ಕಾಲುವೆಗೆ ಹರಿಯದ ನೀರು…

ಗುತ್ತಲ: ಕಾಲುವೆ ನೀರು ನಂಬಿ ಕೃಷಿ ಚಟುವಟಿಕೆ ನಡೆಸಬೇಕೆಂದಿದ್ದ ಗುತ್ತಲ ಹೋಬಳಿಯ ಕೋಡಬಾಳ ಗ್ರಾಮದ ರೈತರು ಕಣ್ಣೀರು ಹಾಕುವಂತಾಗಿದೆ. ಇತ್ತ ಜಮೀನು ಕಳೆದುಕೊಂಡಿದ್ದಕ್ಕೆ ಬೆಳೆ ಪರಿಹಾರವೂ ಇಲ್ಲ, ಭೂ ಸ್ವಾಧೀನದ ಪರಿಹಾರವೂ ಸಿಕ್ಕಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.

250 ಕಿ.ಮೀ. ದೂರದ ಗಾಜನೂರ ಡ್ಯಾಂನಿಂದ ಜಮೀನುಗಳಿಗೆ ತುಂಗಾ ನದಿ ನೀರು ಬರುತ್ತದೆ. ಈ ನೀರಿನಿಂದ ಸಮೃದ್ಧ ಬೆಳೆ ಬೆಳೆದು ಬದುಕು ಹಸನಾಗುವುದೆಂದು ಕನಸು ಕಂಡಿದ್ದ ರೈತರು ಈಗ ಹತಾಶರಾಗಿ, ಸಂಕಷ್ಟದಲ್ಲಿ ಜೀವನ ಸಾಗಿಸುವಂತಾಗಿದೆ. ಜಮೀನುಗಳಲ್ಲಿ ಕಾಲುವೆ ನಿರ್ವಣವಾಗಿದೆ. ಇದಕ್ಕಾಗಿ ರೈತರು ಜಮೀನು ಕಳೆದುಕೊಂಡಿದ್ದಾರೆ. ಆದರೆ, ಬೆಳೆ ಪರಿಹಾರ, ಭೂ ಸ್ವಾಧೀನದ ಪರಿಹಾರವನ್ನೂ ಸಮರ್ಪಕವಾಗಿ ವಿತರಿಸಿಲ್ಲ. ‘ಪ್ರತಿ ವರ್ಷವೂ ಕಾಲವೆ ನೀರು ನಂಬಿ ಬೆಳೆ ಬೆಳೆಯುತ್ತಿದ್ದೇವೆ. ಈ ವರ್ಷವೂ ಅಪಾರ ಖರ್ಚು ಮಾಡಿ ಬೆಳೆ ಬೆಳೆದಿದ್ದೇವೆ. ಆದರೆ, ಕಾಲುವೆ ನೀರೂ ಇಲ್ಲ, ಇತ್ತ ಮಳೆಯೂ ಇಲ್ಲ’ ಎಂದು ರೈತರು ಸಂಕಷ್ಟದ ಪರಿಸ್ಥಿತಿಯನ್ನು ವಿವರಿಸಿದ್ದಾರೆ.

ಕೋಡಬಾಳ ಗ್ರಾಮದಲ್ಲಿ ಸುಮಾರು 11,00 ಎಕರೆ ಪ್ರದೇಶಕ್ಕೆ ನೀರುಣಿಸಲು ಜಮೀನು ವಶಪಡಿಸಿಕೊಂಡಿದ್ದು ಕೇವಲ 12 ಎಕರೆ. ಪ್ರಸ್ತುತ 1100 ಎಕರೆ ಪ್ರದೇಶದಲ್ಲಿ ತುಂಗಾ ನೀರಿಲ್ಲದೆ ಬೆಳೆಗಳು ಒಣಗುತ್ತಿದೆ. ಕಾಲುವೆಗೆ ನೀರು ಹರಿದರೆ ರೈತರಿಗೆ ಅನುಕೂಲವಾಗಲಿದೆ. ಆದರೆ, ನೀರು ಮಾತ್ರ ಹರಿಸುತ್ತಿಲ್ಲ. ಕಾಲುವೆಗಳಲ್ಲಿ ಹೂಳು ತುಂಬಿದ್ದು, ನೀರು ಬಂದರೂ ಸರಿಯಾಗಿ ಹರಿಯುವ ಸ್ಥಿತಿ ಇಲ್ಲ. ತುಂಗಾ ಮೇಲ್ದಂಡೆ ಅಧಿಕಾರಿಗಳು ಕಾಲುವೆಗಳಲ್ಲಿ ಬೆಳೆದಿರುವ ಜಾಲಿ ಗಿಡಗಳನ್ನು ತೆರವುಗೊಳಿಸಲು ಮುಂದಾಗಬೇಕಿದೆ. ಇದಕ್ಕೆ ರೈತರ ಸಹಕಾರವೂ ಸಹ ಅಷ್ಟೇ ಮುಖ್ಯವಾಗಿದೆ.

ನಿರಾಶ್ರಿತರ ಪ್ರಮಾಣ ಪತ್ರವನ್ನಾದರೂ ನೀಡಲಿ: ಕಾಲುವೆ ನಿರ್ವಣಕ್ಕಾಗಿ ಜಮೀನು ಕಳೆದುಕೊಂಡವರಿಗೆ ಪರಿಹಾರ ನೀಡುವುದು ವಿಳಂಬವಾದರೂ ಯೋಜನಾ ನಿರಾಶ್ರಿತರ ಪ್ರಮಾಣ ಪತ್ರವನ್ನಾದರೂ ತ್ವರಿತಗತಿಯಲ್ಲಿ ನೀಡಬೇಕು. ಇದರಿಂದ ಜಮೀನು ಕಳೆದುಕೊಂಡ ರೈತರ ಮಕ್ಕಳಿಗೆ ಉದ್ಯೋಗಾವಕಾಶದಲ್ಲಿ ಮೀಸಲಾತಿ ದೊರೆತು ಸರ್ಕಾರಿ ನೌಕರಿ ಸಿಗಲು ಅನುಕೂಲವಾಗುತ್ತದೆ. ಇವರ ಸಮಸ್ಯೆಗೆ ತುಂಗಾ ಮೇಲ್ದಂಡೆ ಅಧಿಕಾರಿಗಳು ಸ್ಪಂದಿಸಬೇಕಿದೆ.

ಯೋಜನೆ ಪ್ರಾರಂಭವಾದಾಗಿನಿಂದ ಒಮ್ಮೆಯೂ ಕಾಲುವೆಯಲ್ಲಿ ನೀರು ಹರಿದಿಲ್ಲ. ನೀರಿಲ್ಲದ ಕಾರಣ ಕಾಲುವೆಗಳು ಹಲವು ಕಡೆ ಒಡೆದಿವೆ. ಹೂಳು ತುಂಬಿದೆ. ಗಿಡ ಗಂಟಿಗಳು ಬೆಳೆದಿವೆ. ಈ ಬಾರಿಯಾದರೂ ನೀರು ಬರಬಹುದೆಂದು ಮೆಕ್ಕೆಜೋಳ ಬೆಳೆದಿದ್ದೆ. ಆದರೆ, ನೀರು ಮಾತ್ರ ಬರಲಿಲ್ಲ. ಇದರಿಂದ ಮೆಕ್ಕೆಜೋಳ ಒಣಗುತ್ತಿದೆ.

| ಮುತ್ತಯ್ಯ ಚಿನ್ನಿಕಟ್ಟಿಮಠ, ರೈತ