ಬಸವನಬಾಗೇವಾಡಿ: ಸಕಲ ಜೀವರಾಶಿಗೆ ಅನ್ನ ನೀಡುವ ಅನ್ನದಾತರ ಋಣ ಎಷ್ಟು ಜನ್ಮ ಎತ್ತಿದರೂ ತೀರಿಸಲು ಸಾಧ್ಯವಿಲ್ಲ ಎಂದು ಪಟ್ಟಣದ ವಿರಕ್ತಮಠದ ಸಿದ್ಧಲಿಂಗ ಶ್ರೀಗಳು ಹೇಳಿದರು.
ಪಟ್ಟಣದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮಿಣ ಕೃಷಿ ಸಹಕಾರ ಸಂಘದಲ್ಲಿ ಅಂತಾರಾಷ್ಟ್ರೀಯ ರೈತರ ದಿನಾಚರಣೆ ಅಂಗವಾಗಿ ಸೋಮವಾರ ಹಮ್ಮಿಕೊಂಡಿದ್ದ ರೈತರ ಪಾದಪೂಜೆ, ಸನ್ಮಾನ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ರೈತರು, ಸೈನಿಕರು ಈ ದೇಶದ ಎರಡು ಕಣ್ಣಿದ್ದಂತೆ. ಯಾವುದೇ ಒಂದು ಕಣ್ಣಿಗೆ ಹಾನಿಯಾದರೂ ಗಂಡಾಂತರ ಉಂಟಾಗುತ್ತದೆ. ನಾವೆಲ್ಲರೂ ಅದನ್ನು ಅರ್ಥ ಮಾಡಿಕೊಳ್ಳಬೇಕು. ಕೇಂದ್ರ, ರಾಜ್ಯ ಸರ್ಕಾರ ರೈತರ ಉತ್ಪನ್ನಕ್ಕೆ ಉತ್ತಮ ಬೆಲೆ ಸಿಗುವಂತೆ ಮಾಡಬೇಕು. ವಿವಿಧೋದ್ದೇಶ ಪ್ರಾಥಮಿಕ ಗ್ರಾಮಿಣ ಕೃಷಿ ಸಹಕಾರ ಸಂಘದಲ್ಲಿ ರೈತರಿಗೆ ಎಲ್ಲ ರೀತಿ ಸಹಾಯ, ಸಹಕಾರ ನೀಡುವುದರೊಂದಿಗೆ ಗುಣಮಟ್ಟದ ಬೀಜ, ರಸಗೊಬ್ಬರ ನೀಡಬೇಕು ಎಂದರು.
ಸಂಘದ ನೂತನ ಅಧ್ಯಕ್ಷ ಸಂಗನಗೌಡ ಚಿಕ್ಕೂಂಡ ಮಾತನಾಡಿದರು. ಸಂಘದ ಉಪಾಧ್ಯಕ್ಷ ಮಲ್ಲೇಶಿ ಕಡಕೋಳ, ನೂತನ ನಿರ್ದೇಶಕರಾದ ಈರಪ್ಪ ವಂದಾಲ, ಶ್ರೀಶೈಲ ಪರಮಗೊಂಡ, ಸಂಗನಬಸಪ್ಪ ನಾಯ್ಕೋಡಿ, ಮುತ್ತಪ್ಪ ಉಕ್ಕಲಿ, ಮಾದೇವಿ ಮೈಲೇಶ್ವರ, ಜಯಶ್ರೀ ಪಾಟೀಲ, ನಿಂಗಪ್ಪ ಕುಳಗೇರಿ, ಸುರೇಶ ಲಮಾಣಿ, ಸಂತೋಷ ಹಾರಿವಾಳ ಇತರರಿದ್ದರು.
ಪ್ರವೀಣ ಚಿಕ್ಕೊಂಡ ಸ್ವಾಗತಿಸಿದರು. ಮಹೇಶ ಅವಟಿ ನಿರೂಪಿಸಿದರು. ಶ್ರೀಶೈಲ ಮುರಾಳ ವಂದಿಸಿದರು.