ಗ್ರಾಮಾಭಿವೃದ್ಧಿಯಲ್ಲಿ ಕೊಪ್ಪ ವಲಯಕ್ಕೆ ಆರನೇ ಸ್ಥಾನ

ಕೊಪ್ಪ: ಕೊಪ್ಪ, ಶೃಂಗೇರಿ, ಎನ್.ಆರ್.ಪುರ ಮೂರು ತಾಲೂಕುಗಳನ್ನು ಒಳಗೊಂಡ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೊಪ್ಪ ವಲಯಕ್ಕೆ ಆರನೇ ಸ್ಥಾನ ಲಭಿಸಿದೆ ಎಂದು ಯೋಜನಾಧಿಕಾರಿ ಡಿ.ದಿನೇಶ್ ತಿಳಿಸಿದ್ದಾರೆ.

ಕೊಪ್ಪ ವಲಯದಲ್ಲಿ 78 ಕೋಟಿ ರೂ. ಸಾಲ ವಿತರಿಸಿದ್ದು ಶೇ.100 ಮರುಪಾವತಿಯೊಂದಿಗೆ ಒಟ್ಟು 105 ಕೋಟಿ ರೂ. ಹೊರಬಾಕಿ ಸಾಲ ಹೊಂದಿದೆ. 2,750 ಸಂಘಗಳಿಂದ ಒಟ್ಟು 22,570 ಸದಸ್ಯರನ್ನು ಹೊಂದಿದ್ದು, 1.76 ಕೋಟಿ ರೂ. ಉಳಿತಾಯ ಮಾಡಲಾಗಿದೆ. ಸದಸ್ಯರಿಗೆ ಉಳಿತಾಯ ಮತ್ತು ಜೀವವಿಮೆ ಬಗ್ಗೆ ಜಾಗೃತಿ ಮೂಡಿಸಿ 9,400 ಜೀವನ ಮಧುರ ಪಾಲಿಸಿಗಳನ್ನು ರಿನಿವಲ್ ಮಾಡಿಸಲಾಗಿದೆ. ಬ್ಯಾಂಕಿಂಗ್ ವ್ಯವಹಾರ ಮತ್ತು ಸರ್ಕಾರಿ ಯೋಜನೆ ಮಾಹಿತಿ ನೀಡಿ 1,350 ಸದಸ್ಯರ ಪ್ರಧಾನಮಂತ್ರಿ ಸುರಕ್ಷಾ ಬಿಮಾ ಯೋಜನೆ ಹಾಗೂ 902 ಸದಸ್ಯರ ಪ್ರಧಾನಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ ಮಾಡಿಸಲಾಗಿದೆ ಎಂದು ತಿಳಿಸಿದ್ದಾರೆ.

ಧರ್ವಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಅವರ ಆಶಯದಂತೆ ಕೊಪ್ಪ, ಶೃಂಗೇರಿ, ಎನ್.ಆರ್.ಪುರ ತಾಲೂಕು ಕೇಂದ್ರಗಳಲ್ಲಿ 134 ಧಾರ್ವಿುಕ ಕೇಂದ್ರಗಳ ಸ್ವಚ್ಛತೆ ಮಾಡಲಾಗಿದೆ. ಕೃಷಿಗೆ ಪ್ರೋತ್ಸಾಹ ನೀಡಲು 56 ಫಲಾನುಭವಿಗಳಿಗೆ 87,000 ರೂ. ಅನುದಾನ ನೀಡಲಾಗಿದೆ. ವಿವಿಧ ಕೃಷಿ ಉಪಕರಣ ಖರೀದಿಸಿದ 58 ಫಲಾನುಭವಿಗಳಿಗೆ 77,000 ರೂ. ಅನುದಾನ ನೀಡಲಾಗಿದೆ ಎಂದು ಹೇಳಿದ್ದಾರೆ.

ಸೋಲಾರ್ ಅಳವಡಿಕೆಗೆ 350 ಫಲಾನುಭವಿಗಳಿಗೆ ಒಟ್ಟು 1.75 ಲಕ್ಷ ರೂ. ಅನುದಾನ ವಿತರಿಸಲಾಗಿದೆ. 10 ಕುಟುಂಬಗಳಿಗೆ ಗೋಬರ್ ಗ್ಯಾಸ್ ಅಳವಡಿಕೆಗೆ 10 ಸಾವಿರ ರೂ .ಅನುದಾನ ವಿತರಿಸಲಾಗಿದೆ. ಪರಿಸರ ಸಂರಕ್ಷಣೆ ಕುರಿತು 142 ಕಾರ್ಯಕ್ರಮ ನಡೆಸಲಾಗಿದೆ. ಶೃಂಗೇರಿ ಕ್ಷೇತ್ರ ವ್ಯಾಪ್ತಿಯ 99 ತಾಂತ್ರಿಕ ವಿದ್ಯಾಭ್ಯಾಸ ನಡೆಸುವ ವಿದ್ಯಾರ್ಥಿಗಳಿಗೆ ಸುಜ್ಞಾನ ಶಿಷ್ಯ ವೇತನ ನೀಡಲಾಗುತ್ತಿದೆ. ಈ ಎಲ್ಲ ಸಾಧನೆ ಗುರುತಿಸಿ ಸಂಸ್ಥೆ ಅಧ್ಯಕ್ಷ ಡಿ.ವೀರೇಂದ್ರ ಹೆಗ್ಗಡೆ ಅವರು ತಾಲೂಕಿನ ಯೋಜನಾಧಿಕಾರಿ ದಿನೇಶ್​ಗೆ ಪ್ರಶಸ್ತಿ ಪ್ರದಾನ ಮಾಡಿದರು ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.