್ಯಾನ್ ಕೆಸರುಗದ್ದೆಯಲ್ಲಿ ಕಾರ್ಮಿಕರ ಜತೆ ತಾನೂ ಬೆರೆತು ಆದರ್ಶವಾಗಿದ್ದಾರೆ. ಕಳೆದ ವರ್ಷ ತನ್ನ ಜಮೀನಿನ ಜತೆ ಇತರರ ಜಮೀನೂ ಸೇರಿ ೧೫ ಎಕರೆ ಹಡೀಲು ಭೂಮಿಯಲ್ಲಿ ಮೂರು ಇಳುವರಿಯ ಕೃಷಿ ಕಾರ್ಯ ನಡೆಸಿ ಸುದ್ದಿಯಾಗಿದ್ದ ಇವರು ಈ ಬಾರಿ ಗಂಗಾವತಿಯ ತಂಡದಿಂದ ಶರವೇಗದ ನಾಟಿ ಕಾರ್ಯ ಮುಗಿಸಿಗಿದ್ದಾರೆ. ಟ್ರ್ಯಾಕ್ಟರ್‌ಗಳ ಮೂಲಕ ಉಳುಮೆ ಮಾಡಿ ಕೃಷಿ ಚಟುವಟಿಕೆಗೆ ವೇಗ ಮುಟ್ಟಿಸಿ, ಕಟಾವು ಯಂತ್ರಗಳ ಮೂಲಕ ಕಟಾವು ನಡೆಸಿ ಭತ್ತ ಕೃಷಿಯಲ್ಲಿ ಭಾರಿ ಲಾಭ ಕಂಡುಕೊಂಡು ಇತರರಿಗೆ ಮಾದರಿಯಾಗಿದ್ದಾರೆ.

ನಮ್ಮೂರಲ್ಲಿ ಒಂದೇ ಇಳುವರಿ ಮಾಡುತ್ತಾರೆ. ಆದರೂ ನಮ್ಮೂರಲ್ಲಿ ಡ್ಯಾಂನಲ್ಲಿ ನೀರಿಲ್ಲ. ಅಲ್ಲಿ ಸಂಬಳವೂ ತುಂಬ ಕಡಿಮೆ. ಆದರೆ ಇಲ್ಲಿ ಕೃಷಿ ಚಟುವಟಿಕೆ ಹೆಚ್ಚಿದೆ. ಆದರಿಂದ ನಮ್ಮ ತಂಡದಿಂದ ಗುತ್ತಿಗೆ ಆಧಾರದಲ್ಲಿ ಕೃಷಿ ಚಟುವಟಿಕೆಯನ್ನು ಪೂರೈಸಿ ಕೊಡುತ್ತೇವೆ.
ನಾಗರಾಜ್ ಕಾರ್ಮಿಕ, ಗಂಗಾವತಿ.

ಕೃಷಿಯಿಂದ ಲಾಭವಿಲ್ಲ ಎನ್ನುವುದು ತಪ್ಪು. ನಾವೇ ಸ್ವತಃ ಗದ್ದೆಯಲ್ಲಿ ಕೆಸರಿನಲ್ಲಿ ಬೆರೆತರೆ ಕೃಷಿಯಲ್ಲಿ ಖಂಡಿತ ಲಾಭವಿದೆ. ಗಂಗಾವತಿಯ ಕಾರ್ಮಿಕರು ಶರವೇಗದ ನಾಟಿಯನ್ನು ಮಾಡುವುದರಿಂದ ಕೃಷಿ ಚಟುವಟಿಕೆಗೆ ಇನ್ನಷ್ಟು ಹೊಸ ಆಯಾಮ ಬಂದಂತಾಗಿದೆ.
ಸುಧಾಕರ್ ಸಾಲ್ಯಾನ್ ಪ್ರಗತಿಪರ ಕೃಷಿಕ

Leave a Reply

Your email address will not be published. Required fields are marked *