ಮದ್ದೂರು: ತಾಲೂಕಿನ ಕೊಪ್ಪ ಎನ್‌ಎಸ್‌ಎಲ್ ಸಕ್ಕರೆ ಕಾರ್ಖಾನೆಗೆ ಪ್ರಸಕ್ತ ಸಾಲಿನಲ್ಲಿ ಕಬ್ಬು ಸರಬರಾಜು ಮಾಡಿರುವ ರೈತರಿಗೆ ಬಾಕಿ ಹಣ ಪಾವತಿಸುವಂತೆ ಒತ್ತಾಯಿಸಿ ರೈತ ಸಂಘಟನೆ ಕಾರ್ಯಕರ್ತರು ಕಾರ್ಖಾನೆ ಉಪವ್ಯವಸ್ಥಾಪಕ ಚಂದ್ರಶೇಖರ್‌ಗೆ ಸೋಮವಾರ ಮನವಿ ಸಲ್ಲಿಸಿದರು.
ರೈತ ಮುಖಂಡ ಮುಖಂಡ ಗೊಲ್ಲರದೊಡ್ಡಿ ಅಶೋಕ್ ಮಾತನಾಡಿ, ರೈತರು ಆರ್ಥಿಕ ಸಂಕಷ್ಟದಲ್ಲಿದ್ದು, ಕಬ್ಬು ಪೂರೈಸಿ ಹಲವು ದಿನಗಳೇ ಕಳೆದಿದ್ದರು ಇದುವರೆಗೂ ಹಣ ಪಾವತಿಸದೆ ಕಾರ್ಖಾನೆ ಅಧಿಕಾರಿಗಳು ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದ್ದಾರೆ. ಪ್ರತಿನಿತ್ಯ ರೈತರು ಕಾರ್ಖಾನೆಗೆ ಅಲೆದಾಡುವಂತಹ ಸ್ಥಿತಿ ನಿರ್ಮಾಣವಾಗಿದ್ದು, ಅಧಿಕಾರಿಗಳು ಇಲ್ಲಸಲ್ಲದ ಸಬೂಬು ಹೇಳಿ ರೈತರನ್ನು ಸಂತೈಸುವ ಕೆಲಸಕ್ಕೆ ಮುಂದಾಗುತ್ತಿದ್ದಾರೆ ಎಂದು ದೂರಿದರು.
ಸರ್ಕಾರ ಹಾಗೂ ಜಿಲ್ಲಾಧಿಕಾರಿಗಳ ಆದೇಶದಂತೆ ಕಬ್ಬು ಪೂರೈಸಿದ 15 ದಿನದೊಳಗೆ ಹಣ ಪಾವತಿಸುವಂತೆ ನಿಯಮವಿದೆ. ಆದರೆ ಅಧಿಕಾರಿಗಳು ನಿಯಮವನ್ನು ಗಾಳಿಗೆ ತೂರಿ ರೈತರ ಬಾಕಿ ಹಣ 8.25 ಕೋಟಿ ರೂ. ನೀಡದೆ ಇರುವುದರಿಂದ ಬೇಸಾಯ ಮತ್ತು ಇನ್ನಿತರ ಕಾರ್ಯ ಚಟುವಟಿಕೆಗಳಿಗೆ ತೊಡಕುಂಟಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ರೈತರು ಬೆಳೆದ ಬೆಳೆಗಳಿಗೆ ಸರ್ಕಾರ ವೈಜ್ಞಾನಿಕ ಬೆಲೆ ನಿಗದಿ ಮಾಡದೆ ರೈತರೊಂದಿಗೆ ಚೆಲ್ಲಾಟವಾಡುತ್ತಿದೆ. ಜಿಲ್ಲಾ ಹಾಗೂ ತಾಲೂಕು ಆಡಳಿತ ರೈತರ ನೆರವಿಗೆ ಧಾವಿಸದೆ ನಿರ್ಲಕ್ಷಿಸಿವೆ. ಈ ಸಂಬಂಧ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರೂ ಕಾರ್ಖಾನೆ ಅಧಿಕಾರಿಗಳು ಹಣ ಪಾವತಿ ಸಲು ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಮನವಿ ಸ್ವೀಕರಿಸಿದ ಕಾರ್ಖಾನೆ ಉಪ ವ್ಯವಸ್ಥಾಪಕ ಚಂದ್ರಶೇಖರ್ ಮಾತನಾಡಿ, ರೈತರ ಬಾಕಿ ಹಣವನ್ನು ಹಂತ ಹಂತವಾಗಿ ತಿಂಗಳ ಅಂತ್ಯದಲ್ಲಿ ವಿತರಿಸಲಾಗುವುದೆ ಎಂದು ಭರವಸೆ ನೀಡಿದರು. ಆದರೆ ಇದಕ್ಕೊಪ್ಪದ ರೈತ ಸಂಘದ ಕಾರ್ಯಕರ್ತರು 10 ದಿನಗಳೊಳಗೆ ಹಣ ಪಾವತಿಸಬೇಕು. ಇಲ್ಲವಾದಲ್ಲಿ ಕಾರ್ಖಾನೆ ಎದುರು ಅನಿರ್ದಿಷ್ಟಾವಧಿ ಧರಣಿ ಕೈಗೊಳ್ಳುವುದಾಗಿ ಎಚ್ಚರಿಸಿದರು.
ರೈತ ಮುಖಂಡರಾದ ಗೊಲ್ಲರದೊಡ್ಡಿ ಅಶೋಕ್, ಕುಮಾರ್, ರವಿ, ಶ್ರೀನಿವಾಸ್, ಅಪ್ಪಾಜಿ, ಪ್ರಕಾಶ್ ಇದ್ದರು.