ರಾಣೆಬೆನ್ನೂರ, ಹಿರೇಕೆರೂರಲ್ಲಿ ರೈತರಿಂದ ಪ್ರತಿಭಟನೆ

ರಾಣೆಬೆನ್ನೂರ: ಹೋರಾಟ ನಿರತ ರೈತರನ್ನು ದರೋಡೆಕೋರರು ಎಂದ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಹೇಳಿಕೆ ಖಂಡಿಸಿ ಕರ್ನಾಟಕ ರೈತ ಸಂಘದ ವತಿಯಿಂದ ಸೋಮವಾರ ನಗರದ ಕೋರ್ಟ್ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.

ರೈತ ಸಂಘದ ಜಿಲ್ಲಾಧ್ಯಕ್ಷ ಈರಣ್ಣ ಎನ್. ಹಲಗೇರಿ ಮಾತನಾಡಿ, ಬೆಳಗಾವಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಕಬ್ಬು ಬೆಳೆಗಾರರು ಹಾಗೂ ರೈತರ ಬಗೆಗೆ ಸಿಎಂ ಕುಮಾರಸ್ವಾಮಿ ಅವರು ಅವಹೇಳನಕಾರಿಯಾಗಿ ಮಾತನಾಡಿರುವುದು ಸರಿಯಲ್ಲ. ಅವರ ಹೇಳಿಕೆ ಖಂಡನೀಯ. ಕಬ್ಬು ಬೆಳೆಗಾರರ ಸಮಸ್ಯೆಯನ್ನು ಪರಿಹರಿಸಲು ರಾಜ್ಯ ಸರ್ಕಾರ ಮುಂದಾಗಬೇಕು ಎಂದು ಆಗ್ರಹಿಸಿದರು.

ರೈತ ಸಂಘದ ತಾಲೂಕು ಅಧ್ಯಕ್ಷ ಹನುಮಂತಪ್ಪ ಕಬ್ಬಾರ ಮಾತನಾಡಿ, ರಾಜ್ಯ ಸರ್ಕಾರ ರೈತರು ಮತ್ತು ಉತ್ತರ ಕರ್ನಾಟಕವನ್ನು ಮಲತಾಯಿ ಧೋರಣೆಯಿಂದ ನೋಡುತ್ತಿದೆ. ಪ್ರತಿಭಟನಾನಿರತ ರೈತರನ್ನು ದರೋಡೆಕೋರರು ಎನ್ನುವ ಮುಖ್ಯಮಂತ್ರಿ ಹೇಳಿಕೆ ಉಡಾಳತನದಿಂದ ಕೂಡಿದೆ. ರೈತರು ಮನಸ್ಸು ಮಾಡಿದರೆ ಸರ್ಕಾರವನ್ನು 24 ಗಂಟೆಯೊಳಗೆ ಉರುಳಿಸುವ ಶಕ್ತಿ ಹೊಂದಿದ್ದಾರೆ. ರೈತರ ಬಗೆಗೆ ಇಲ್ಲಸಲ್ಲದ ಆರೋಪ ಮಾಡುವುದನ್ನು ಬಿಟ್ಟು ಸಮಸ್ಯೆಗಳಿಗೆ ಸ್ಪಂದಿಸುವ ಹೊಣೆಗಾರಿಕೆ ಸರ್ಕಾರದ ಮೇಲಿದೆ ಎಂದರು.

ಕೋರ್ಟ್ ವೃತ್ತದಲ್ಲಿ ಪ್ರತಿಭಟನೆ ನಡೆಸಿ, ರಾಜ್ಯ ಸರ್ಕಾರದ ವಿರುದ್ಧ ಘೊಷಣೆ ಕೂಗಿದ ರೈತರು, ನಂತರ ತಹಸೀಲ್ದಾರ್ ಸಿ.ಎಸ್. ಕುಲಕರ್ಣಿ ಅವರ ಮುಖೇನ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ರೈತ ಮುಖಂಡರಾದ ಸುರೇಶ ಮಲ್ಲಾಪುರ, ಬಸವರಾಜ ಹಲಗೇರಿ, ಹನುಮಂತಪ್ಪ ಚಾಚಣ್ಣನವರ, ಹನುಮಂತಗೌಡ ಮುದಿಗೌಡ್ರ, ನಿಂಗಪ್ಪ ನಿಂಬಣ್ಣನವರ, ಪ್ರಕಾಶ ಲಮಾಣಿ, ನಾಗೇಂದ್ರಪ್ಪ ಮಾಯಾಚಾರಿ, ಕುಬೇರಪ್ಪ ಲಮಾಣಿ, ಲಕ್ಷ್ಮಣ ಲಮಾಣಿ, ತೇಜಪ್ಪಲಮಾಣಿ, ಮಹಾಲಿಂಗಪ್ಪ ಲಮಾಣಿ ಮತ್ತಿತರರು ಉಪಸ್ಥಿತರಿದ್ದರು.

ಬೆಂಬಲ ಬೆಲೆಯಡಿ ಬೆಳೆ ಖರೀದಿಸಿ

ಹಿರೇಕೆರೂರ: ಕೇಂದ್ರ ಸರ್ಕಾರದಿಂದ ಘೊಷಣೆಯಾದ ಬೆಂಬಲ ಬೆಲೆಯಡಿ ರಾಜ್ಯ ಸರ್ಕಾರ ರೈತರ ಬೆಳೆಗಳನ್ನು ಖರೀದಿಸುವುದು ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ತಾಲೂಕು ಉತ್ತರ ಕರ್ನಾಟಕ ಪ್ರದೇಶ ರೈತ ಹಾಗೂ ರೈತ ಕಾರ್ವಿುಕ ಸಂಘದಿಂದ ಸೋಮವಾರ ಪಟ್ಟಣದ ತಹಸೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.

ರೈತ ಸಂಘದ ರಾಜ್ಯಾಧ್ಯಕ್ಷ ಬಸವರಾಜ ಬೇವಿನಹಳ್ಳಿ ಮಾತನಾಡಿ, ರಾಷ್ಟ್ರೀಕೃತ ಬ್ಯಾಂಕ್​ನಲ್ಲಿ ಸಾಲಮನ್ನಾ ಮಾಡುವಾಗ ಕಟಬಾಕಿದಾರರು ಮತ್ತು ಚಾಲ್ತಿ ಸಾಲಗಾರರು ಎಂದು ಭೇದ ಮಾಡದೇ ಎಲ್ಲ ರೈತರ ತಲಾ ಎರಡು ಲಕ್ಷ ರೂ.ವರೆಗಿನ ಸಾಲ ಮನ್ನಾ ಮಾಡಬೇಕು. ರಟ್ಟಿಹಳ್ಳಿ ತಾಲೂಕು ಆರಂಭಗೊಂಡು 8 ತಿಂಗಳಾಗಿದ್ದು, ವಿವಿಧ ಇಲಾಖೆಗಳ ಕಾರ್ಯಾರಂಭ ಆಗಬೇಕು. ತುಂಗಾ ಮೇಲ್ದಂಡೆ ಯೋಜನೆಯ ಉಪಕಾಲುವೆ ನಿರ್ವಿುಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ರಾಜ್ಯ ಉಪಾಧ್ಯಕ್ಷ ಪರಮೇಶಪ್ಪ ಹಲಗೇರಿ, ಜಿಲ್ಲಾಧ್ಯಕ್ಷ ಸಂಜೀವ ಮಡಿವಾಳರ ಮಾತನಾಡಿದರು. ಶಿರಸ್ತೇದಾರ ವಿಷ್ಣು ಬೆಂಡಲಗಟ್ಟಿ ಅವರಿಗೆ ಮನವಿ ಸಲ್ಲಿಸಲಾಯಿತು. ತಾ.ಪಂ. ಮಾಜಿ ಸದಸ್ಯೆ ರೂಪಾ ಆಡೂರ, ಪ್ರಕಾಶ ಅಂಗಡಿ, ಲೊಕೇಶ ಕಡೇಮನಿ, ಸೋಮಶೇಖರಪ್ಪ ರೆಡ್ಡಿ, ಬಸವರಾಜ ಕೆಳಗಿನಮನಿ, ಆಂಜನೇಯ ತಳವಾರ, ಬಸವರಾಜಯ್ಯ ಮಠದ, ಮಲ್ಲನಗೌಡ ಸೊರಟೂರ, ಆನಂದಪ್ಪ ಹಾದಿಮನಿ, ವೀರಪ್ಪ ಕಟ್ಟಿಮನಿ, ಇತರರು ಇದ್ದರು.