chitradurga drought

ಬರದ ಜಿಲ್ಲೇಲಿ ಮುಂದುವರಿದ ರೈತರ ಆತ್ಮಹತ್ಯೆ

ಡಿಪಿಎನ್ ಶ್ರೇಷ್ಠಿ, ಚಿತ್ರದುರ್ಗ: ಸಾಲಮನ್ನಾ, ಬೆಂಬಲ ಬೆಲೆ ಘೋಷಣೆ ಸೇರಿ ವಿವಿಧ ಭರವಸೆ ನೀಡಿದ್ದ ಜನನಾಯಕರ ಕನಸಿನ ಮಾತುಗಳು ಈಡೇರುವ ಮೊದಲೇ ಜಿಲ್ಲೆಯಲ್ಲಿ 14 ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಮನೆಯೊಡೆಯನ ನಂಬಿ ಜೀವನ ನಡೆಸುತ್ತಿದ್ದ ಕುಟುಂಬಗಳ ನೋವು ಹೇಳತೀರದು. ಮತ್ತೆ ಅದೇ ಸಾಲದಶೂಲ, ಸಂಕಷ್ಟಗಳು ಮುಂದುವರಿದಿವೆ.
ನೂರು ವರ್ಷಗಳಲ್ಲಿ 70 ವರ್ಷ ಬರವನ್ನೇ ಹಾಸು ಹೊದ್ದಿರುವ ಜಿಲ್ಲೆಯ ರೈತರು ಭದ್ರಾ ನೀರಿಗಾಗಿ ಕಾದು ಹೈರಾಣಾದರೂ ಹನಿ ನೀರು ದಕ್ಕಿಲ್ಲ. ಈರುಳ್ಳಿ, ಶೇಂಗಾ ವಿವಿಧ ಬೆಳೆಗಳಿಗೆ ನ್ಯಾಯಯುತ ಬೆಲೆ ಸಿಗದೇ ಕಂಗಲಾಗಿದ್ದಾರೆ.

ಸಾಲದ ಹೊರೆಯೂ ಇಳಿಯದೆ, ಪರಿಹಾರವೂ ದೊರೆಯದೆ ಸಂತ್ರಸ್ತ ರೈತ ಕುಟುಂಬಗಳು ಕಣ್ಣೀರಲ್ಲಿ ಕೈತೊಳೆಯುತ್ತಿವೆ. ಬ್ಯಾಂಕ್ ನೋಟಿಸ್ ಭಯದಲ್ಲಿ ಕಾಲ ತಳ್ಳುತ್ತಿವೆ.

ಇನ್ನು ಕೆಲವರು ವಿಧವಾ ವೇತನ, ಮಕ್ಕಳಿಗೆ ಉಚಿತ ಶಿಕ್ಷಣ ಮರೀಚಿಕೆಯಾಗಿದೆ. ದಾಖಲೆಗಳಿಲ್ಲ ಎಂಬ ನೆಪ ಹೇಳಿ ಪರಿಹಾರ ನಿರಾಕರಿಸಲಾಗುತ್ತಿದೆ ಎಂಬ ನೋವು ರೈತರಿಗಿದೆ.

ಹದಿನಾಲ್ಕು ರೈತರ ಆತ್ಮಹತ್ಯೆ: 2018 ನ.2ರ ಅಂತ್ಯಕ್ಕೆ 14 ರೈತರ ಆತ್ಮಹತ್ಯೆ ವರದಿಯಾಗಿವೆ. ಚಳ್ಳಕೆರೆ-2, ಚಿತ್ರದುರ್ಗ-4, ಹಿರಿಯೂರು-1, ಹೊಳಲ್ಕೆರೆ-2, ಹೊಸದುರ್ಗದಲ್ಲಿ ಐವರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅದರಲ್ಲಿ ಆರನ್ನು ತಿರಸ್ಕರಿಸಿ, ಎಂಟು ಕುಟುಂಬಗಳಿಗೆ ಪರಿಹಾರ ತಲುಪಿಸಲಾಗಿದೆ ಎಂದು ಕೃಷಿ ಇಲಾಖೆ ತಿಳಿಸಿದೆ.

ನ.2ರ ನಂತರವೂ ಮೂರ‌್ನಾಲ್ಕು ರೈತರ ಆತ್ಮಹತ್ಯೆ ವರದಿಯಾಗಿವೆ. 2017-19ರಲ್ಲಿ 42 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 35 ರೈತ ಕುಟುಂಬಗಳಿಗೆ ಪರಿಹಾರ ಮಂಜೂರು ಮಾಡಿದ್ದು, 34 ಕುಟುಂಬಗಳಿಗೆ ಪರಿಹಾರದ ಚೆಕ್ ವಿತರಿಸಲಾಗಿದೆ. ಒಂದು ಬಾಕಿ ಇದೆ.

ಡಿಸೆಂಬರ್ 5ರೊಳಗೆ ಪೂರ್ಣ: ಜಿಲ್ಲೆಯಲ್ಲಿ 36559 ರೈತರು ಸಹಕಾರಿ ಸಾಲ ಪಡೆದಿದ್ದಾರೆ. 30 ಸಾವಿರ ರೈತರ ಮಾಹಿತಿ ದಾಖಲಾಗಿದೆ. 77 ಸಾವಿರ ರೈತರು ವಾಣಿಜ್ಯ ಬ್ಯಾಂಕ್‌ಗಳಲ್ಲಿ ಸಾಲ ಪಡೆದಿದ್ದಾರೆ. ಆದರೆ, ಸರ್ಕಾರಕ್ಕೆ ಮಾಹಿತಿ ನೀಡುವಲ್ಲಿ ವಿಳಂಬ ನೀತಿ ಅನುಸರಿಸುತ್ತಿವೆ.

2 ಲಕ್ಷ ರೂ. ವಾಣಿಜ್ಯ ಬ್ಯಾಂಕ್ ಸಾಲ: ರಾಜ್ಯದ ಒಟ್ಟು ಆರು ಸಾವಿರ ಸೊಸೈಟಿಗಳಲ್ಲಿ ಕೃಷಿ ಸಾಲ ಪಡೆದ ಒಟ್ಟು 21.70 ಲಕ್ಷ ರೈತರ ಪೈಕಿ ಅಂದಾಜು 16 ಲಕ್ಷ ರೈತರ ಮಾಹಿತಿ ಕೊಡಲಾಗಿದೆ. ಸಹಕಾರಿ ಸಾಲ ಪಡೆದ ರೈತರ ಒಂದು ಕುಟುಂಬಕ್ಕೆ ಗರಿಷ್ಠ ಒಂದು ಲಕ್ಷ ರೂ. ಸಾಲ ಮನ್ನಾ ಆಗಲಿದೆ. ವಾಣಿಜ್ಯ ಬ್ಯಾಂಕ್‌ಗಳಲ್ಲಿ ಸಾಲ ಪಡೆದ ರೈತರ ಪ್ರತಿ ಕುಟುಂಬಕ್ಕೆ ಗರಿಷ್ಠ 2 ಲಕ್ಷ ರೂ. ವರೆಗೆ ಸಾಲ ಮನ್ನಾ ಆಗಬೇಕಿದೆ.