ನೆರೆ ಪರಿಹಾರಕ್ಕಾಗಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಲೆತ್ನಿಸಿದ ರೈತರು: ಶೀಘ್ರ ಕ್ರಮದ ಭರವಸೆ ನೀಡಿದ ಡಿಸಿಎಂ ಲಕ್ಷ್ಮಣ್ ಸವದಿ

ಬೆಂಗಳೂರು: ನೆರೆ ಹಾವಳಿಯಿಂದ ಸಂಕಷ್ಟಕ್ಕೆ ಸಿಲುಕಿರುವ ರಾಜ್ಯದ ಜನರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪರಿಹಾರ ಕಲ್ಪಿಸಲು ನಿರ್ಲಕ್ಷ್ಯ ವಹಿಸುತ್ತಿವೆ ಎಂದು ಆರೋಪಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ನೂರಾರು ಕಾರ್ಯಕರ್ತರು ಗುರುವಾರ ಬೃಹತ್ ಪ್ರತಿಭಟನೆ ನಡೆಸಿದರು.

ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ನಗರದ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಿಂದ ಗುರುವಾರ ಬೆಳಗ್ಗೆ 11 ಗಂಟೆಗೆ ಪ್ರತಿಭಟನಾ ರ‍್ಯಾಲಿ ಹೊರಟ ರೈತರು, ವಿಧಾನಸೌಧ ಮುತ್ತಿಗೆ ಹಾಕಲು ಮುಂದಾದರು. ಈ ವೇಳೆ ಪೊಲೀಸರು ಫ್ರೀಡಂಪಾರ್ಕ್ ಮುಂಭಾಗದಲ್ಲಿ ಬ್ಯಾರಿಕೇಡ್ ಹಾಕಿ ರೈತರನ್ನು ತಡೆದರು. ರೈತರು ರಸ್ತೆ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಆಗಮಿಸಿ ರೈತರ ಬೇಡಿಕೆಗಳನ್ನು ಆಲಿಸಿದರು.

ಈ ವೇಳೆ, ನೆರೆ ಹಾವಳಿಯಿಂದ ರಾಜ್ಯದಲ್ಲಿ 35 ಸಾವಿರ ಕೋಟಿ ರೂ. ನಷ್ಟವಾಗಿದೆ. ರಾಜ್ಯ ಸರ್ಕಾರ ನೆರೆ ಪರಿಹಾರಕ್ಕಾಗಿ ಸಲ್ಲಿಸಿರುವ ವರದಿಯ ಅರ್ಧದಷ್ಟು ಅನುದಾನವನ್ನೂ ಕೇಂದ್ರ ಸರ್ಕಾರ ಮಂಜೂರು ಮಾಡಿಲ್ಲ. 1,200 ಕೋಟಿ ರೂಗಳಲ್ಲಿ ಜನರಿಗೆ ಪರಿಹಾರ ಸಿಗಲು ಸಾಧ್ಯವೇ ಎಂದು ಪ್ರಶ್ನಿಸಿದರು. ರಾಜ್ಯಕ್ಕೆ ಹೆಚ್ಚಿನ ಅನುದಾನ ಬಿಡುಗಡೆಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಒತ್ತಾಯಿಸಬೇಕು ಎಂದು ಕೋಡಿಹಳ್ಳಿ ಚಂದ್ರಶೇಖರ್ ಆಗ್ರಹಿಸಿದರು.

ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಮಾತನಾಡಿ, ರೈತರ ಬೇಡಿಕೆಗಳನ್ನು ಅಧಿವೇಶನಲ್ಲಿ ಚರ್ಚಿಸಿ ಸರ್ಕಾರದ ಗಮನಕ್ಕೆ ತರುತ್ತೇನೆ. ನಷ್ಟವಾಧರಿಸಿ ಎ, ಬಿ ಮತ್ತು ಸಿ ಎಂದು ವಿಂಗಡಿಸಿ ಜನರಿಗೆ ಪರಿಹಾರ ಕಲ್ಪಿಸಲಾಗುವುದು. ಕುಸಿದು ಬಿದ್ದಿರುವ ಮಣ್ಣಿನ ಮನೆಗಳನ್ನು ಎ ವಿಭಾಗಕ್ಕೆ ಸೇರಿಸಿ ಹೊಸದಾಗಿ ಮನೆ ನಿರ್ಮಿಸಿ ಕೊಡಲಾಗುವುದು. ಬಿರುಕು ಬಿಟ್ಟಿರುವ ಮನೆಗಳ ದುರಸ್ತಿಗೆ 50 ಸಾವಿರ ರೂ. ಕೊಡಲಾಗುವುದು. ಅಧಿವೇಶನದಲ್ಲಿ ಬೆಳೆ ನಷ್ಟದ ಬಗ್ಗೆಯೂ ಚರ್ಚಿಸುತ್ತೇನೆ. ಸರ್ಕಾರ ಜನರ ಸಂಕಷ್ಟವನ್ನು ಮರೆತಿಲ್ಲ. ಎಲ್ಲ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಕೆಲಸ ಮಾಡಲಾಗುತ್ತಿದೆ ಎಂದು ಭರವಸೆ ನೀಡಿದರು.

ಇನ್ನು 15 ದಿನದೊಳಗೆ ನೆರೆ ಸಂತ್ರಸ್ತರಿಗೆ ಸೂಕ್ತ ಪರಿಹಾರ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ರಾಜ್ಯಾದ್ಯಂತ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ರೈತರು ಎಚ್ಚರಿಸಿದರು. ಬಳಿಕ ಪ್ರತಿಭಟನೆಯನ್ನು ಹಿಂಪಡೆದರು.

ಸಂಘದ ರಾಜ್ಯ ಕಾರ್ಯಾಧ್ಯಕ್ಷ ಎಚ್.ಆರ್. ಬಸವರಾಜಪ್ಪ, ಮಂಜುನಾಥ ಗೌಡ ಮೊದಲಾದವರಿದ್ದರು.

 

Leave a Reply

Your email address will not be published. Required fields are marked *