ನೆಲಮಂಗಲ: ತಾಲೂಕಿನಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣಕ್ಕೆ ರೈತರಿಂದ ಭಾರಿ ವಿರೋಧ ವ್ಯಕ್ತವಾಗುತ್ತಿದೆ.
ತಾಲೂಕು ಕಚೇರಿ ಸಮೀಪ ಗುರುವಾರ ಸಮಾವೇಶಗೊಂಡ ಸೋಲದೇವನಹಳ್ಳಿ, ಯಂಟಗಾನಹಳ್ಳಿ ಗ್ರಾಪಂ ವ್ಯಾಪ್ತಿಯ ನೂರಾರು ರೈತರು ಹಾಗೂ ಮುಖಂಡರು ಇತ್ತೀಚೆಗೆ ಯಂಟಗಾನಹಳ್ಳಿ, ಸೋಲದೇವನಹಳ್ಳಿ ಭಾಗದಲ್ಲಿ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಸರ್ವೇ ನಡೆಸಲಾಗಿದೆ. ಕೂಡಲೇ ಯೋಜನೆ ವಾಪಾಸ್ ಪಡೆಯಬೇಕು ಎಂದು ತಹಸೀಲ್ದಾರ್ ಅಮೃತ್‌ಆತ್ರೇಶ್‌ಗೆ ಮನವಿ ಸಲ್ಲಿಸಿದರು.
ರೈತರ ಮನವಿ ಹಿನ್ನೆಲೆಯಲ್ಲಿ ತಹಸೀಲ್ದಾರ್ ರೈತರೊಂದಿಗೆ ಸಭೆ ನಡೆಸಿ ಚರ್ಚಿಸಿದರು. ವಿಮಾನ ನಿಲ್ದಾಣ ಸರ್ವೇ ವಿಚಾರವಾಗಿ ತಾಲೂಕು ಆಡಳಿತದಿಂದ ಯಾವುದೇ ನೋಟಿಸ್ ಆಗಲಿ, ಆದೇಶವಾಗಲಿ ನೀಡಿಲ್ಲ. ರೈತರ ಮನವಿಯನ್ನು ಜಿಲ್ಲಾಧಿಕಾರಿ ಗಮನಕ್ಕೆ ತಂದು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಮುಖಂಡ ಚಿಕ್ಕಹನುಮೇಗೌಡ ಮಾತನಾಡಿ, 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ತಾಲೂಕಿನ ಸೋಲದೇವನಹಳ್ಳಿ ಹಾಗೂ ಯಂಟಗಾನಹಳ್ಳಿ ಭಾಗದಲ್ಲಿ ನಿರ್ಮಾಣ ಮಾಡಿದರೆ 20 ಗ್ರಾಮಗಳು ಹಾಗೂ ಎರಡೂವರೆ ಸಾವಿರಕ್ಕೂ ಹೆಚ್ಚು ರೈತ ಕುಟುಂಬಗಳು ಅತಂತ್ರವಾಗಲಿವೆ. ಜನರು ಹೈನುಗಾರಿಕೆ ನಂಬಿಕೊಂಡು ಜೀವನ ನಡೆಸುತ್ತಿದ್ದಾರೆ. ಜತೆಗೆ ಹಿರಿಯ ನಟಿ ಡಾ.ಎಂ.ಲೀಲಾವತಿ ಅವರ ಸ್ಮಾರಕವಿದೆ ಎಂದರು.
ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಸಿ.ಎಂ.ಗೌಡ, ಟಿಎಪಿಸಿಎಂಎಸ್ ನಿರ್ದೇಶಕ ವೀರಮಾರೇಗೌಡ, ಗ್ರಾಮ ಪಂಚಾಯಿತಿ ಅಧ್ಯಕ್ಷ ಸಂತೋಷ್ ನಾಯಕ್, ಸದಸ್ಯ ಸಂದೀಪ್, ವೈ.ಆರ್.ಶ್ರೀನಿವಾಸ್, ವೆಂಕಟೇಗೌಡ, ವಕೀಲ ಮಂಜುನಾಥ್, ಮುಖಂಡ ಕೃಷ್ಣಪ್ಪ, ರುದ್ರಪ್ಪ, ಸುನಂದಮ್ಮ ಉಪಸ್ಥಿತರಿದ್ದರು.
” ವಿಮಾನ ನಿಲ್ದಾಣವನ್ನು ಬೇರೆಡೆಗೆ ಸ್ಥಳಾಂತರಿಸುವ ಕೆಲಸ ಮಾಡಬೇಕಿದೆ. ಭೂಮಿ ನಂಬಿಕೊಂಡು ಸಾಕಷ್ಟು ಮಂದಿ ಜೀವನ ನಡೆಸುತ್ತಿದ್ದು, ರೈತರ ಅನುಕೂಲಕ್ಕೆ ಸರ್ಕಾರ ಬದ್ಧವಾಗಿರಬೇಕು. ಡ್ರೋನ್ ಮೂಲಕ ಸರ್ವೇ ಮಾಡುತ್ತಿದ್ದು, ರೈತರಲ್ಲಿ ಆತಂಕ ಮನೆ ಮಾಡಿದೆ. ರೈತರಿಗೆ ಅನುಕೂಲ ಮಾಡುವ ನಿಟ್ಟಿನಲ್ಲಿ ವಿಮಾನ ನಿಲ್ದಾಣ ಕಾರ್ಯ ಕೈಬಿಡಬೇಕು.”
ವಿನೋದ್‌ರಾಜ್ ಚಿತ್ರನಟ, ಸೋಲದೇವನಹಳ್ಳಿ
16ರಂದು ಪ್ರತಿಭಟನೆ
ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ ವಿರೋಧಿಸಿ ತಾಲೂಕು ಕಚೇರಿ ಮುಂಭಾಗದಲ್ಲಿ ನೂರಾರು ರೈತರ ನೇತೃತ್ವದಲ್ಲಿ ಡಿ.16ರಂದು ಪ್ರತಿಭಟನೆ ನಡೆಸಲು ರೈತರು ತೀರ್ಮಾನಿಸಿದ್ದಾರೆ.