ಧಾರವಾಡ ರೈತರ ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತರಿ, ರೈತರ ಕೃಷಿ ಸಾಲ ಮನ್ನಾ ಮತ್ತಿತರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತ, ಕಾರ್ಮಿಕ, ದಲಿತ, ವಿದ್ಯಾರ್ಥಿ, ಯುವಜನ, ಮಹಿಳಾ ಮತ್ತು ಪ್ರಗತಿಪರ ಸಂಟನೆಗಳ ಸಂಯುಕ್ತ ಹೋರಾಟ- ಕರ್ನಾಟಕ ವತಿಯಿಂದ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಲಾಯಿತು.
ಐತಿಹಾಸಿಕ ದೆಹಲಿ ರೈತ ಹೋರಾಟದ ವಾಪಸಾತಿ ಸಂದರ್ಭದಲ್ಲಿ ನೀಡಿದ್ದ ಲಿಖಿತ ಭರವಸೆಗಳನ್ನು ಈಡೇರಿಸಲು ಆಗ್ರಹಿಸಿ ಜಗಜಿತ್ ಸಿಂಗ್ ದಲ್ಲೇವಾಲ ಅವರು ದೆಹಲಿ ಗಡಿಯಲ್ಲಿ ಅಮರಣಾಂತ ಉಪವಾಸ ಕುಳಿತಿದ್ದಾರೆ. ತೀವ್ರ ನಿತ್ರಾಣವಾಗಿರುವ ಹಿರಿಯ ರೈತ ನಾಯಕನ ಉಳಿಸಲು ಕೇಂದ್ರ ಸರ್ಕಾರ ತಕ್ಷಣ ಮಧ್ಯಪ್ರವೇಶಿಸಿ ಸಂಯುಕ್ತ ಕಿಸಾನ್ ಮೋರ್ಚಾ ಜತೆ ಮಾತುಕತೆ ನಡೆಸಬೇಕು. ವಿದ್ಯುತ್ ಖಾಸಗೀಕರಣ ಹಾಗೂ ಪಂಪ್‌ಸೆಟ್ ಮೀಟರೀಕರಣವನ್ನು ನಿಲ್ಲಿಸಬೇಕು. 60 ವರ್ಷ ಮೇಲ್ಪಟ್ಟ ಕೃಷಿಕರಿಗೆ 5000 ರೂಪಾಯಿ ಮಾಸಿಕ ಪಿಂಚಣಿ ನೀಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಗಂಗಾಧರ ಬಡಿಗೇರ, ಎಸ್.ಆರ್. ಹಿರೇಮಠ, ಬಿ.ಐ. ಈಳಿಗೇರ, ಶಂಕರ ಅಂಬಲಿ, ವೀರಣ್ಣ ಬಳಿಗೇರ, ರವಿ ವಡ್ಡರ, ರವಿರಾಜ ಕಂಬಳಿ, ಶಿವಾಜಿ ಸಾವಂತ, ಲಕ್ಷ್ಮಣ ಬಕ್ಕಾಯಿ, ಎಸ್.ಜಿ. ಸಿಂದೋಗಿ, ಲಕ್ಷ್ಮಣ ದೊಡಮನಿ, ನಾಗಪ್ಪ ಉಂಡಿ, ಭುವನಾ, ಲಕ್ಷ್ಮಣ ಜಡಗನ್ನವರ, ಹನುಮೇಶ ಹುಡೇದ, ಶರಣು ಗೋನವಾರ, ದೀಪಾ ಧಾರವಾಡ, ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.