ಸಾಲಬಾಧೆಗೆ ರೈತ ಬಲಿ

ಹಾಸನ: ತಾಲೂಕಿನ ಕಲ್ಲಹಳ್ಳಿ ಗ್ರಾಮದಲ್ಲಿ ಸಾಲಬಾಧೆ ತಾಳಲಾರದೆ ವಿಷ ಕುಡಿದು ಕೃಷಿಕರೊಬ್ಬರು ಮಂಗಳವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮರಿಗೌಡ (55) ಮೃತ ರೈತ. ಬೆಳಗ್ಗೆ ಜಮೀನಿಗೆ ತೆರಳಿದ್ದ ಅವರು ಅಲ್ಲಿಯೇ ವಿಷ ಕುಡಿದು ಅಸ್ವಸ್ಥಗೊಂಡಿದ್ದರು. ಅದನ್ನು ಗಮನಿಸಿದ ಸ್ಥಳೀಯರು ತಕ್ಷಣ ಅವರನ್ನು ಹಿಮ್ಸ್ ಆಸ್ಪತ್ರೆಗೆ ದಾಖಲಿಸಿದರು. ಆದರೆ ಮಧ್ಯಾಹ್ನದ ವೇಳೆಗೆ ಕೊನೆಯುಸಿರೆಳೆದರು.

ಶೆಟ್ಟಿಹಳ್ಳಿ ಗ್ರಾಮದ ಕೆನರಾ ಬ್ಯಾಂಕ್ ಶಾಖೆಯಲ್ಲಿ 1.5 ಲಕ್ಷ ರೂ. ಸಾಲ ಹೊಂದಿದ್ದ ಅವರು ಹಲವರಿಂದ ಕೈ ಸಾಲ ಕೂಡ ಪಡೆದಿದ್ದರು. ಮೃತರಿಗೆ ಪತ್ನಿ, ಪುತ್ರ ಇದ್ದಾರೆ. ಬೆಳೆ ನಷ್ಟದಿಂದ ಆರ್ಥಿಕ ಸಂಕಷ್ಟಕ್ಕೀಡಾಗಿದ್ದರು. ಗೊರೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.