ಪ್ರಧಾನಿ ನರೇಂದ್ರ ಮೋದಿಗಾಗಿ ಮತ ಹಾಕದಿರಿ

ಚಿಕ್ಕಮಗಳೂರು: ಪ್ರಧಾನಿ ನರೇಂದ್ರ ಮೋದಿ ಹೃದಯ ಹೀನ, ಸ್ವಾರ್ಥ ರಾಜಕಾರಣಿ. ಕೃಷಿಕರ ಪರವಾಗಿ ಎಂದೂ ಚಿಂತೆ ಮಾಡದ ಮೋದಿ ಮುಖ ನೋಡಿ ಯಾರೂ ವೋಟು ಹಾಕಬೇಡಿ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

ಕೊಪ್ಪದಲ್ಲಿ ಶುಕ್ರವಾರ ಕಾಂಗ್ರೆಸ್-ಜೆಡಿಎಸ್ ಆಯೋಜಿಸಿದ್ದ ಪರಿವರ್ತನಾ ಸಮಾವೇಶ ಉದ್ಘಾಟಿಸಿ ಮಾತನಾಡಿದರು.

2014ರಲ್ಲಿ ಭಾರಿ ಭರವಸೆಯೊಂದಿಗೆ ಅಧಿಕಾರಕ್ಕೆ ಬಂದ ಮೋದಿ ಸರ್ಕಾರ ಕೃಷಿಕರಿಗಾಗಿ ಏನೂ ಮಾಡಲಿಲ್ಲ. ತಮಿಳುನಾಡು ರೈತರು ಮೂರು ತಿಂಗಳು ದೆಹಲಿಯಲ್ಲಿ ಪ್ರತಿಭಟನೆ ಮಾಡಿದರೂ ಮೋದಿಯವರು ಒಂದು ಪೈಸೆ ಸಹಾಯ ಮಾಡಲಿಲ್ಲ. ಧರ್ಮದ ಹೆಸರಲ್ಲಿ ಮತ ಕೇಳುತ್ತಿರುವ ಬಿಜೆಪಿ ಅಭಿವೃದ್ಧಿ ಮರೆತಿದೆ. ಧರ್ಮ ರಕ್ಷಣೆಯಲ್ಲಿ ನಾನೂ ಒಂದು ಹೆಜ್ಜೆ ಮುಂದೆ ಇದ್ದೇನೆ ಎಂದು ತಿರುಗೇಟು ನೀಡಿದರು.

ಮಹಾ ಘಟಬಂಧನ್ ಕಿಚಡಿ ಪಕ್ಷಗಳೆಂದು ಮೋದಿ ಲೇವಡಿ ಮಾಡುತ್ತಿದ್ದಾರೆ. ಮುಂದೆ ಇದೇ ಪ್ರಾದೇಶಿಕ ಪಕ್ಷಗಳು ಸರ್ಕಾರ ರಚನೆ ಮಾಡುತ್ತವೆ. ಪ್ರಾದೇಶಿಕ ಪಕ್ಷಗಳನ್ನು ಅಲ್ಲಗಳೆಯುವ ಮೋದಿ ಚುನಾವಣೆಯಲ್ಲಿ ಹೊಂದಾಣಿಕೆ ಮಾಡಿಕೊಳ್ಳಲು 13 ಪ್ರಾದೇಶಿಕ ಪಕ್ಷಗಳ ಮನೆ ಬಾಗಿಲಿಗೆ ಹೋಗಿದ್ದರು. ಭ್ರಷ್ಟಾಚಾರದ ಪಿತಾಮಹಾ ಎಐಡಿಎಂಕೆಯಂತಹ ಪಕ್ಷದ ಮನೆ ಬಾಗಿಲಿಗೆ ಹೋಗಿ 8-10 ಸೀಟು ಹೊಂದಾಣಿಕೆ ಮಾಡಿಕೊಂಡಿದ್ದಾರೆ. ಐದು ವರ್ಷದಲ್ಲಿ ಸರಿಯಾದ ಆಳ್ವಿಕೆ ಮಾಡಿದ್ದರೆ ಬಿಜೆಪಿಗೆ ಇಂಥ ದುಸ್ಥಿತಿ ಬರುತ್ತಿರಲಿಲ್ಲ ಎಂದು ಲೇವಡಿ ಮಾಡಿದರು.

ಚುನಾವಣಾ ಆಯೋಗ ಸಾಲಮನ್ನಾ ಹಣ ವಿತರಣೆಗೆ ನಿಯಂತ್ರಣ ಹಾಕಿದೆ. ಈಗ 15 ಲಕ್ಷ ರೈತರಿಗೆ 15,800 ಕೋಟಿ ರೂ. ಬ್ಯಾಂಕುಗಳಿಗೆ ಪಾವತಿ ಮಾಡಲಾಗಿದೆ. ಆದರೆ, ಕೇಂದ್ರ ಸರ್ಕಾರ ಕಿಸಾನ್ ಸಮ್ಮಾನ್ ಹೆಸರಲ್ಲಿ ರಾಜ್ಯದ ಆರು ರೈತರಿಗೆ ಮಾತ್ರ ತಲಾ ಎರಡು ಸಾವಿರ ರೂ. ಮಾತ್ರ ಕೊಟ್ಟಿದೆ. ಇದು ರೈತರ ಬಗ್ಗೆ ಕೇಂದ್ರಕ್ಕಿರುವ ಕಾಳಜಿ ತೋರಿಸುತ್ತದೆ ಎಂದರು.

ಕ್ಷೀರ ಭಾಗ್ಯದಡಿ 2,500 ಕೋಟಿ ರೂ. ಹಾಗೂ ರೈತರ ಪಂಪ್​ಸೆಟ್​ಗಳಿಗೆ ಉಚಿತ ವಿದ್ಯುತ್​ಗಾಗಿ 11 ಸಾವಿರ ಕೋಟಿ ರೂ. ಒಟ್ಟು 13500 ಕೋಟಿ ರೂ. ರಾಜ್ಯ ಸರ್ಕಾರ ಖರ್ಚು ಮಾಡಿದೆ. ಆದರೆ, ಮೋದಿ ಸರ್ಕಾರ ಕೇವಲ 2000 ಕೋಟಿ ರೂ. ಮಾತ್ರ ನೀಡಿದೆ. ಕೇಂದ್ರ ಸರ್ಕಾರ ರಾಜ್ಯದ ರೈತರಿಗೆ ನೀಡಿರುವ ನೆರವು ಏನಕ್ಕೂ ಸಾಕಾಗುವುದಿಲ್ಲ ಎಂದರು.