More

  ರೈತರ ಪ್ರತಿಭಟನೆ ಸದ್ಯ ಬಗೆಹರಿಯದ ಕಗ್ಗಂಟು; ಕಾಯ್ದೆ ವಾಪಸ್ ಪಡೆಯಲು ಪಟ್ಟು, 9ರಂದು ಮತ್ತೆ ಸಭೆ

  ನವದೆಹಲಿ: ಹೊಸ ಕೃಷಿ ಕಾನೂನುಗಳನ್ನು ವಿರೋಧಿಸಿ 30ಕ್ಕಿಂತಲೂ ಹೆಚ್ಚು ರೈತ ಸಂಘಟನೆಗಳು ನಡೆಸುತ್ತಿರುವ ಪ್ರತಿಭಟನೆ ಸದ್ಯಕ್ಕೆ ಅಂತ್ಯವಾಗುವ ಲಕ್ಷಣ ಕಾಣುತ್ತಿಲ್ಲ. ದೆಹಲಿಯ ವಿಜ್ಞಾನ ಭವನದಲ್ಲಿ ರೈತರು ಮತ್ತು ಕೇಂದ್ರ ಸರ್ಕಾರದ ಪ್ರತಿನಿಧಿಗಳ ಜತೆಗೆ ನಡೆದ ಐದನೇ ಸುತ್ತಿನ ಮಾತುಕತೆಯೂ ಅಪೂರ್ಣಗೊಂಡಿದ್ದು, ಕಾನೂನು ರದ್ದಾಗಲೇಬೇಕು ಎಂಬ ಪಟ್ಟನ್ನು ಸಡಿಲಿಸಲು ರೈತರು ಒಪ್ಪಿಲ್ಲ. ಈ ಹಿನ್ನೆಲೆಯಲ್ಲಿ, ಡಿಸೆಂಬರ್ 9ರಂದು ಮುಂದಿನ ಸಭೆ ನಡೆಸಲು ತೀರ್ವನಿಸಲಾಗಿದೆ. ಸಭೆಯಲ್ಲಿ ಏನೇನು ಚರ್ಚೆ ಮಾಡಲಾಗುವುದು ಎಂಬ ಬಗ್ಗೆ ಕೇಂದ್ರ ಸರ್ಕಾರ ನಮಗೆ ಪ್ರಸ್ತಾವನೆ ಕಳುಹಿಸಿಕೊಡಲಿದೆ. ಅದನ್ನು ಪರಿಶೀಲಿಸಿ ಸಭೆಯಲ್ಲಿ ಪಾಲ್ಗೊಳ್ಳಬೇಕೋ ಬೇಡವೋ ಎಂಬ ಬಗ್ಗೆ ನಿರ್ಧರಿಸಲಾಗುವುದು ಎಂದು ಸಭೆಯಿಂದ ಹೊರಬಂದ ಬಳಿಕ ರೈತ ಮುಖಂಡರು ಮಾಹಿತಿ ನೀಡಿದ್ದಾರೆ.

  ರೈತರು ಸೂಚಿಸಿರುವ ಅಂಶಗಳನ್ನು ನಾವು ಆದ್ಯತೆಗೆ ತೆಗೆದುಕೊಂಡಿದ್ದೇವೆ ಮತ್ತು ಕಾನೂನಿನಲ್ಲಿ ತಿದ್ದುಪಡಿ ಮಾಡಲಿದ್ದೇವೆ ಎಂದು ಕೇಂದ್ರ ಹೇಳಿದರೂ, ರೈತರು ಮಾತ್ರ ಇಡೀ ಕಾನೂನು ರದ್ದಾಗಬೇಕು ಎನ್ನುತ್ತಿರುವುದರಿಂದ ಈ ಬಿಕ್ಕಟ್ಟು ಮುಂದಿನ ಸಭೆಯಲ್ಲಿ ಅಂತ್ಯವಾಗುವುದು ಅನುಮಾನ ಎಂದು ಹೇಳಲಾಗುತ್ತಿದೆ. ಈ ಮಧ್ಯೆ, ಡಿ. 8ರಂದು ಭಾರತ ಬಂದ್ ನಡೆಸಲು ರೈತರು ಮುಂದಾಗುವುದು ಬಹುತೇಕ ಖಚಿತವಾಗಿದೆ. ನೂತನ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸಿದರೆ ಮಾತ್ರ ಪ್ರತಿಭಟನೆ ಹಿಂಪಡೆಯುತ್ತೇವೆ ಎಂದು ಅಖಿಲ ಭಾರತ ಕಿಸಾನ್ ಸಭಾ ಹೇಳಿದೆ. ಈಗಾಗಲೇ ಬೇರೆ ಬೇರೆ ರಾಜ್ಯಗಳಿಂದ ರೈತರು ದೆಹಲಿ, ಹರಿಯಾಣ, ಉತ್ತರ ಪ್ರದೇಶ ಗಡಿಭಾಗದತ್ತ ಬರಲು ಶುರು ಮಾಡಿದ್ದು ಮುಂದಿನ ದಿನಗಳಲ್ಲಿ ರೈತ ಹೋರಾಟ ಮತ್ತಷ್ಟು ತೀವ್ರ ಸ್ವರೂಪ ಪಡೆದುಕೊಳ್ಳುವ ಸಾಧ್ಯತೆಯಿದೆ.

  ಸಭೆಯಲ್ಲಿ ಮೌನವ್ರತ: ಕೃಷಿ ಕಾನೂನು ರದ್ದುಗೊಳಿಸುತ್ತೀರೋ ಇಲ್ಲವೋ ಎಂಬುದು ಸಭೆಯಲ್ಲಿ ರೈತರ ಪ್ರಶ್ನೆಯಾಗಿತ್ತು. ಇದಕ್ಕೆ ಕೇಂದ್ರದಿಂದ ಸಕಾರಾತ್ಮಕ ಉತ್ತರ ಸಿಗದ ಹಿನ್ನೆಲೆಯಲ್ಲಿ ರೈತರ ಮುಖಂಡರು ಅಲ್ಲೇ ಮೌನ ಪ್ರತಿಭಟನೆ ನಡೆಸಲು ಮುಂದಾಗಿದ್ದರು. ಕೇಂದ್ರದ ಪ್ರತಿ ಮಾತಿಗೂ ಹೌದು ಅಥವಾ ಇಲ್ಲ ಎಂಬುದಾಗಿ ಪ್ಲೇಕಾರ್ಡ್​ಗಳ ಮೂಲಕವಷ್ಟೇ ಉತ್ತರ ನೀಡಿದರು. ಸಭೆಯಲ್ಲಿ ಕೇಂದ್ರದ ಧೋರಣೆಗೆ ಆಕ್ರೋಶಗೊಂಡ ಕೆಲ ರೈತ ಮುಖಂಡರು ಸಭಾತ್ಯಾಗ ಮಾಡುವುದಾಗಿ ಬೆದರಿಕೆ ಹಾಕಿದರು. ತಕ್ಷಣವೇ ಅವರನ್ನು ಸಮಾಧಾನಪಡಿಸಿದ ಕೇಂದ್ರ ಸಚಿವರು, ಕೂಳೆ ಸುಡುವ ರೈತರ ವಿರುದ್ಧ ಹಾಗೂ ಪ್ರತಿಭಟನೆ ನಡೆಸಿದ ರೈತ ಚಳವಳಿಗಾರರ ವಿರುದ್ಧ ಹಾಕಲಾಗಿರುವ ಕೇಸುಗಳನ್ನು ಹಿಂಪಡೆಯುವುದಾಗಿ ಭರವಸೆ ನೀಡಿದರು. ನಮ್ಮಲ್ಲಿ ಒಂದು ವರ್ಷಕ್ಕಾಗುವಷ್ಟು ಆಹಾರ ಸಾಮಗ್ರಿಗಳಿದೆ. ಕಳೆದ ಹಲವಾರು ದಿನಗಳಿಂದ ನಾವು ರಸ್ತೆಯಲ್ಲಿದ್ದೇವೆ. ಅಲ್ಲೇ ಇರಬೇಕೆಂದು ಸರ್ಕಾರ ಬಯಸಿದರೆ, ಯಾವುದೇ ತೊಂದರೆ ಇಲ್ಲ. ಪ್ರತಿಭಟನಾ ಸ್ಥಳದಲ್ಲಿ ನಾವು ಏನು ಮಾಡುತ್ತಿದ್ದೇವೆಂದು ಗುಪ್ತಚರ ಇಲಾಖೆ ನಿಮಗೆ ತಿಳಿಸುತ್ತದೆ ಎಂದು ಸಭೆಯಲ್ಲಿ ರೈತರು ಕೇಂದ್ರಕ್ಕೆ ಚಾಟಿ ಬೀಸಿದರು.

  See also  ಸೊಂಟದ ಮೇಲೆ ಹಚ್ಚೆ ಹಾಕಿಸಿಕೊಂಡ ದಿಶಾ ಪಟಾನಿ; ಅರ್ಥವೇನು ಗೊತ್ತಾ?

  ಕ್ರೀಡಾಪಟುಗಳಿಂದ ಪ್ರಶಸ್ತಿ ವಾಪಸ್

  ರೈತರ ಪ್ರತಿಭಟನೆಗೆ ಬೆಂಬಲ ಸೂಚಿಸಿರುವ ಪಂಜಾಬ್​ನ ಕ್ರೀಡಾಪಟುಗಳು ಪ್ರಶಸ್ತಿಯನ್ನು ಸರ್ಕಾರಕ್ಕೆ ಹಿಂದುರಿಸುವ ಚಳವಳಿ ಆರಂಭಿಸಿದ್ದಾರೆ. ಕುಸ್ತಿಪಟು ಕರ್ತಾರ್ ಸಿಂಗ್ ಪದ್ಮಶ್ರೀ ಮತ್ತು ಅರ್ಜುನ ಪ್ರಶಸ್ತಿಗಳನ್ನು ಹಿಂದಿರುಗಿಸಿದ್ದು, ಪ್ರತಿಭಟನೆಯಲ್ಲಿ ಭಾಗಿಯಾಗಲು ಸಿಂಘು ಗಡಿಯತ್ತ ಹೊರಟಿದ್ದಾರೆ. ಸಜ್ಜನ್ ಸಿಂಗ್ ಚೀಮಾ ಪ್ರಶಸ್ತಿ ಹಿಂದುರಿಗಿಸಿದ್ದು, ಅನಾರೋಗ್ಯದ ಕಾರಣ ಪ್ರತಿಭಟನೆಯಲ್ಲಿ ಭಾಗಿಯಾಗುತ್ತಿಲ್ಲ. ರಾಷ್ಟ್ರಪತಿ ರಾಮನಾಥ ಕೋವಿಂದರ ಭೇಟಿಗೆ ಸಮಯಾವಕಾಶ ಕೋರಲಾಗಿದೆ. ಸಿಗದಿದ್ದರೆ ಪ್ರಶಸ್ತಿ ಫಲಕಗಳನ್ನು ರಾಷ್ಟ್ರಪತಿ ಭವನದ ಮುಂದೆ ಇರಿಸಲಾಗುವುದು ಎಂದು ಹಾಕಿ ಮಾಜಿ ಆಟಗಾರ ರಾಜಬೀರ್ ಹೇಳಿದ್ದಾರೆ.

  ಮೋದಿ ಜತೆಗೆ ಸಚಿವರ ಚರ್ಚೆ

  ರೈತರೊಂದಿಗೆ ಸಭೆ ನಡೆಸುವ ಮುನ್ನ ರಕ್ಷಣಾ ಸಚಿವ ರಾಜನಾಥ ಸಿಂಗ್ ಗೃಹ ಸಚಿವ ಅಮಿತ್ ಷಾ, ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಮತ್ತು ವಾಣಿಜ್ಯ ಸಚಿವ ಪಿಯೂಷ್ ಗೋಯೆಲ್ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ರೈತರ ಬೇಡಿಕೆ ಹಾಗೂ ಕೇಂದ್ರ ಸರ್ಕಾರ ನೀಡಲಿರುವ ಉತ್ತರಗಳ ಬಗ್ಗೆ ಪ್ರಧಾನಿ ಮೋದಿ ಗಮನಸೆಳೆಯುವ ಜತೆಗೆ ಪ್ರಧಾನಿ ಕಾರ್ಯಾಲಯ ಕೂಡ ಕೆಲ ಸಲಹೆಯನ್ನು ಸಚಿವರೊಂದಿಗೆ ಹಂಚಿಕೊಂಡಿತು ಎಂದು ತಿಳಿದಿಬಂದಿದೆ. ರೈತರೊಂದಿಗೆ ಸಂಧಾನ ನಡೆಸಿಯೇ ಬಿಕ್ಕಟ್ಟನ್ನು ಬಗೆಹರಿಸಬೇಕು ಮತ್ತು ಅವರನ್ನು ನಾವು ನಿರ್ಲಕ್ಷಿಸಿದ್ದೇವೆ ಎಂಬ ಭಾವನೆ ಮೂಡಬಾರದು. ಈ ಬಗ್ಗೆ ಎಚ್ಚರವಹಿಸಿ ಎಂದು ಮೋದಿ ಸಚಿವರಿಗೆ ತಿಳಿಸಿದರು ಎನ್ನಲಾಗಿದೆ.

  ವಿಶೇಷ ಅಧಿವೇಶನ?

  ರೈತರು ಪಟ್ಟು ಸಡಿಲಿಸದ ಹಿನ್ನೆಲೆಯಲ್ಲಿ ಕೃಷಿ ಸುಧಾರಣಾ ಕಾನೂನಿನ ಕೆಲವು ಭಾಗಗಳನ್ನು ತಿದ್ದುಪಡಿ ಮಾಡಲು ಸಂಸತ್ತಿನ ವಿಶೇಷ ಅಧಿವೇಶನ ಕರೆಯಲು ಸರ್ಕಾರ ಚಿಂತನೆ ನಡೆಸಿದೆ ಎಂದೂ ಹೇಳಲಾಗಿದೆ. ರೈತರ ಬೇಡಿಕೆಗಳಿಗೆ ಸ್ಪಂದಿಸಲು ಮತ್ತು ಕಾನೂನು ರಚನೆಯಲ್ಲಿ ಅವರ ಅಭಿಪ್ರಾಯಕ್ಕೂ ಮನ್ನಣೆ ನೀಡಲು ಸರ್ಕಾರ ಸಿದ್ಧವಾಗಿದೆ ಎಂದು ಮೂಲಗಳು ತಿಳಿಸಿವೆ. ಕನಿಷ್ಠ ಬೆಂಬಲ ಬೆಲೆ, ಬೆಲೆ ಖಾತರಿ ಯೋಜನೆ ಸೇರಿ ಮೂರ್ನಾಲ್ಕು ನಿರ್ಣಾಯಕ ಬೇಡಿಕೆಗಳನ್ನು ಪರಿಹರಿಸಬಹುದು. ಇದರಿಂದ 22 ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಸಿಗುವುದು ಖಾತರಿಯಾಗಲಿದೆ. ಕೃಷಿ ಗುತ್ತಿಗೆ ಸಂಬಂಧಿಸಿದ ವಿವಾದ ಬಗೆಹರಿಸಲು ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್​ಗಳ ಬದಲು ಸಿವಿಲ್ ನ್ಯಾಯಾಲಯಗಳನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶ ನೀಡಬಹುದು ಎಂದು ಕೇಂದ್ರದ ಮೂಲಗಳು ತಿಳಿಸಿವೆ.

  See also  ಜ. 29ರವರೆಗೆ ರಾಮೋಜಿ ಫಿಲ್ಮ್​ ಸಿಟಿಯಿಂದ ಆಕರ್ಷಕ ವಿಂಟರ್​ ಫೆಸ್ಟ್​ ಆಯೋಜನೆ: ಕ್ರಿಸ್​ಮಸ್​, ಹೊಸ ವರ್ಷದ ಮೋಜಿನ ಹಬ್ಬ

  ಕನಿಷ್ಠ ಬೆಂಬಲ ಬೆಲೆ ರದ್ದಾಗುವುದಿಲ್ಲ

  ಕನಿಷ್ಠ ಬೆಂಬಲ ಬೆಲೆ ನೀತಿ ರದ್ದಾಗುವುದಿಲ್ಲ. ಅದು ಮುಂದುವರಿಯಲಿದೆ. ಸರ್ಕಾರದ ಮಾತನ್ನು ರೈತರು ನಂಬಬೇಕು ಮತ್ತು ಅನುಮಾನದಿಂದ ನೋಡ ಬಾರದು. ಹಾಗಿದ್ದೂ ರೈತರಲ್ಲಿ ಸಂಶಯಗಳಿದ್ದರೆ ಅದನ್ನು ನಾವು ಬಗೆಹರಿಸಲು ಸಿದ್ಧರಿದ್ದೇವೆ. ರೈತರು ಮೋದಿ ಸರ್ಕಾರದ ಮೇಲೆ ವಿಶ್ವಾಸವಿರಿಸಬೇಕು. ಕಳೆದ 6 ವರ್ಷದಲ್ಲಿ ಹಲವು ಕೃಷಿ ಸುಧಾರಣಾ ಯೋಜನೆಗಳನ್ನು ನಾವು ಜಾರಿಗೆ ತಂದಿದ್ದೇವೆ. ಪ್ರತಿಭಟನೆಯಾದ್ಯಂತ ಶಿಸ್ತು ಕಾಪಾಡಿಕೊಂಡಿರುವ ರೈತರಿಗೆ ಅಭಿನಂದನೆ ನಾನು ಸಲ್ಲಿಸುತ್ತೇನೆ. ಶನಿವಾರದ ಮಾತುಕತೆ ಅಪೂರ್ಣಗೊಂಡಿರುವುದರಿಂದ ಡಿ. 9ರಂದು ಮತ್ತೊಮ್ಮೆ ಸಭೆ ಸೇರಲಿದ್ದೇವೆ ಎಂದು ಸಭೆ ಬಳಿಕ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ತಿಳಿಸಿದ್ದಾರೆ. ರೈತರಿಂದ ಸಲಹೆಗಳು ಬಂದಲ್ಲಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ನಮಗೆ ಸುಲಭವಾಗಲಿದೆ. ರೈತರ ಎಲ್ಲಾ ಬೇಡಿಕೆಗಳನ್ನು ಪರಿಶೀಲಿಸುತ್ತಿದ್ದೇವೆ. ಹೀಗಾಗಿ ಪ್ರತಿಭಟನೆಯಲ್ಲಿ ಭಾಗಿಯಾಗಿರುವ ಹಿರಿಯ ನಾಗರಿಕರು ಮತ್ತು ಮಕ್ಕಳನ್ನು ತಮ್ಮ ಮನೆಗಳಿಗೆ ಕಳುಹಿಸಿಕೊಡಬೇಕು. ಈ ಚಳಿಯಲ್ಲಿ ಅವರು ಪ್ರತಿಭಟನೆ ನಡೆಸುವುದು ಸೂಕ್ತವಲ್ಲ ಎಂದು ತೋಮರ್ ಕಳವಳ ವ್ಯಕ್ತಪಡಿಸಿದರು.

  ಮತ್ತೆ ಟ್ರುಡೊ ವಿವಾದ: ರೈತರ ಪ್ರತಿಭಟನೆ ಬೆಂಬಲಿಸಿ ಹೇಳಿಕೆ ನೀಡಿ ಭಾರತದಿಂದ ಟೀಕೆಗೆ ಒಳಗಾಗಿದ್ದ ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಮತ್ತೊಮ್ಮೆ ವಿವಾದ ಎಬ್ಬಿಸಿದ್ದಾರೆ. ಜಗತ್ತಿನ ಯಾವುದೇ ಭಾಗದಲ್ಲಿ ನಡೆಯುವ ಶಾಂತಿಯುತ ಪ್ರತಿಭಟನೆಯನ್ನು ಕೆನಡಾ ಬೆಂಬಲಿಸುತ್ತದೆ. ಉದ್ವಿಗ್ನತೆ ಕಡಿಮೆ ಮಾಡುವ ನಿಟ್ಟಿನಲ್ಲಿ ಮಾತುಕತೆ ಮೂಲಕ ಬಿಕ್ಕಟ್ಟು ಬಗೆಹರಿಸಿಕೊಳ್ಳಬೇಕು ಎಂದು ಹೇಳಿದ್ದಾರೆ.

  ವಿಶ್ವದ ಗಮನಸೆಳೆದ ಪ್ರತಿಭಟನೆ

  ರೈತರ ಪ್ರತಿಭಟನೆ ಸದ್ಯ ಬಗೆಹರಿಯದ ಕಗ್ಗಂಟು; ಕಾಯ್ದೆ ವಾಪಸ್ ಪಡೆಯಲು ಪಟ್ಟು, 9ರಂದು ಮತ್ತೆ ಸಭೆ

  ದೆಹಲಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆ ಜಾಗತಿಕವಾಗಿ ಗಮನ ಸೆಳೆದಿದೆ. ವಿಶ್ವಸಂಸ್ಥೆ, ಬ್ರಿಟನ್​ನ 36 ಸಂಸದರು ರೈತರನ್ನು ಬೆಂಬಲಿಸಿದ್ದಾರೆ. ಪ್ರತಿಯೊಬ್ಬರಿಗೂ ಶಾಂತಿಯುತವಾಗಿ ಪ್ರತಿಭಟಿಸುವ ಹಕ್ಕು ಇದೆ ಎಂದು ವಿಶ್ವಸಂಸ್ಥೆಯ ಮಹಾಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟರೆಸ್​ರ ವಕ್ತಾರ ಸ್ಟೀಫನ್ ಡುಜಾರಿಕ್ ಹೇಳಿದ್ದಾರೆ. ರೈತರ ಪ್ರತಿಭಟನೆ ವಿಷಯವಾಗಿ ಭಾರತದ ಜತೆ ಮಾತನಾಡಬೇಕು ಎಂದು ಬ್ರಿಟನ್ ಸಂಸದರು ವಿದೇಶಾಂಗ ಸಚಿವ ಡಾಮ್ನಿಕ್ ರಾಬ್​ಗೆ ಪತ್ರ ಬರೆದಿದ್ದಾರೆ. ರೈತರ ಪ್ರತಿಭಟನೆಯ ವಿಷಯವನ್ನು ಭಾರತದ ವಿದೇಶಾಂಗ ಸಚಿವರ ಜತೆ ಪ್ರಸ್ತಾಪಿಸಬೇಕು. ರೈತರ ಪ್ರತಿಭಟನೆ ಕುರಿತ ಮಾಹಿತಿಯನ್ನು ವಿದೇಶಗಳ ಕಾಮನ್​ವೆಲ್ತ್ ಮತ್ತು ಅಭಿವೃದ್ಧಿ ಕಚೇರಿಗೆ ತಲುಪಿಸುವಂತ ವ್ಯವಸ್ಥೆ ಆಗಬೇಕು ಎಂದು ಒತ್ತಾಯಿಸಿದ್ದಾರೆ. ಈ ಪತ್ರಕ್ಕೆ ಲೇಬರ್ ಪಕ್ಷದ ಸಂಸದ ತನ್ಮಜೀತ್ ಸಿಂಗ್ ಧೇಸಿ, ಪಕ್ಷದ ಮುಖಂಡರಾದ ವಿರೇಂದ್ರ ಶರ್ವ, ಸೀಮಾ ಮಲ್ಹೋತ್ರಾ, ವ್ಯಾಲೆರಿ ವಾಜ್, ನಾಡಿಯಾ ವಿಟ್ಟೋಮ್ ಪೀಟರ್ ಬಾಟ್ಲಮ್ ಕನ್ಸರ್ವೆಟಿವ್ ಪಕ್ಷ, ಸ್ಕಾಟಿಷ್ ನ್ಯಾಷನಲ್ ಪಕ್ಷದ ಸಂಸದರು ಸಹಿ ಮಾಡಿದ್ದಾರೆ.

  See also  ಕೋವಿಡ್‌ ಸಂಕಷ್ಟಕ್ಕೆ ಮತ್ತೊಮ್ಮೆ ಧಾವಿಸಿದ ಇನ್‌ಫೋಸಿಸ್‌- 100 ಕೋಟಿ ರೂ. ಬಿಡುಗಡೆಗೆ ಆದೇಶ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts