ದಿಢೀರ್ ಈರುಳ್ಳಿ ಬೆಲೆ ಕುಸಿತ,ರೈತರ ಪ್ರತಿಭಟನೆ

ಬೆಳಗಾವಿ: ಕೃಷಿ ಉತ್ಪನ್ನ ಮಾರುಕಟ್ಟೆ (ಎಪಿಎಂಸಿ)ಯಲ್ಲಿ ಬುಧವಾರ ನಡೆದ ಈರುಳ್ಳಿ ಹರಾಜು ಪ್ರಕ್ರಿಯೆಯಲ್ಲಿ ಖರೀದಿದಾರರು ದಿಢೀರನೆ ದರ ಕಡಿಮೆ ಮಾಡಿದ್ದರಿಂದ ಆಕ್ರೋಶಗೊಂಡ ರೈತರು ಹರಾಜು ಪ್ರಕ್ರಿಯೆ ಸ್ಥಗಿತಗೊಳಿಸಿದರಲ್ಲದೆ, ಮಾರುಕಟ್ಟೆಯ ಮುಖ್ಯ ಪ್ರವೇಶ ದ್ವಾರಕ್ಕೆ ಬೀಗ ಹಾಕಿ ಪ್ರತಿಭಟನೆ ನಡೆಸಿದರು. ಬಾಗಲಕೋಟೆ, ಬೆಳಗಾವಿ, ವಿಜಯಪುರ ಮತ್ತು ಧಾರವಾಡ ಜಿಲ್ಲೆಯಿಂದ ಬಂದಿದ್ದ ನೂರಾರು ರೈತರು 2 ಗಂಟೆಗಳ ಕಾಲ ಮಾರುಕಟ್ಟೆ ಆವರಣದಲ್ಲಿ ಪ್ರತಿಭಟನೆ ನಡೆಸಿ ತಮ್ಮ ತೀವ್ರ ಅಸಮಾಧಾನ ಹೊರಹಾಕಿದರು.

ಮಹಾರಾಷ್ಟ್ರ ಮತ್ತು ಗೋವಾ ರಾಜ್ಯದಿಂದ ಈರುಳ್ಳಿ ಖರೀದಿಸಲು ಅಧಿಕ ಪ್ರಮಾಣದಲ್ಲಿ ಮಧ್ಯವರ್ತಿಗಳು ಬರುತ್ತಿದ್ದು, ಬುಧವಾರವೂ ನೂರಾರು ಸಂಖ್ಯೆಯಲ್ಲಿ ಇವರು ಮಾರುಕಟ್ಟೆಗೆ ಬಂದಿದ್ದರು. ಮಾರುಕಟ್ಟೆಗೆ ಬಂದ ಈರುಳ್ಳಿ ಪ್ರಮಾಣವನ್ನು ಲೆಕ್ಕ ಹಾಕಿದ ಎಪಿಎಂಸಿ ಮಾರುಕಟ್ಟೆ ಏಜೆಂಟರು ಹರಾಜು ಆರಂಭದಲ್ಲಿಯೇ ಉತ್ತಮ ಈರುಳ್ಳಿಗೆ ದಿಢೀರನೆ 800 ರಿಂದ 1,000 ರೂ. ಕಡಿಮೆ ಮಾಡಿ ಕ್ವಿಂಟಲ್‌ಗೆ ಕನಿಷ್ಠ 580 ರಿಂದ 800 ರೂ. ದರ ನಮೂದಿಸಿದರು. ಖರೀದಿದಾರರು ಉತ್ತಮ ಬೆಲೆ ನೀಡಲು ಹಿಂದೇಟು ಹಾಕಿದರು. ಇದರಿಂದ ಆಕ್ರೋಶಗೊಂಡ ರೈತರು ಹರಾಜು ಪ್ರಕ್ರಿಯೆ ಸ್ಥಗಿತಗೊಳಿಸಿದರು.

ಹುಬ್ಬಳ್ಳಿ, ಬೆಂಗಳೂರು ಮತ್ತು ಮಹಾರಾಷ್ಟ್ರದ ಸೊಲ್ಲಾಪುರ ಮಾರುಕಟ್ಟೆಗಳಲ್ಲಿ ಈರುಳ್ಳಿ ಕ್ವಿಂಟಲ್‌ಗೆ ಕನಿಷ್ಠ 1,240 ರಿಂದ ಗರಿಷ್ಠ 2,340 ರೂ. ದರದಲ್ಲಿ ಮಾರಾಟವಾಗಿದೆ. ಆದರೆ, ಬೆಳಗಾವಿ ಎಪಿಎಂಸಿಯಲ್ಲಿ ಮಾತ್ರ ಏಕಾ ಏಕಿ ಕ್ವಿಂಟಲ್‌ಗೆ 1,000 ರೂ.ದರ ಕಡಿಮೆ ಮಾಡಿ ದರ ನಮೂದಿಸಿದ್ದಾರೆ. ಅಂಗಡಿಗಳಲ್ಲಿ ಸ್ಥಳೀಯ ಏಜೆಂಟರು ತಮ್ಮ ಲಾಭಕ್ಕಾಗಿ ರೈತರಿಂದ ಕಡಿಮೆ ದರದಲ್ಲಿ ಖರೀದಿಸಲು ಮುಂದಾಗಿದ್ದಾರೆ. ಹುಬ್ಬಳ್ಳಿಯ ಮಾರುಕಟ್ಟೆಯ ದರದಲ್ಲಿ ಈರುಳ್ಳಿ ಖರೀದಿ ಹರಾಜು ಪ್ರಕ್ರಿಯೆ ನಡೆಸಿ, ಇಲ್ಲದಿದ್ದರೆ ಮಾರುಕಟ್ಟೆ ಸಂಪೂರ್ಣ ಬಂದ್ ಮಾಡಲಾಗುವುದು ಎಂದು ರೈತರು ಮಾರುಕಟ್ಟೆ ಪ್ರವೇಶ ದ್ವಾರಕ್ಕೆ ಬೀಗ ಹಾಕಿ ಪಟ್ಟು ಹಿಡಿದು ಕುಳಿತುಕೊಂಡರು. ಈ ವೇಳೆ ಕೆಲ ರೈತರು ಟೈಯರ್‌ಗೆ ಬೆಂಕಿ ಹಚ್ಚಿ ಎಪಿಎಂಸಿ ಅಧಿಕಾರಿಗಳು ಮತ್ತು ಏಜೆಂಟರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಬಳಿಕ ಎಪಿಎಂಸಿ ಸಿಬ್ಬಂದಿ, ಪೊಲೀಸ್ ಅಧಿಕಾರಿಗಳು ಮಧ್ಯಪ್ರವೇಶಿಸಿ ರೈತರು ಮತ್ತು ಖರೀದಿದಾರರ ಸಭೆ ನಡೆಸಿದರು.ಉತ್ತರ ಕರ್ನಾಟಕ ಭಾಗದ ಹುಬ್ಬಳ್ಳಿಯ ಮಾರುಕಟ್ಟೆಯಲ್ಲಿ ದರದ ಆಧಾರದ ಮೇಲೆ ಈರುಳ್ಳಿ ಖರೀದಿಸಬೇಕು. ಈರುಳ್ಳಿಯ ಗುಣಮಟ್ಟದ ಆಧಾರದ ಮೇಲೆ ಕ್ವಿಂಟಲ್ ಈರುಳ್ಳಿಗೆ ಕನಿಷ್ಠ 800 ರಿಂದ 1,800 ರೂ. ದರದಲ್ಲಿ ಖರೀದಿಸುವ ಕುರಿತು ನಿರ್ಧರಿಸಲಾಯಿತು. ಬಳಿಕ ಖರೀದಿದಾರರು ಹರಾಜು ಪ್ರಕ್ರಿಯೆ ಮುಂದುವರಿಸಿದರು.

50ಸಾವಿರ ಕ್ವಿಂಟಲ್ ಈರುಳ್ಳಿ ಅವಕ

ಎಪಿಎಂಸಿ ಮಾರುಕಟ್ಟೆಗೆ ಬೆಳಗಾವಿ, ಬಾಗಲಕೋಟೆ, ವಿಜಯಪುರ, ಧಾರವಾಡ ಜಿಲ್ಲೆಗಳಿಂದ 50 ಸಾವಿರ ಕ್ವಿಂಟಲ್ ಈರುಳ್ಳಿ ಬಂದಿದೆ. ಪ್ರತಿ ಶನಿವಾರ ಮತ್ತು ಬುಧವಾರ ಹರಾಜು ಪ್ರಕ್ರಿಯೆಯಲ್ಲಿ ಗರಿಷ್ಠ 20 ಸಾವಿರ ಕ್ವಿಂಟಲ್‌ವರೆಗೆ ಮಾತ್ರ ಈರುಳ್ಳಿ ಸಂಗ್ರಹವಾಗುತ್ತಿತ್ತು. ಈ ಸಲ ಮೂರು ಪಟ್ಟು ಹೆಚ್ಚಿಗೆ ಬಂದಿರುವುದರಿಂದ ದರದಲ್ಲಿ ಏರುಪೇರು ಉಂಟಾಗಿದೆ.

ಈ ಮೊದಲು ಮಾರುಕಟ್ಟೆಯಲ್ಲಿ ಅತ್ಯಂತ ಸಣ್ಣ ಗಾತ್ರದ ಗಡ್ಡೆಗಳಿಗೆ ಕನಿಷ್ಠ 800 ರಿಂದ 1,100 ರೂ. ಮತ್ತು ಉತ್ತಮ ಗುಣಮಟ್ಟದ ಈರುಳ್ಳಿ ಕ್ವಿಂಟಲ್‌ಗೆ 2,500 ರೂ. ದರದಲ್ಲಿ ಮಾರಾಟವಾಗಿದೆ. ಸಾಮಾನ್ಯವಾಗಿ ಈರುಳ್ಳಿ ಖರೀದಿಸುವ ದಲ್ಲಾಳಿಗಳು ಇಲ್ಲಿಂದ ಖರೀದಿಸಿ ಮಹಾರಾಷ್ಟ್ರ, ಗೋವಾ, ಹೈದರಾಬಾದ್, ಚೆನ್ನೈ ಮಾರುಕಟ್ಟೆಗೆ ಕಳುಹಿಸುತ್ತಾರೆ. ಆದರೆ, ಈಗಾಗಲೇ ಖರೀದಿಯಾಗಿರುವ ಈರುಳ್ಳಿ ಮಾರಾಟವಾಗಿಲ್ಲ. ಹೀಗಾಗಿ, ವರ್ತಕರು ಹರಾಜಿನಲ್ಲಿ ಕಡಿಮೆ ದರ ನಮೂದಿಸಿದ್ದಾರೆ ಎಂದು ಎಪಿಎಂಸಿ ಮಾರುಕಟ್ಟೆ ಅಧಿಕಾರಿಗಳು ತಿಳಿಸಿದ್ದಾರೆ.

ಎಪಿಎಂಸಿ ಮಾರುಕಟ್ಟೆಗೆ ಬುಧವಾರ ವಿವಿಧ ಜಿಲ್ಲೆಗಳಿಂದ 50 ಸಾವಿರ ಕ್ವಿಂಟಲ್ ಈರುಳ್ಳಿ ಬಂದಿತ್ತು. ಮಾರಾಟದಲ್ಲಿ ದರ ಏರು ಪೇರು ಉಂಟಾಗಿ ಹೆಚ್ಚಿನ ದರಕ್ಕಾಗಿ ರೈತರು ಪ್ರತಿಭಟನೆ ನಡೆಸಿದ್ದಾರೆ. ಹುಬ್ಬಳ್ಳಿಯ ಮಾರುಕಟ್ಟೆ ದರದಲ್ಲಿ ಈರುಳ್ಳಿ ಖರೀದಿಸಲು ಮತ್ತು ಹರಾಜು ಪ್ರಕ್ರಿಯೆಯಲ್ಲಿ ರೈತರಿಗೆ ಅನ್ಯಾಯ ಮಾಡದಂತೆ ವ್ಯಾಪಾರಿಗಳಿಗೆ ಸೂಚಿಸಲಾಗಿದೆ.

| ಕೆ.ಹೆಚ್.ಗುರುಪ್ರಸಾದ, ಎಪಿಎಂಸಿ ಕಾರ್ಯದರ್ಶಿ

ಆಡಳಿತ ಮಂಡಳಿ ವಿರುದ್ಧ ಆಕ್ರೋಶ: ಬೆಳಗಾವಿ ಎಪಿಎಂಸಿ ಮಾರುಕಟ್ಟೆಯಲ್ಲಿ ಪ್ರತಿ ವಾರ ನಡೆಯುವ ಹರಾಜು ಪ್ರಕ್ರಿಯೆಯಲ್ಲಿ ರೈತರಿಗೆ ಅನ್ಯಾಯವಾಗುತ್ತಿದ್ದರೂ ಎಪಿಎಂಸಿ ಆಡಳಿತ ಮಂಡಳಿ ಅಧ್ಯಕ್ಷ, ಸದಸ್ಯರು ಮಾತ್ರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಮಾರುಕಟ್ಟೆಯಲ್ಲಿ ಏಜೆಂಟರಿಗೆ ನೀಡುವ ಕಮಿಷನ್‌ಗಾಗಿ ಅಧ್ಯಕ್ಷ, ಸದಸ್ಯರು ಕೆಲಸ ಮಾಡುತ್ತಿದ್ದಾರೆ. ರೈತರಗಿಂತ ದಲ್ಲಾಳಿಗಳ ಹಿತವೇ ಎಪಿಎಂಸಿ ಅಧ್ಯಕ್ಷರಿಗೆ ಮುಖ್ಯವಾಗಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.