ರೈತರ ಧರಣಿ ಫೆ. 4ರಿಂದ

ವಿಜಯವಾಣಿ ಸುದ್ದಿಜಾಲ ಬ್ಯಾಡಗಿ

ತಾಲೂಕಿನ ಆಣೂರು ಕೆರೆ ಯೋಜನೆ ಜಾರಿಗೊಳಿಸುವಂತೆ ಆಗ್ರಹಿಸಿ ಫೆ. 4ರಿಂದ ತಹಸೀಲ್ದಾರ್ ಕಚೇರಿ ಎದುರು ಅಹೋರಾತ್ರಿ ಧರಣಿ ಹಮಿಕೊಳ್ಳಲಾಗುವುದು ಎಂದು ಹಸಿರು ಸೇನೆ ತಾಲೂಕಾಧ್ಯಕ್ಷ ಗಂಗಣ್ಣ ಎಲಿ ತಿಳಿಸಿದರು.

ಪಟ್ಟಣದ ಸಹಕಾರಿ ಸಂಘದ ಕಾರ್ಯಾಲಯದಲ್ಲಿ ಬುಧವಾರ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ತುಂಗಭದ್ರಾ ಎಡದಂಡೆ ಕಾಲುವೆ ಯೋಜನೆ ರೂಪಿಸುವಾಗ ಬ್ಯಾಡಗಿ ತಾಲೂಕನ್ನು ಕಡೆಗಣಿಸಲಾಗಿದೆ. ಆಗಿನ ಸರ್ಕಾರ ತಾಲೂಕಿನ ಲಕ್ಷಾಂತರ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಯೋಜನೆ ತಪ್ಪಿಸಿದೆ. ಆದರೆ, ಈಗ ರೈತರು ಜಾಗೃತರಾಗಿದ್ದು, ರಾಜಕಾರಣಿಗಳ ಮೋಸದಾಟ ಹಾಗೂ ಮೂಗಿಗೆ ತುಪ್ಪ ಒರೆಸುವ ತಂತ್ರಕ್ಕೆ ಬಲಿಯಾಗುವುದಿಲ್ಲ ಎಂದರು.

ಕೃಷಿಗೆ ನೀರಾವರಿ ಪಡೆದುಕೊಳ್ಳುವುದು ರೈತರ ಹಕ್ಕು, ಜಾರಿಗೊಳಿಸುವುದು ಸರ್ಕಾರದ ಕರ್ತವ್ಯವಾಗಿದೆ. ಈ ಹಿಂದೆ ಅಸುಂಡಿ ಕೆರೆ ಅಭಿವೃದ್ಧಿಗೆ ಚಾಲನೆ ನೀಡುವಾಗ ಅಧಿಕಾರಿಗಳ ತಪ್ಪು ಮಾಹಿತಿ, ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯಿಂದ ಸುಮಾರು 25 ಗ್ರಾಮಗಳ ರೈತರು ನೀರಿಲ್ಲದೆ ಪರದಾಡುವಂತಾಗಿದೆ. ಬಜೆಟ್​ನಲ್ಲಿ ಆಣೂರು ಕೆರೆಗೆ ತುಂಗಭದ್ರಾ ನದಿಯಿಂದ ನೀರು ತುಂಬಿಸುವ ಯೋಜನೆ ಘೊಷಣೆಗೆ ಒತ್ತಾಯಿಸಿ ಫೆ. 4ರಂದು ಅನಿರ್ದಿಷ್ಟಾವಧಿ ಅಹೋರಾತ್ರಿ ಧರಣಿ ಆರಂಭಿಸಲಾಗುವುದು ಎಂದರು.

ರೈತ ಮುಖಂಡ ಕಿರಣಕುಮಾರ ಗಡಿಗೋಳ ಮಾತನಾಡಿ, ತುಂಗಭದ್ರಾ ನದಿಯಲ್ಲಿ ಸಾಕಷ್ಟು ನೀರಿನ ಹರಿವಿದ್ದರೂ ಕೆಲಪಟ್ಟಭದ್ರ ರಾಜಕಾರಣಿಗಳ

ಹಿತಾಸಕ್ತಿ ಯಿಂದ ತಾಲೂಕಿಗೆ ನೀರಾವರಿ ಯೋಜನೆ ತಪ್ಪಿದೆ. ಆಣೂರು, ನಂದಿಹಳ್ಳಿ, ಬನ್ನಿಹಟ್ಟಿ, ಮಾಸಣಗಿ, ಶಿಡೇನೂರು, ಅಂಗರಗಟ್ಟಿ ಸೇರಿ ಸುಮಾರು 25 ಗ್ರಾಮಸ್ಥರು ಕುಡಿಯುವ ನೀರಿಗೆ ಪರಿತಪಿಸುವಂತಾಗಿದೆ. 700-800 ಅಡಿ ಕೊಳವೆ ಬಾವಿ ಕೊರೆಸಿದರೂ ಹನಿ ನೀರು ಲಭ್ಯವಾಗುತ್ತಿಲ್ಲ. ಈಗ ರೈತರು ಲಕ್ಷಗಟ್ಟಲೇ ಸಾಲ ಮಾಡಿ ಬೀಜೋತ್ಪಾದನೆಯಲ್ಲಿ ತೊಡಗಿದ್ದು, ನೀರು ಬತ್ತಿದ ಪರಿಣಾಮ ಟ್ಯಾಂಕರ್ ಮೂಲಕ ನೀರುಣಿಸುವಂತಾಗಿದೆ ಎಂದರು.

ಪಿಎಲ್​ಡಿ ಬ್ಯಾಂಕ್ ಅಧ್ಯಕ್ಷ ಶಿವಯೋಗಿ ಶಿರೂರು ಮಾತನಾಡಿ, ಆಣೂರು ಕೆರೆ ಯೋಜನೆ ಹತ್ತು ವರ್ಷಗಳ ಹಿಂದೆ ಜಾರಿಯಾಗಬೇಕಿತ್ತು. ಆದರೆ, ಜನಪ್ರತಿ ನಿಧಿಗಳ ರೈತರ ಮೇಲಿನ ನಿರ್ಲಕ್ಷ್ಯದಿಂದ ಆಗಿಲ್ಲ. ನಮಗೆ ನೀರು ಬೇಕಿದ್ದು ಎಲ್ಲ ರೈತರು ಪಕ್ಷಾತೀತವಾಗಿ ಹೋರಾಡುತ್ತೇವೆ. ನಮ್ಮೊಂದಿಗೆ ಗ್ರಾ.ಪಂ., ತಾ.ಪಂ., ಜಿ.ಪಂ. ಸದಸ್ಯರು ಕೈಜೋಡಿಸಲಿದ್ದಾರೆ. ಯಾವುದೇ ಕಾರಣಕ್ಕೂ ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ರೈತರ ಹಿತಕಾಯಲು ಬದ್ಧ ಎಂದರು.

ಚಿದಾನಂದ ಬಡ್ಡಿಯವರ, ಪ್ರವೀಣ ಹೊಸಗೌಡ್ರ, ಸಿದ್ದನಗೌಡ್ರ ಪಾಟೀಲ, ಮಲ್ಲಪ್ಪ ಕೊಪ್ಪದ, ಕೊಟೇಪ್ಪ ಚನ್ನಳ್ಳಿ, ಶಿವಯೋಗಿ ಎಲಿಗಾರ, ವೀರನಗೌಡ್ರ ಪಾಟೀಲ, ಬಸಣ್ಣ ಬನ್ನಿಹಟ್ಟಿ, ಮಹಾದೇವಪ್ಪ ಶಿಡೇನೂರು, ಮಲಕಪ್ಪ ಅಳೀಕಟ್ಟಿ, ಚಿಕ್ಕಪ್ಪ ಛತ್ರದ, ಡಾ.ಕೆ.ವಿ.ದೊಡ್ಡಗೌಡ್ರ, ಮೌನೇಶ ಕಮ್ಮಾರ, ಮಲ್ಲೇಶ ಡಂಬಳ ಇತರರಿದ್ದರು.

ಅಹೋರಾತ್ರಿ ಧರಣಿಗೆ 25 ಗ್ರಾಮಗಳಿಂದ ಸುಮಾರು 3 ಸಾವಿರ ರೈತರು ಪಾಲ್ಗೊಳ್ಳಲಿದ್ದು, ಮುಖ್ಯಮಂತ್ರಿ, ಜಿಲ್ಲಾ ಉಸ್ತುವಾರಿ ಸಚಿವ, ಜಿಲ್ಲಾಧಿಕಾರಿ ಸೇರಿ ನೀರಾವರಿ ಅಧಿಕಾರಿಗಳು ರೈತರಿಗೆ ಮೋಸವೆಸಗಿದರೆ ಸುಮ್ಮನಿರುವುದಿಲ್ಲ. ರೈತ ಸಂಘ ಸರ್ಕಾರದ ವ್ಯವಸ್ಥೆಯ ವಿರುದ್ಧ ಹೋರಾಟಕ್ಕೆ ಸಿದ್ಧವಿದೆ. ಸರ್ಕಾರ ಕೊಟ್ಟ ಮಾತು ಉಳಿಸಿಕೊಳ್ಳಬೇಕು. ಬಜೆಟ್​ನಲ್ಲಿ ಘೊಷಣೆ ಮಾಡದಿದ್ದಲ್ಲಿ ಹೋರಾಟ ತೀವ್ರವಾಗಲಿದೆ.

| ಕಿರಣಕುಮಾರ ಗಡಿಗೋಳ ರೈತ ಮುಖಂಡ