ಪಾಂಡವಪುರ; ಜಮೀನು ವಿಚಾರ ಚರ್ಚಿಸಲು ಸೋಮವಾರ ಆಗಮಿಸಿದ್ದ ರೈತನನ್ನು ಉಪವಿಭಾಗಾಧಿಕಾರಿ ಸೂಚನೆ ಮೇರೆಗೆ ಪೊಲೀಸರು ವಶಕ್ಕೆ ಪಡೆದು ಬಿಡುಗಡೆಗೊಳಿಸಿದ್ದಾರೆ.

ಪಟ್ಟಣದ ತಾಲೂಕು ಆಡಳಿತ ಸೌಧದಲ್ಲಿ ಉಪ ವಿಭಾಗಾಧಿಕಾರಿ ಕೆ.ಆರ್.ಶ್ರೀನಿವಾಸ್ ಅವರನ್ನು ಭೇಟಿ ಮಾಡಿದ ಕೆ.ಆರ್.ಪೇಟೆ ತಾಲೂಕಿನ ರೈತ, ವಕೀಲ ಅಮಿತ್, ತನ್ನ ಜಮೀನಿನ ವಿಚಾರವಾಗಿ ಚರ್ಚೆ ನಡೆಸುತ್ತಿದ್ದರು. ಆ ಸಂದರ್ಭದಲ್ಲಿ ನಾನು ಜಿಲ್ಲಾಧಿಕಾರಿ ಕರೆದಿರುವ ಸಭೆಗೆ ಹೋಗಬೇಕು. ಈಗ ಬಿಡುವಿಲ್ಲ ಎಂದು ಉಪವಿಭಾಗಾಧಿಕಾರಿ ಹೇಳಿದರು. ಆದರೆ ವಕೀಲ ಅಮಿತ್ ಅವರು ನಿಮ್ಮೊಂದಿಗೆ ನನ್ನ ಜಮೀನಿನ ವಿಚಾರವಾಗಿ ಮಾತನಾಡಲು ಕೆ.ಆರ್.ಪೇಟೆಯಿಂದ ಬಂದಿದ್ದೇನೆ ಎಂದು ಪಟ್ಟು ಹಿಡಿದರು. ಇದಕ್ಕೆ ಒಪ್ಪದ ಉಪವಿಭಾಗಾಧಿಕಾರಿ ಕಚೇರಿಯಿಂದ ಹೊರನಡೆದರು. ಆದರೂ ವಕೀಲ ಅಮಿತ್, ಉಪವಿಭಾಗಾಧಿಕಾರಿ ಅವರನ್ನು ಹಿಂಬಾಲಿಸಿ ನನ್ನ ಸಮಸ್ಯೆ ಆಲಿಸಲೇಬೇಕು ಎಂದು ಪಟ್ಟು ಹಿಡಿದರು. ಈ ವೇಳೆ ರೈತರು ಮತ್ತು ಸಾರ್ವಜನಿಕರು ಜಮಾಯಿಸಿ ಅಮಿತ್‌ಗೆ ಬೆಂಬಲವಾಗಿ ನಿಂತರು.
ಇದರಿಂದ ಕುಪಿತರಾದ ಉಪವಿಭಾಗಾಧಿಕಾರಿ ಶ್ರೀನಿವಾಸ್, ಇನ್ಸ್‌ಪೆಕ್ಟರ್ ಅವರನ್ನು ಸ್ಥಳಕ್ಕೆ ಕರೆಸಿ, ಅಮಿತ್ ಅವರನ್ನು ವಶಕ್ಕೆ ಪಡೆಯುವಂತೆ ಸೂಚಿಸಿದರು. ಇನ್ಸ್‌ಪೆಕ್ಟರ್ ವಿವೇಕಾನಂದ ಅವರು ವಕೀಲ ಅಮಿತ್ ಅವರನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದು, ಸುಮಾರು 2 ಗಂಟೆ ಕಾಲ ಕೂರಿಸಿದ್ದರು. ವಿಷಯ ತಿಳಿದ ರೈತಸಂಘದ ತಾಲೂಕು ಅಧ್ಯಕ್ಷ ಕೆನ್ನಾಳು ವಿಜಯಕುಮಾರ್, ಠಾಣೆಗೆ ಹೋಗಿ ಇನ್ಸ್‌ಪೆಕ್ಟರ್ ಅವರೊಂದಿಗೆ ಚರ್ಚಿಸಿ ವಕೀಲ ಅಮಿತ್ ಅವರನ್ನು ಬಿಡುಗಡೆಗೊಳಿಸಿದರು.
ಈ ವೇಳೆ ಮಾತನಾಡಿದ ಕೆನ್ನಾಳು ವಿಜಯಕುಮಾರ್, ಉಪ ವಿಭಾಗಾಧಿಕಾರಿಗೆ ರೈತರ ಹಾಗೂ ಸಾರ್ವಜನಿಕರ ಅಹವಾಲುಗಳನ್ನು ಕೇಳುವ ತಾಳ್ಮೆ ಮತ್ತು ವ್ಯವಧಾನ ಬೇಕು. ಈ ರೀತಿ ವಕೀಲ ಅಮಿತ್ ಅವರನ್ನು ನಡೆಸಿಕೊಂಡಿರುವುದು ಸರಿಯಲ್ಲ. ಉಪ ವಿಭಾಗಾಧಿಕಾರಿ ತಮ್ಮ ವರ್ತನೆಯನ್ನು ಬದಲಾಯಿಸಿಕೊಳ್ಳಬೇಕು ಎಂದು ಒತ್ತಾಯಿಸಿದರು.