ಖರ್ಚಾಗದ ಶಾಸಕರ ನಿಧಿ ಸಾಲಮನ್ನಾಕ್ಕೆ ಬಳಕೆ?

ಬೆಂಗಳೂರು: ರೈತರ ಸಾಲಮನ್ನಾಕ್ಕೆ ಅಗತ್ಯವಾಗಿರುವ ಸಂಪನ್ಮೂಲ ಕ್ರೋಡೀಕರಿಸಲು ಹರಸಾಹಸ ಮಾಡುತ್ತಿರುವ ರಾಜ್ಯ ಸರ್ಕಾರ ಈಗ ಹೊಸ ಆರ್ಥಿಕ ಮೂಲಗಳನ್ನು ಕಂಡುಕೊಳ್ಳಲು ಮುಂದಾಗಿದೆ. ಶಾಸಕರ ನಿಧಿಯಲ್ಲಿ ಬಳಕೆಯಾಗದೆ ಉಳಿದಿರುವ ಅನುದಾನ ಮತ್ತು ಬೆಂಗಳೂರಿನಲ್ಲಿರುವ ಸರ್ಕಾರಿ ಆಸ್ತಿಗಳಿಂದ ಲಭ್ಯವಾಗುವ ಮೊತ್ತವನ್ನು ಸಾಲಮನ್ನಾಕ್ಕೆ ಬಳಸಿಕೊಳ್ಳಲು ನಿರ್ಧರಿಸಿದೆ ಎನ್ನಲಾಗಿದೆ. 2013ರಿಂದ 2015-16ರವರೆಗೆ ಶಾಸಕರು ಬಳಸಿಕೊಳ್ಳದ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿ ಕುರಿತು ತಕ್ಷಣ ಮಾಹಿತಿ ನೀಡುವಂತೆ ಎಲ್ಲ್ಲ ಜಿಲ್ಲಾಧಿಕಾರಿಗಳಿಗೆ ಸರ್ಕಾರ ಪತ್ರ ಬರೆದಿದೆ.

ನಿಯಮ ಏನು?: 2014ರ ಮೇನಲ್ಲಿ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯ ಪರಿಷ್ಕೃತ ಮಾರ್ಗಸೂಚಿ ಹೊರಡಿಸಲಾಗಿದೆ. ಬಿಡುಗಡೆಯಾದ ನಿಧಿಗಳ ಪೈಕಿ ಬಳಕೆಯಾಗದ ಹಣ ಜಿಲ್ಲಾಧಿಕಾರಿಗಳ ಬಳಿ ಇದ್ದರೆ ಅದನ್ನು ಮುಂದಿನ ವರ್ಷಕ್ಕೆ ಮಾತ್ರ ಉಪಯೋಗಿಸಬಹುದು. ಮುಂದಿನ ವರ್ಷದ ಕೊನೆಯಲ್ಲಿ ಹಣ ಖರ್ಚಾಗದೇ ಉಳಿದರೆ ಅನುದಾನ ರದ್ದುಗೊಳಿಸಲಾಗುತ್ತದೆ.

ಯಾವ ಸರ್ಕಾರದಲ್ಲಿ ಎಷ್ಟು ಉಳಿಕೆ?

ಬಿಜೆಪಿ ಸರ್ಕಾರದ ಅವಧಿಯಲ್ಲಿ 391 ಕೋಟಿ ರೂ. ಬಳಕೆ ಆಗದೆ ಉಳಿದಿತ್ತು. ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿ ಹಾಗೂ ಬಿಜೆಪಿ ಅವಧಿಯದ್ದು ಸೇರಿ 1002 ಕೋಟಿ ರೂ. ಉಳಿದಿದೆ ಎಂದು ಸರ್ಕಾರದ ಮೂಲಗಳು ಹೇಳುತ್ತವೆ. 2017-18ನೇ ಸಾಲಿನ ವಿವರಗಳು ಇನ್ನೂ ಲಭ್ಯವಾಗಬೇಕಾಗಿದೆ.

ನಿಧಿ ಏಕೆ ಬಳಕೆಯಾಗುತ್ತಿಲ್ಲ?

  • ಸರ್ಕಾರದ ನಿಯಮಾವಳಿ ಸಮಸ್ಯೆ
  • ಕಾಮಗಾರಿಗೆ ಕಾನೂನು ಅಡೆತಡೆ
  • ಶಿಫಾರಸು ಬಳಿಕ ಹಣ ಬಿಡುಗಡೆ ವಿಳಂಬ
  • ಶಾಸಕರು ಬಳಸದ ಅನುದಾನ ಎರಡು ವರ್ಷದ ಬಳಿಕ ರದ್ದು
  • ಮ್ಯಾಚಿಂಗ್ ಗ್ರಾಂಟ್ ಬಿಡುಗಡೆಯಾದೇ ಶಿಫಾರಸಿಗೆ ಸೀಮಿತವಾದ ಹಣ
  • ಟೆಂಡರ್ ಪ್ರಕ್ರಿಯೆ, ಸರ್ಕಾರಿ ಕಚೇರಿಯಲ್ಲಿ ಕಡತ ವಿಲೇವಾರಿ ವಿಳಂಬ

ಪತ್ರದಲ್ಲಿ ಏನಿದೆ?

ಯಾವ ಕಾಮಗಾರಿಗಳು ಅರ್ಧಕ್ಕೆ ನಿಂತಿವೆ? ಆ ಕಾಮಗಾರಿಯ ಅವಶ್ಯಕತೆ ಇದೆಯೇ? ಎಂದು ಪತ್ರದಲ್ಲಿ ಪ್ರಶ್ನಿಸಲಾಗಿದೆ. 2013-14ರಿಂದ 2016-17ರವರೆಗೆ ನಿಗದಿತ ಅನುದಾನ ಖರ್ಚಾಗದ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಕಾಮಗಾರಿಯನ್ನು ರದ್ದುಪಡಿಸಲು ಸ್ಪಷ್ಟವಾಗಿ ಸೂಚಿಸಲಾಗಿದೆ. ಅಂದಾಜು ಪ್ರತಿ ಸ್ವೀಕೃತವಾಗದೆ ಆಡಳಿತಾತ್ಮಕ ಮಂಜೂರಾತಿಗೆ ಬಾಕಿ ಇದ್ದ ಕಾಮಗಾರಿಗಳನ್ನೂ ರದ್ದುಪಡಿಸಲು ಸೂಚನೆ ನೀಡಲಾಗಿದೆ. ಪ್ರಮುಖವಾಗಿ ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ, ಲೋಕೋಪಯೋಗಿ ಇಲಾಖೆ, ಬಂದರು ಮತ್ತು ಒಳನಾಡು ಸಾರಿಗೆ ಇಲಾಖೆ, ಗ್ರಾಮೀಣ ಕುಡಿಯುವ ನೀರು, ನೈರ್ಮಲ್ಯ ವಿಭಾಗಗಳ ಮೇಲೆ ಹೆಚ್ಚಿನ ಗಮನಹರಿಸಲಾಗಿದೆ. ಅನುದಾನ ಸದ್ಬಳಕೆಯಾಗದೆ ಬ್ಯಾಂಕ್​ನಲ್ಲೇ ಕೊಳೆಯಬೇಕೇ ಎಂಬುದು ಆರ್ಥಿಕ ಇಲಾಖೆ ಪ್ರಶ್ನೆಯಾಗಿದೆ.

2 ಸಾವಿರ ಕೋಟಿ ರೂ.

ವಿವಿಧ ಜಿಲ್ಲೆಗಳು ಈಗಾಗಲೇ ಸರ್ಕಾರಕ್ಕೆ ಮಾಹಿತಿ ನೀಡಿವೆ. ದೊಡ್ಡ ಮೊತ್ತ ಉಳಿದಿರುವ ಜಿಲ್ಲೆಗಳಿಂದ ಬುಕ್ ಅಡ್ಜಸ್ಟ್​ಮೆಂಟ್ ಕೆಲಸವನ್ನೂ ಹಣಕಾಸು ಇಲಾಖೆ ಆರಂಭಿಸಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ರಾಜ್ಯಾದ್ಯಂತ ಶಾಸಕರ ನಿಧಿ ಸಹಿತ ವಿವಿಧ ಉದ್ದೇಶಕ್ಕಾಗಿ ನೀಡಲಾಗಿದ್ದ ಎರಡು ಸಾವಿರ ಕೋಟಿ ರೂ. ಅನುದಾನ ಬಳಕೆಯಾಗಿಲ್ಲ ಎಂದು ಅಂದಾಜಿಸಲಾಗಿದೆ. ಇದನ್ನು ಹೊಂದಿಸಲು ಅವಕಾಶವಿದೆ ಎಂದು ಅಧಿಕಾರಿಗಳು ಮುಖ್ಯಮಂತ್ರಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.