ಮದ್ದೂರು: ಹೊಸದಾಗಿ ನಿರ್ಮಾಣ ಮಾಡಿರುವ ಮನೆಗೆ ಗ್ರಾಮ ಪಂಚಾಯಿತಿ ಅಧಿಕಾರಿಗಳು ಕುಡಿಯುವ ನೀರಿನ ಸಂಪರ್ಕ ಕಲ್ಲಿಸಿಲ್ಲ ಎಂದು ಆರೋಪಿಸಿ ರೈತನೊಬ್ಬ ಕೆಸ್ತೂರು ಗ್ರಾಪಂ ಕಚೇರಿ ಎದುರು ಎತ್ತಿನಗಾಡಿ ಹಾಗೂ ಎತ್ತುಗಳನ್ನು ತಂದು ಸೋಮವಾರ ಪ್ರತಿಭಟನೆ ನಡೆಸಿದರು.
ಕೆಸ್ತೂರು ಗ್ರಾಪಂ ವ್ಯಾಪ್ತಿಯ ಅಡಗನಹಳ್ಳಿ ಗ್ರಾಮದ ರೈತ ಸತೀಶ್ ಮಾತನಾಡಿ, ಅಡಗನಹಳ್ಳಿ ಗ್ರಾಮದಲ್ಲಿ ನಾನು ಹೊಸದಾಗಿ ನಿರ್ಮಿಸಿದ ಮನೆಗೆ ಕುಡಿಸುುವ ನೀರಿನ ಸೌಲಭ್ಯ ಕಲ್ಪಿಸುವಂತೆ ಪಿಡಿಒಗೆ ಹಲವಾರು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಆರೋಪಿಸಿದರು.
ಶೀಘ್ರವಾಗಿ ನನ್ನ ಮನೆಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸದೆ ಹೋದರೆ ಪಂಚಾಯಿತಿ ಮುಂದೆ ಅನಿರ್ದಿಷ್ಟಾವಧಿ ಮುಷ್ಕರ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಇನ್ನೆರಡು ದಿನದಲ್ಲಿ ಸಮಸ್ಯೆ ಬಗೆಹರಿಸುವುದಾಗಿ ತಿಳಿಸಿದ ನಂತರ ಪ್ರತಿಭಟನೆ ಕೈ ಬಿಟ್ಟರು.