ಕೃಷಿ ಅಧಿಕಾರಿಗಳೇ ಜಮೀನಿಗೆ ಹೊರಡಿ

ಚಿಕ್ಕಮಗಳೂರು: ಹೊಲಗಳಿಗೆ ಭೇಟಿ ನೀಡಿ ಕೇಂದ್ರ, ರಾಜ್ಯ ಸರ್ಕಾರದ ಯೋಜನೆಗಳ ಮಾಹಿತಿ ನೀಡಬೇಕು. ಕೃಷಿ ಅಭಿಯಾನ ಮಾಡಿ ಕೇಂದ್ರ ಫಸಲ್ ಭಿಮಾ ಯೋಜನೆ ಬಗ್ಗೆ ತಿಳಿಸಬೇಕು ಎಂದು ತಾಪಂ ಅಧ್ಯಕ್ಷ ನೆಟ್ಟೇಕೆರೆಹಳ್ಳಿ ಜಯಣ್ಣ ಕೃಷಿ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ತಾಪಂ ಸಾಮಾನ್ಯ ಸಭೆಯಲ್ಲಿ ಅಧಿಕಾರಿಗಳಿಂದ ಕೃಷಿ ಇಲಾಖೆ ಮಾಹಿತಿ ಪಡೆದ ಅವರು, ಫಸಲ್ ಭಿಮಾ ಯೋಜನೆ ರೈತರಿಗೆ ಬೆಳೆ ನಷ್ಟ ಸಂದರ್ಭ ಉಪಯುಕ್ತವಾಗಿದೆ. ಈ ಬಗ್ಗೆ ಸೂಕ್ತ ಮಾಹಿತಿ ನೀಡಬೇಕು ಎಂದು ಕೃಷಿ ಸಹಾಯಕ ಅಧಿಕಾರಿ ವೆಂಕಟೇಶ್ ಚೌವಾಣ್ ಅವರಿಗೆ ಸೂಚಿಸಿದರು.

ಬೆಳೆ ಸಮೀಕ್ಷೆಗೆಂದು ಹೋಗುತ್ತಿರುವ ಗ್ರಾಮ ಲೆಕ್ಕಿಗರು ಕಚೇರಿಯಲ್ಲೇ ಇರುವುದಿಲ್ಲ. ಇದರಿಂದ ಬೆಳೆ ದೃಢೀಕರಣ ಕೆಲಸಗಳಿಗೆ ರೈತರು ಅಲೆದಾಡುವಂತಾಗಿದೆ ಎಂದು ಸದಸ್ಯ ಕೆ.ಯು.ಮಹೇಶ್ ಅಸಮಾಧಾನ ವ್ಯಕ್ತಪಡಿಸಿದರು.

ಇದಕ್ಕೆ ಧ್ವನಿಗೂಡಿಸಿದ ಸದಸ್ಯ ವೈ.ಜಿ.ಸುರೇಶ್, ತಹಸೀಲ್ದಾರ್ ಕಚೇರಿಯಲ್ಲಿ ಅರ್ಜಿ ಸ್ವೀಕರಿಸಲು ಮತ್ತೊಂದು ಕೌಂಟರ್ ಆರಂಭಿಸಿ. ಆದಾಯ ಪ್ರಮಾಣ ಪತ್ರಕ್ಕಾಗಿ ಅರ್ಜಿ ಹಾಕಲು ಬರುವವರು ಸರದಿಯಲ್ಲಿ ನಿಂತು ಕಾಯಬೇಕಿದೆ ಎಂದರು.

ಬೆಳೆ ಸಮೀಕ್ಷೆ ತುರ್ತಾಗಿ ಮಾಡಬೇಕಾದ್ದರಿಂದ ಗ್ರಾಮಲೆಕ್ಕಿಗರು, ಕಂದಾಯ ನಿರೀಕ್ಷಕರು ಬೆಳೆ ನಷ್ಟ ಆಗಿರುವ ಸ್ಥಳಗಳಿಗೆ ಹೋಗಿ ಸಮೀಕ್ಷೆ ಮಾಡುತ್ತಿದ್ದಾರೆ. ಇನ್ನೊಂದು ವಾರದಲ್ಲಿ ಕೆಲಸ ಮುಗಿಯಲಿದೆ. ಡಿಸಿ ಅನುಮತಿ ಪಡೆದು ತಹಸೀಲ್ದಾರ್ ಕಚೇರಿ ಬಳಿ ಅರ್ಜಿ ಸ್ವೀಕಾರಕ್ಕೆ ಮತ್ತೊಂದು ಕೌಂಟರ್ ತೆರೆಯಲಾಗುವುದು ಎಂದು ತಹಸೀಲ್ದಾರ್ ನಂದಕುಮಾರ್ ಸ್ಪಷ್ಟಪಡಿಸಿದರು.

ತೆಂಗು ಪುನಶ್ಚೇತನ ಯೋಜನೆಯಡಿ 9.04 ಕೋಟಿ ರೂ. ಮಂಜೂರಾಗಿದ್ದು, ಹಣ ಬರಬೇಕಿದೆ ಎಂದು ತೋಟಗಾರಿಕೆ ಸಹಾಯಕ ಅಧಿಕಾರಿ ಪೂಜಿತಾ ಸಭೆಗೆ ಮಾಹಿತಿ ನೀಡಿದರು. ಕೃಷಿ ಹೊಂಡಗಳನ್ನು ಅರ್ಹರಿಗೆ ಮಾತ್ರ ಮಂಜೂರು ಮಾಡಿ ಎಂದು ಅಧ್ಯಕ್ಷರು ಸಲಹೆ ನೀಡಿದರು.

ವಸತಿ ಯೋಜನೆಯಡಿ ಮಂಜೂರಾದ ಆಶ್ರಯ ಮನೆಗಳು ಅನುದಾನವಿಲ್ಲದೆ ಅಪೂರ್ಣವಾಗಿವೆ. ಅನುದಾನ ನೀಡದಿದ್ದರೆ ಫಲಾನುಭವಿಗಳಿಗೆ ತೊಂದರೆಯಾಗುವುದಿಲ್ಲವೆ ಎಂದು ಸದಸ್ಯ ಈಶ್ವರಹಳ್ಳಿ ಮಹೇಶ್ ಪ್ರಶ್ನಿಸಿದರು. ಅನುದಾನ ಸದ್ಯದಲ್ಲೇ ಬರಲಿದೆ. ಫಲಾನುಭವಿಗಳ ಖಾತೆಗೆ ನೇರ ಪಾವತಿ ಮಾಡಲಾಗುವುದು ಎಂದು ವಸತಿ ಯೋಜನೆ ನೋಡಲ್ ಅಧಿಕಾರಿ ಅಮಿತ್ ಉತ್ತರಿಸಿದರು.

ಎಚ್1ಎನ್1ಗೆ ಬಲಿ: ಎಚ್1ಎನ್1 ಕಾಯಿಲೆಯಿಂದ ಒಬ್ಬರು ಮೃತಪಟ್ಟಿದ್ದು, 11 ಜನರಿಗೆ ಸೋಂಕು ಇರುವುದು ದೃಢಪಟ್ಟಿದೆ ಎಂದು ತಾಲೂಕು ವೈದ್ಯಾಧಿಕಾರಿ ಡಾ. ಸೀಮಾ ಸಭೆಗೆ ಮಾಹಿತಿ ನೀಡಿದರು. ಗ್ರಾಮೀಣ ಭಾಗದಲ್ಲಿ ಸ್ವಚ್ಛತೆ ಸಮಸ್ಯೆ ಕೆಲ ರೋಗಗಳು ಬರುತ್ತಿವೆ. ಈ ಬಗ್ಗೆ ಆರೋಗ್ಯ ಇಲಾಖೆ ಜಾಗೃತ ವಹಿಸಬೇಕು ಎಂದು ಸ್ಥಾಯಿ ಸಮಿತಿ ಅಧ್ಯಕ್ಷೆ ಭವ್ಯಾ ನಟೇಶ್ ಸಲಹೆ ಮಾಡಿದರು.

ಬಗರ್​ಹುಕುಂ ಅರ್ಜಿಗೆ ಮತ್ತೆ ಅವಕಾಶ: ಬಗರ್​ಹುಕುಂನಲ್ಲಿ ಅರ್ಜಿ ಸಲ್ಲಿಸಲಾಗದವರಿಗೆ ಫಾರಂ 57ರಲ್ಲಿ ಅರ್ಜಿ ಸಲ್ಲಿಸಲು ಸರ್ಕಾರ ಅವಕಾಶ ನೀಡಿದೆ. ಈ ಬಗ್ಗೆ ಇನ್ನೂ ಸ್ಪಷ್ಟ ಮಾಹಿತಿ ಬರಬೇಕಿದೆ ಎಂದು ತಹಸೀಲ್ದಾರ್ ಸಭೆಗೆ ಮಾಹಿತಿ ನೀಡಿದರು. ವಂಶವೃಕ್ಷ ಪ್ರಮಾಣ ಪತ್ರ ಪಡೆಯುವುದು ಈಗ ಕಷ್ಟವಾಗಿದೆ. ಹಲವು ದಾಖಲೆ ನೀಡಿ ಸಾಕಷ್ಟು ಹಂತದಲ್ಲಿ ಪರಿಶೀಲಿಸಿ ನಂತರ ನೀಡಲಾಗುತ್ತಿದೆ. ಇದನ್ನು ಸರಳಗೊಳಿಸಬೇಕು ಎಂದು ಸದಸ್ಯ ಈಶ್ವರಹಳ್ಳಿ ಮಹೇಶ್ ಒತ್ತಾಯಿಸಿದರು. ಎಲ್ಲ ಹಳ್ಳಿಗಳಲ್ಲೂ ರುದ್ರಭೂಮಿಗೆ ಜಾಗ ಮೀಸಲಿಡಬೇಕು. ಜತೆಗೆ ನಿವೇಶನ ರಹಿತರಿಗೆ ನೀವೇಶನ ನೀಡಲು ಭೂಮಿ ಕಾಯ್ದಿರಿಸಬೇಕು ಎಂದು ಅಧ್ಯಕ್ಷ ನೆಟ್ಟೇಕೆರೆಹಳ್ಳ ಜಯಣ್ಣ ಹೇಳಿದರು. ಹಳ್ಳಿಗಳಲ್ಲಿ ಬಲಾಢ್ಯರು ಒತ್ತುವರಿ ಮಾಡಿರುವ ಗ್ರಾಮ ಠಾಣೆ ಜಾಗ ತೆರವುಗೊಳಿಸಬೇಕು ಎಂದು ಸದಸ್ಯ ವೈ.ಜಿ. ಸುರೇಶ್, ರಮೇಶ್ ಸಿದ್ದಾಪುರ ಹೇಳಿದರು.

ಸರ್ಕಾರಿ ಔಷಧ ಕಳಪೆ?: ಪಶು ಆಸ್ಪತ್ರೆಯಲ್ಲಿ ವೈದ್ಯರು ದುಡ್ಡು ಕೊಟ್ಟು ಔಷಧ ತರಲು ರೈತರಿಗೆ ಹೇಳುತ್ತಿದ್ದಾರೆ. ಸರ್ಕಾರಿ ಔಷಧ ಕಳಪೆ ಎಂದು ಹೇಳಲಾಗುತ್ತಿದೆ ಎಂದು ಸದಸ್ಯರಾದ ಡಿ.ಜಿ.ಸುರೇಶ್ ಹಾಗೂ ಈಶ್ವರಹಳ್ಳಿ ಮಹೇಶ್ ದೂರಿದರು. ಜಾನುವಾರು ಸಂಖ್ಯೆ ಹೆಚ್ಚಾಗಿರುವ ಕಡೆ ಔಷಧ ಕೊರತೆ ಇರಬಹುದು. ಕೊರತೆ ಇರುವ ಕಡೆ ಔಷಧ ಕಳುಹಿಸಲಾಗುವುದು ಎಂದು ಪಶು ವೈದ್ಯಾಧಿಕಾರಿ ಪ್ರತಿಕ್ರಿಯೆ ನೀಡಿದರು.