More

    ಏರ್​ಟೆಲ್ ಖಾತೆಗೆ ರೈತರ ಹಣ!

    ಹುಬ್ಬಳ್ಳಿ: ಬೆಳೆ ಪರಿಹಾರ ಹಣ, ವಿಮಾ ಮೊತ್ತ, ಪ್ರೋತ್ಸಾಹಧನ, ಸಹಾಯಧನ.. ಇನ್ನೂ ಬಂದಿಲ್ಲ ಎಂದು ಕೃಷಿ, ತೋಟಗಾರಿಕೆ ಕಚೇರಿಗೆ ಹೋಗಿ ಕೇಳಿದ್ರೆ ‘ನಿಮ್ಮ ಖಾತೆಗೆ ಹಣ ಜಮಾ ಆಗಿ ತುಂಬಾ ದಿನ ಆಯ್ತು’ ಅಂತಾರೆ. ಇತ್ತ ಊರಲ್ಲಿಯ ಬ್ಯಾಂಕ್​ಗೆ ಹೋಗಿ ಕೇಳಿದ್ರೆ ‘ನಿಮ್ಮ ಖಾತೆಗೆ ಯಾವ ಹಣವೂ ಬಂದಿಲ್ಲ’ ಎನ್ನುತ್ತಾರೆ. ಹಾಗಾದ್ರೆ ಹಣ ಎಲ್ಲಿಗೋಯ್ತು? ಎಂದು ಎರಡೂ ಕಡೆ ಅಲೆಯುತ್ತಿರುವ ಸಾವಿರಾರು ರೈತರಿಗೆ ತಮ್ಮ ಪಾಲಿನ ಹಣ ಏರ್​ಟೆಲ್ ಪೇಮೆಂಟ್ ಬ್ಯಾಂಕ್ ಖಾತೆಯಲ್ಲಿದೆ ಎಂದುದೇ ಗೊತ್ತಿಲ್ಲ! ಇನ್ನು ಈ ವಿಷಯ ತಿಳಿದ ಕೆಲ ರೈತರಿಗೂ ಹಣ ಪಡೆಯಲು ಕಂಪನಿಯ ನಿಯಮ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಸಿದೆ.

    ಹೌದು, 10 ರೂಪಾಯಿಗೆ ಸಿಮ್ ಕೊಡ್ತೀವಿ, 20 ರೂಪಾಯಿ ಟಾಕ್​ಟೈಮ್ ಬರುತ್ತೆ ಎಂದು ರೈತರಿಂದ ಕೆಲವು ಫಾಮರ್್​ಗಳಿಗೆ ಸಹಿ, ಆಧಾರ್ ಕಾರ್ಡ್ ಝೆರಾಕ್ಸ್ ಮತ್ತು ಬೆರಳಚ್ಚು ಪಡೆದು ಸಿಮ್ ಕೊಟ್ಟ ಏರ್​ಟೆಲ್ ಸಿಬ್ಬಂದಿ, ರೈತರಿಗೆ ಸರಿಯಾದ ಮಾಹಿತಿ ನೀಡದೆ ಅವರ ಹೆಸರಲ್ಲಿ ಪೇಮೆಂಟ್ ಬ್ಯಾಂಕ್ ಖಾತೆ ತೆರೆದಿದ್ದಾರೆ. ಸರ್ಕಾರದ ಯಾವುದೋ ಹಂತದಲ್ಲಿ ‘ವ್ಯವಹಾರ’ ನಡೆಸಿ ಆಧಾರ್ ಕಾರ್ಡ್ ಆಧಾರದಲ್ಲಿ ನೇರ ನಗದು ಪ್ರಕ್ರಿಯೆಯಲ್ಲಿ ಜಮಾ ಆಗುವ ಹಣ ತಮ್ಮಲ್ಲಿಯ ಖಾತೆಗೇ ಬರುವಂತೆ ಮಾಡಿಕೊಂಡಿರುವುದರ ಹಿಂದೆ ದೊಡ್ಡಜಾಲ ಇರುವ ಶಂಕೆ ಇದೆ.

    ಧಾರವಾಡ ಜಿಲ್ಲೆಯಲ್ಲಿ ಸಾವಿರಾರು ರೈತರಿಗೆ ಸರ್ಕಾರದಿಂದ ನೀಡಲಾದ ಕೋಟ್ಯಂತರ ರೂ. ಪೇಮೆಂಟ್ ಬ್ಯಾಂಕ್ ಖಾತೆಗೆ ಸೇರಿದೆ. ಇದೇ ರೀತಿ ರಾಜ್ಯಾದ್ಯಂತ ರೈತರ ಹಣ ಪೇಮೆಂಟ್ ಬ್ಯಾಂಕ್ ಖಾತೆಗೆ ಸದ್ದಿಲ್ಲದೆ ಜಮಾ ಆಗುತ್ತಿದೆ. ಈ ಹಣಕ್ಕೆ ರೈತರಿಗೆ ಬಡ್ಡಿಯೂ ಸಿಗುವುದಿಲ್ಲ. ಕಂಪನಿಯ ವಹಿವಾಟಿನ ಗಾತ್ರ ಮಾತ್ರ ಬೆಳೆಯುತ್ತಿದೆ.

    ಬಯಲಾಗಿದ್ದು ಹೀಗೆ: ಕಳೆದ ವರ್ಷ ಈರುಳ್ಳಿ ಬೆಲೆ ಕುಸಿದಿದ್ದ ವೇಳೆ ಸರ್ಕಾರ ಪ್ರತಿ ಕ್ವಿಂಟಾಲ್​ಗೆ 200 ರೂ. ಸಹಾಯಧನ ಘೊಷಿಸಿತ್ತು. ಅದನ್ನು ನಾಫೆಡ್ ಮೂಲಕ ಇತ್ತೀಚೆಗೆ ಪಾವತಿಸಲಾಗಿತ್ತು. ಈ ಹಣಕ್ಕಾಗಿ ಹುಬ್ಬಳ್ಳಿ ತಾಲೂಕಿನ ಬ್ಯಾಹಟ್ಟಿ ಗ್ರಾಮದ ರೈತರೊಬ್ಬರು ಕಚೇರಿಗಳಿಗೆ ಅಲೆದು ಸುಸ್ತಾಗಿದ್ದರು. ಕೊನೆಗೆ, ಸ್ಥಳೀಯ ಸಾಮಾಜಿಕ ಕಾರ್ಯಕರ್ತರೊಬ್ಬರ ನೆರವಿನಿಂದ ತೋಟಗಾರಿಕೆ ಇಲಾಖೆಯಲ್ಲಿ ಕೇಳಿದಾಗ, ಸಾಂಬಾರು ಮಂಡಳಿ ಕಚೇರಿಗೆ ಹೋಗುವಂತೆ ಹೇಳಲಾಗಿತ್ತು. ಅದರಂತೆ ಅಲ್ಲಿ ವಿಚಾರಿಸಲಾಗಿ ‘ನಿಮ್ಮ ಏರ್​ಟೆಲ್ ಪೇಮೆಂಟ್ ಬ್ಯಾಂಕ್ ಖಾತೆಗೆ ಸಹಾಯಧನ ಹೋಗಿದೆ’ ಎಂದಿದ್ದಾರೆ. ತನ್ನ ಹೆಸರಲ್ಲೊಂದು ಪೇಮೆಂಟ್ ಬ್ಯಾಂಕ್ ಖಾತೆ ಇದೆ ಎನ್ನುವುದೇ ಆ ರೈತನಿಗೆ ಗೊತ್ತಿರಲಿಲ್ಲ. ಏರ್​ಟೆಲ್​ನವರು 10 ರೂ.ಗೆ ಕೊಟ್ಟಿದ್ದ ಸಿಮ್ ಯಾವತ್ತೋ ಕಳೆದುಹೋಗಿತ್ತು. ನಂತರ ಅವರಿಬ್ಬರೂ ಏರ್​ಟೆಲ್ ಕಚೇರಿಗಳಿಗೆ ಹೋಗಿ ಕೇಳಿದರೆ ಮತ್ತೊಂದು, ಇನ್ನೊಂದು ಕಚೇರಿಯಲ್ಲಿ ವಿಚಾರಿಸಿ ಎಂದು ಸಾಗಹಾಕಿದರು. ಹಾಗೇ ವಿಚಾರಿಸುತ್ತ ಹೋದಾಗ ಮೂರನೇ ಕಚೇರಿಯಲ್ಲಿದ್ದ ಸಿಬ್ಬಂದಿ ಪರಿಶೀಲಿಸಿ, ‘ಇಲ್ಲಿ ನಿಮ್ಮ ಹೆಸರಿನ ಖಾತೆಗೆ ಇಂತಿಷ್ಟು ಹಣ ಬಂದಿದೆ’ ಎಂದಿದ್ದಾರೆ.

    ಪೇಮೆಂಟ್ ಬ್ಯಾಂಕ್​ನವರು ಪಾಸ್​ಬುಕ್ ಸಹ ಕೊಡುವುದಿಲ್ಲ. ಕೇಳಿದರೆ ನಿಮ್ಮ ಸಿಮ್ೆ ಮೆಸೇಜ್ ಕಳುಹಿಸಿದ್ದೇವೆ ಎನ್ನುತ್ತಾರೆ. ಬಹುಪಾಲು ರೈತರಿಗೆ ಮೆಸೇಜ್ ಓದಲು ಬರಲ್ಲ. ಹಾಗಾಗಿ, ಏರ್​ಟೆಲ್ ಬ್ಯಾಂಕ್ ಖಾತೆ ಹೊಂದಿರುವ ವಿಷಯವೇ ಗೊತ್ತಿಲ್ಲ. ಹಲವರು ಯಾವಾಗಲೋ ಸಿಮ್ ಬದಲಿಸಿಕೊಂಡಿದ್ದಾರೆ. ಅತಿವೃಷ್ಟಿ, ಪ್ರವಾಹ, ಬರಗಾಲ ಹೀಗೆ ನಾನಾ ಸಮಸ್ಯೆಗೆ ಸಿಲುಕಿ ಸೊರಗಿರುವ ಸಾವಿರಾರು ರೈತರು ಸರ್ಕಾರ ಕೊಟ್ಟ ಹಣ ಕೈಗೆ ಬಾರದೇ ಕಂಗಾಲಾಗಿದ್ದಾರೆ.

    ಪಡೆಯುವುದು ಸಲೀಸಲ್ಲ…

    ಏರ್​ಟೆಲ್ ಖಾತೆಗೆ ಜಮಾ ಆಗಿರುವ ಹಣ ಪಡೆಯುವುದು ರೈತರಿಗೆ ಸಲೀಸಲ್ಲ. ಏರ್​ಟೆಲ್ ಕಚೇರಿಯಲ್ಲಿ ರೈತನ ಬೆರಳಚ್ಚು ಸರಿಹೋದರೆ ಒಂದು ದಿನಕ್ಕೆ ಗರಿಷ್ಠ 10 ಸಾವಿರ ರೂ.ನ್ನು ಬ್ಯಾಂಕ್ ಖಾತೆಗೆ ಜಮಾ ಮಾಡಿಸಿಕೊಳ್ಳಬಹುದು. ಪ್ರತಿ ಸಾವಿರಕ್ಕೆ 10 ರೂ. ಶುಲ್ಕ ಭರಿಸಬೇಕು. ರೈತನದ್ದು 30 ಸಾವಿರ ರೂ. ಜಮಾ ಆಗಿದ್ದರೆ ಆತ 3 ದಿನ ಏರ್​ಟೆಲ್ ಕಚೇರಿಗೆ ಅಲೆದು ಬೆರಳಚ್ಚು ಕೊಡಬೇಕು.

    ಡಿ ಲಿಂಕ್ ಮಾಡಿಸಿ ಮತ್ತೆ ಜೋಡಿಸಿ

    ಜನರ ಆಧಾರ್ ಬೇರೆ ಬ್ಯಾಂಕ್/ಪೇಮೆಂಟ್ ಬ್ಯಾಂಕ್ ಖಾತೆಗೆ ಜೋಡಣೆಯಾಗಿದ್ದಲ್ಲಿ, ಪುನಃ ಮೂಲ ಬ್ಯಾಂಕ್ ಖಾತೆಗೆ ಜೋಡಿಸಿಕೊಳ್ಳಬಹುದು. ಅದಕ್ಕಾಗಿ ಮೂಲ ಬ್ಯಾಂಕ್ ಖಾತೆ ಇರುವ ಶಾಖೆಗೆ ಹೋಗಿ, ಈ ಹಿಂದೆ ಜೋಡಿಸಿದ್ದ ಆಧಾರ್ ಸಂಖ್ಯೆಯನ್ನು ‘ಡಿ ಲಿಂಕ್’ ಮಾಡಿಸಬೇಕು. 24 ಗಂಟೆ ನಂತರ ಪುನಃ ಅದೇ ಖಾತೆಗೆ ಆಧಾರ್ ಜೋಡಿಸಿಕೊಳ್ಳಬೇಕು. ಆಗ, ಮೂಲ ಬ್ಯಾಂಕ್ ಖಾತೆಯೇ ‘ಇತ್ತೀಚೆಗೆ ಆಧಾರ್ ಜೋಡಣೆ ಆಗಿರುವ ಖಾತೆ’ ಎಂದಾಗುತ್ತದೆ. ಆ ಖಾತೆಗೆ ನೇರ ನಗದು ಜಮಾ ಆಗುತ್ತದೆ.

    ಏರ್​ಟೆಲ್ ಸಿಮ್ ನೀಡುವಾಗಲೇ ಪೇಮೆಂಟ್ ಬ್ಯಾಂಕ್ ಖಾತೆ ತೆರೆಯುವ ಕುರಿತು ನಮ್ಮ ಮಾರುಕಟ್ಟೆ ವಿಭಾಗದ ಪ್ರತಿನಿಧಿಗಳು ಗ್ರಾಹಕರಿಗೆ ತಿಳಿಸಿರುತ್ತಾರೆ. ಇದರಲ್ಲಿ ಯಾವುದೇ ವಂಚನೆ ಇಲ್ಲ. ರೈತರ ಹಣ ಜಮಾ ಆಗಿದ್ದನ್ನು ರೈತರು ನಮ್ಮ ಏರ್​ಟೆಲ್ ಕಚೇರಿಗೆ ಬಂದು ಬೆರಳಚ್ಚು ನೀಡಿ, ತಮ್ಮ ಬ್ಯಾಂಕ್ ಖಾತೆಗೆ ವರ್ಗಾಯಿಸಿಕೊಳ್ಳಬಹುದು.

    | ಏರ್​ಟೆಲ್ ಪೇಮೆಂಟ್ ಬ್ಯಾಂಕ್ ವ್ಯವಸ್ಥಾಪಕ ಹá-ಬ್ಬಳ್ಳಿ

    ಏರ್​ಟೆಲ್ ಪೇಮೆಂಟ್ ಬ್ಯಾಂಕ್ ಖಾತೆಗೆ ರೈತರ ಪರಿಹಾರಧನ, ಸಹಾಯಧನ ಜಮಾ ಆಗಿರುವುದು ಗಮನಕ್ಕೆ ಬಂದಿಲ್ಲ. ಈ ಬಗ್ಗೆ ರೈತರು ನೇರವಾಗಿ ನನ್ನ ಗಮನಕ್ಕೆ ತಂದರೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು.

    | ದೀಪಾ ಚೋಳನ್ ಧಾರವಾಡ ಜಿಲ್ಲಾಧಿಕಾರಿ

    ರೈತರು ಇತ್ತೀಚೆಗೆ ಯಾವ ಖಾತೆಗೆ ಆಧಾರ್ ಜೋಡಿಸಿ ಕೊಂಡಿದ್ದಾರೋ ಆ ಖಾತೆಗೆ ಇ-ಆಡಳಿತ ವಿಭಾಗದಿಂದ ಹಣ ಸಂದಾಯವಾಗುತ್ತೆ. ಕಚೇರಿಗೆ ಬಂದ ರೈತರಿಗೆ ಅವರ ಹಣ ಯಾವ ಖಾತೆಗೆ ಹೋಗಿದೆ ಎಂದು ಮಾಹಿತಿ ನೀಡುತ್ತಿದ್ದೇವೆ.

    |ರಾಜಶೇಖರ ಬಿಜಾಪುರ ಜಂಟಿ ಕೃಷಿ ನಿರ್ದೇಶಕ, ಧಾರವಾಡ

    ರೈತರು ಯಾವ ಖಾತೆಗೆ ಹಣ ಸಂದಾಯ ಆಗಬೇಕೆಂದು ಬಯಸುತ್ತಾರೋ ಆ ಖಾತೆಗೆ ಆಧಾರ್​ಸಂಖ್ಯೆ ಜೋಡಿಸಿ ಕೊಳ್ಳಬೇಕು. ಇತ್ತೀಚೆಗೆ ಬೇರೆ ಖಾತೆಗೆ ಆಧಾರ್ ಸಂಖ್ಯೆ ಜೋಡಣೆಯಾಗಿದ್ದಲ್ಲಿ, ಪುನಃ ತಮ್ಮ ಬ್ಯಾಂಕ್ ಖಾತೆಗೇ ಆಧಾರ್ ಜೋಡಿಸಲು ಅವಕಾಶವಿದೆ.

    | ಈಶ್ವರನಾಥ್ ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts