ಸಕಲೇಶಪುರ: ನವೆಂಬರ್ ತಿಂಗಳು ಆರಂಭವಾದರೂ ಸಹ ತಾಲೂಕಿನಲ್ಲಿ ಮಳೆ ಸುರಿಯುತ್ತಿರುವುದರಿಂದ ಜನ ಆತಂಕಕ್ಕೊಳಗಾಗಿದ್ದಾರೆ.
ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪರಿಣಾಮ ಗುರುವಾರ ಸಂಜೆ 5 ಗಂಟೆಗೆ ಸರಿಯಾಗಿ ಭರ್ಜರಿ ಮಳೆ ಸುರಿದಿದ್ದು, ಇದರಿಂದಾಗಿ ಪಟ್ಟಣದಲ್ಲಿ ಸಂಪೂರ್ಣ ಕತ್ತಲೆಯ ವಾತಾವರಣ ಉಂಟಾಗಿತ್ತು.
ಗುರುವಾರ ಸಂತೆಯ ದಿನವಾಗಿದ್ದು, ಮಳೆ ಸುರಿದಿದ್ದರಿಂದ ಸಂಜೆಯ ನಂತರ ಸಂತೆಗೆ ಬಂದ ಜನ ಪರದಾಡುವ ಪರಿಸ್ಥಿತಿ ನಿರ್ಮಾಣವಾಯಿತು. ಮಳೆಯಿಂದಾಗಿ ಶಾಲಾ-ಕಾಲೇಜುಗಳಿಗೆ ಹೋದ ಮಕ್ಕಳು ಸಂಜೆ ಮನೆಗೆ ಹಿಂತಿರುಗಲು ಹಾಗೂ ದ್ವಿಚಕ್ರ ವಾಹನಗಳಲ್ಲಿ ಸಂಚರಿಸುವವರು ಪರದಾಡುವಂತಾಯಿತು. ಜನ ರೈನ್‌ಕೋಟ್, ಛತ್ರಿಗಳನ್ನು ಆಶ್ರಯಿಸುವಂತಾಯಿತು. ಮುಂಗಾರಿನಲ್ಲಿ ಸುರಿದ ಅಪಾರ ಮಳೆಯಿಂದಾಗಿ ಕಾಫಿ ಕೊಳೆ ರೋಗದಿಂದ ಶೇ. 40ಕ್ಕೂ ಹೆಚ್ಚು ಉದುರಿದ್ದು ಜತೆಗೆ ಮೆಣಸು ಸಹ ಉದುರಿದೆ. ಏಲಕ್ಕಿ ಬೆಳೆಗಾರರು ಸಹ ಮಳೆಯಿಂದ ತತ್ತರಿಸಿದ್ದಾರೆ. ಇದೀಗ ಅಕ್ಟೋಬರ್ ಮುಗಿದು ನವೆಂಬರ್ ಎರಡನೇ ವಾರಕ್ಕೆ ಕಾಲಿಟ್ಟರೂ ಸಹ ಮಳೆ ಮುಂದುವರಿದಿರುವುದು ಬೆಳೆಗಾರರನ್ನು ಮಾತ್ರವಲ್ಲದೆ ಜನರನ್ನು ಸಹ ಚಿಂತೆಗೀಡುಮಾಡಿದೆ.
ಅರೇಬಿಕಾ ಕಾಫಿ ಇದೀಗ ಅರೇಬಿಕಾ ಕಾಫಿ ಕುಯ್ಲು ಮಾಡುವ ಸಮಯವಾಗಿದ್ದು, ಕಾಫಿ ಕುಯ್ಲು ಮಾಡಿದವರು ಕಣದಲ್ಲಿ ಹರಡಲು ಹಾಕಿದ್ದ ಕಾಫಿಯನ್ನು ಪುನ ಚೀಲಗಳಲ್ಲಿ ತುಂಬಿ ಮುಚ್ಚುವಂತಾಯಿತು.