ರೈತರ ಸಮಸ್ಯೆಗೆ ಪರಿಹಾರ ನೀಡುವ ನಾಯಕರಿಲ್ಲ

blank

ಚನ್ನಗಿರಿ: ಪ್ರತಿ ವರ್ಷ ದೇಶದಲ್ಲಿ 11,290 ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಯಾವುದೇ ಸರ್ಕಾರ ರೈತರ ಹೆಸರಿನಲ್ಲಿ ಅಧಿಕಾರಕ್ಕೆ ಬಂದರೂ ಅವರ ಸಮಸ್ಯೆಗಳಿಗೆ ಪರಿಹಾರ ನೀಡುವ ನಾಯಕರು ಇಲ್ಲದಂತಾಗಿದೆ ಎಂದು ಅಂತಾರಾಷ್ಟ್ರೀಯ ರೈತ ಸಂಘಟಕಿ ಚುಕ್ಕಿ ನಂಜುಂಡಸ್ವಾಮಿ ತಿಳಿಸಿದರು.

blank

ತಾಲೂಕಿನ ಪಾಂಡೋಮಟ್ಟಿ ಗ್ರಾಮದ ವಿರಕ್ತಮಠದಲ್ಲಿ ಶನಿವಾರ ಬಸವತತ್ವದ ಮಹಾ ಬೆಳಗಿನಲ್ಲಿ ಬೆಳಗಿದ ಲಿಂಗೈಕ್ಯ ಶ್ರೀಸಂಗಮನಾಥ ಮಹಾಸ್ವಾಮಿಗಳ 63ನೇ, ಲಿಂಗೈಕ್ಯ ಶ್ರೀ ಚನ್ನಬಸವ ಮಹಾಸ್ವಾಮಿಗಳ 18ನೇ ವರ್ಷದ ಸ್ಮರಣೋತ್ಸವ ಮತ್ತು ಬಸವತತ್ವ ಸಮ್ಮೇಳನದ ಹಿನ್ನೆಲೆ ಹಮ್ಮಿಕೊಳ್ಳಲಾಗಿದ್ದ ರೈತ ಸಂಗಮ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕೃಷಿ ಕ್ಷೇತ್ರಕ್ಕೆ ಹಾಗೂ ರೈತರಿಗೆ ದೊಡ್ಡ ಸವಾಲುಗಳು ಎದುರಾಗಲಿದೆ. ದೇಶದಲ್ಲಿ ಶೇ. 47 ರಷ್ಟು ಜನರು ಕೃಷಿಯನ್ನೇ ನಂಬಿಕೊಂಡಿದ್ದಾರೆ. ಆದರೆ ಆಳುವ ಸರ್ಕಾರ ಅಭಿವೃದ್ಧಿ, ವಿಮಾನ ನಿಲ್ದಾಣ, ರಸ್ತೆ ಇನ್ನೂ ಅನೇಕ ಹೆಸರಿನಲ್ಲಿ ಉಳುಮೆ ಭೂಮಿಯನ್ನು ಕಿತ್ತುಕೊಂಡು ರೈತರನ್ನು ಬೀದಿಗೆ ತಳ್ಳುವ ಕೆಲಸ ಮಾಡುತ್ತಿದೆ.

ಬೆಂಗಳೂರಿನಂತಹ ನಗರಗಳಲ್ಲಿ ಗ್ರಾಮೀಣ ಭಾಗದ ರೈತರ ಮಕ್ಕಳು ಕೂಲಿ ಕೆಲಸ ಮಾಡಿಕೊಂಡು ಬದುಕುತ್ತಿದ್ದಾರೆ, ಇರಲು ವಸತಿ ಇಲ್ಲದೆ ರಸ್ತೆ, ಪಾರ್ಕ್ ಹಾಗೂ ವಾಹನಗಳಲ್ಲಿ ಮಲಗಿ ಸಾರ್ವಜನಿಕ ಶೌಚಗೃಹಗಳಲ್ಲಿ ಸ್ನಾನ ಮಾಡುವ ಸ್ಥಿತಿಯಿದೆ ಎಂದರು.

ಮಾರುಕಟ್ಟೆಗಳು ಕೃಷಿಯನ್ನು ತನ್ನ ಮುಷ್ಠಿಯಲ್ಲಿ ಇಟ್ಟುಕೊಂಡಿದೆ. ರೈತರು ಬೆಳೆದ ಬೆಳೆಗಳಿಗೆ ಸರ್ಕಾರ ಇಂದಿಗೂ ನಿರ್ದಿಷ್ಟ ಬೆಲೆಯನ್ನು ನಿಗದಿ ಮಾಡದೆ ಅವರ ಜೀವನದ ಜತೆ ಆಟವಾಡುತ್ತಿದೆ. ಹಣದಾಸೆಗಾಗಿ ರೈತರು ಏಕ ಬೆಳೆಯನ್ನು ಬೆಳೆದು ಭೂಮಿಯ ಫಲವತ್ತತೆಯನ್ನು ನಾಶಮಾಡುತ್ತಿದ್ದಾರೆ. ಇದು ಮುಂದುವರಿದಲ್ಲಿ ನೀರು ಮತ್ತು ಆಹಾರಕ್ಕಾಗಿ ಕ್ರಾಂತಿ ಆಗುವುದರಲ್ಲಿ ಅನುಮಾನವಿಲ್ಲ ಎಂದು ತಿಳಿಸಿದರು.

ಬಂಡವಾಳಶಾಹಿಗಳು ಲಾಭ ಪಡೆಯಲು ರಾಸಾಯನಿಕ ಬೀಜ, ಗೊಬ್ಬರವನ್ನು ರೈತರಿಗೆ ನೀಡಿ ಸ್ವಂತವಾಗಿ ಮಾಡಿಕೊಳ್ಳುತ್ತಿದ್ದ ಬೀಜ, ಗೊಬ್ಬರ ಮರೆತು ಹೋಗಿವೆ. ಇಲಾಖೆ ನೀಡುವ ಗೊಬ್ಬರದ ಮೇಲೆ ಅವಲಂಬಿತರಾಗಿದ್ದಾರೆ. ರೈತರು ಭೂಮಿಯ ಫಲವತ್ತತೆಯನ್ನು ಕಾಪಾಡಬೇಕಿದೆ ಎಂದರು.

ಅಮೆರಿಕದ ವೈದ್ಯ ಡಾ. ವಿಶ್ವನಾಥ್ ಗುಡ್ಡದಾರ್ ಮಾತನಾಡಿ, ಆರೋಗ್ಯದ ಬಗ್ಗೆ ಎಚ್ಚರ ವಹಿಸಬೇಕು. ಸ್ವಾಸ್ಥ್ಯ ಚೆನ್ನಾಗಿದ್ದರೆ ಮಾತ್ರ ಎಲ್ಲ ಕೆಲಸಗಳನ್ನು ಮಾಡಲು ಸಾಧ್ಯ. ಪಾಶ್ಚಾತ್ಯ ದೇಶಗಳಲ್ಲಿ ಹೆಚ್ಚಾಗಿ ಆಯುರ್ವೆದವನ್ನು ಅವಲಂಬಿಸಿದ್ದಾರೆ. ಆಯಸ್ಸು ವೃದ್ಧಿಯಾಗಲು ಆಯುರ್ವೆದ ಮುಖ್ಯವಾಗಿದೆ. ಉತ್ತಮ ಆಹಾರ ಪದ್ಧತಿಯನ್ನು ರೂಢಿಸಿಕೊಳ್ಳಬೇಕು, ದುಶ್ಚಟಗಳಿಂದ ದೂರವಿರಬೇಕು ಎಂದು ಸಲಹೆ ನೀಡಿದರು.

ಕೂಡ್ಲಿಗಿ ಎಚ್.ವಿ. ಸಜ್ಜನ್ ಮಾತನಾಡಿ, ರೈತರು ಹೆಚ್ಚು ಹಣ ಮಾಡುವ ಆಸೆಯಲ್ಲಿ ಲಾಭ ನೀಡುವ ಮರ ಬೆಳೆಯುವುದನ್ನು ಮರೆತಿದ್ದಾರೆ. ಮಳೆ ಹೋಗಿ ಬರಗಾಲ ಬಂದರೆ ಮರಗಳು ಒಣಗುವುದಿಲ್ಲ, ಅವುಗಳು ಜೀವನ ನೀಡುತ್ತವೆ. ನೇರಳೆ, ಹುಣಸೆ, ಪೇರಲೆ, ನೆಲ್ಲಿಕಾಯಿ ಮರಗಳನ್ನು ಬೆಳೆದು ಹೆಚ್ಚು ಲಾಭವನ್ನು ಪಡೆಯಬಹುದು. ಮರಗಳು ಭೂಮಿಯ ಮೇಲಿನ ಅಭರಣಗಳು ಎಂದರು.

ಪಾಂಡೋಮಟ್ಟಿ ವಿರಕ್ತಮಠದ ಶ್ರೀ ಡಾ. ಗುರುಬಸವ ಸ್ವಾಮೀಜಿ ಮಾತನಾಡಿ, ದೇಶದಲ್ಲಿ ಮುಂದಿನ 25 ವರ್ಷಕ್ಕೆ ಆಹಾರದ ಸಮಸ್ಯೆ ಕಾಡಲಿದೆ. ಸರ್ಕಾರ ಅಭಿವೃದ್ಧಿ ಹೆಸರಿನಲ್ಲಿ ಜೀವನೋಪಾಯಕ್ಕಾಗಿ ಇಟ್ಟುಕೊಂಡ ಜಮೀನುಗಳನ್ನು ವಶಕ್ಕೆ ಪಡೆಯುವುದು ಸರಿಯಲ್ಲ ಎಂದರು.

ಜನರು ಬದಲಾದಂತೆ ಋತುಗಳು ಬದಲಾಗುತ್ತಿದೆ. ಸರಿಯಾದ ಸಮಯಕ್ಕೆ ಮಳೆ, ಚಳಿ, ಬಿಸಿಲು ಬೀಳದೆ ಎಲ್ಲವೂ ಅತಂತ್ರವಾಗಿದೆ. ರೈತಸಂಘ ಪ್ರಾರಂಭದಲ್ಲಿ ರಾಜ್ಯ ಸರ್ಕಾರವನ್ನು ನಡುಗಿಸುವ ಕೆಲಸ ಮಾಡುತ್ತಿತ್ತು. ಆದರೆ ಇಂದು ಸಂಘಟನೆಗಳು ಒಡೆದು ಹೋಗಿ ಅವುಗಳ ಶಕ್ತಿ ಕಳೆದುಕೊಳ್ಳುತ್ತಿದೆ. ಎಲ್ಲರೂ ಸಂಘಟಿತರಾಗಿ ಸರ್ಕಾರವನ್ನು ಎಚ್ಚರಿಸುವ ಕೆಲಸ ಮಾಡಬೇಕು ಎಂದರು.

ಎನ್.ಆರ್. ಪುರ ಬಸವಕೇಂದ್ರದ ಶ್ರೀ ಬಸವಯೋಗಿ ಸ್ವಾಮೀಜಿ, ಬೆಟ್ಟದಹಳ್ಳಿ ಗವಿಮಠದ ಶ್ರೀ ಚಂದ್ರಶೇಖರ ಸ್ವಾಮೀಜಿ, ಕೊರಟಿಕೆರೆ ತಾಲೂಕು ಎಲೆರಾಂಪುರ ಶ್ರೀಹನುಂತನಾಥ ಸ್ವಾಮೀಜಿ, ಸಹಕಾರ ರತ್ನ ಪುರಸ್ಕೃತ ಜೆ.ಆರ್. ಷಣ್ಮುಖಪ್ಪ, ಚಿಕ್ಕಮಗಳೂರು ಚಂದ್ರಶೇಖರ ನಾರಾಯಣಪುರ ಇದ್ದರು.

Share This Article

ಕನಸಿನಲ್ಲಿ ಈ ಮೂರು ಪಕ್ಷಿಗಳು ಕಂಡ್ರೆ ಲಾಟರಿ ಹೊಡೆದಂತೆ! Lucky Birds ನೀಡುವ ಸುಳಿವೇನು..?

Lucky Birds : ಸಾಮಾನ್ಯವಾಗಿ ನಿದ್ದೆಯಲ್ಲಿ ಕನಸು ಕಾಣೋದು ಸಹಜ. ಈ ಕನಸುಗಳ ಮೂಲಕ ಪ್ರಕೃತಿ…

ಯಾವ ಕಾರಣಕ್ಕೂ ಮಾವಿನ ವಾಟೆ ಎಸೆಯಬೇಡಿ…ಅದರ ಪ್ರಯೋಜನಗಳ ಬಗ್ಗೆ ತಿಳಿದ್ರೆ ನೀವು ಖಂಡಿತ ಅಚ್ಚರಿಪಡ್ತೀರಾ! Mango Kernels

Mango Kernels : ಮಾವಿನ ಹಣ್ಣನ್ನು ಹಣ್ಣುಗಳ ರಾಜ ಎಂದು ಕರೆಯುತ್ತಾರೆ. ರುಚಿಗೆ ಮಾತ್ರವಲ್ಲ, ಮಾವಿನ…

ಪ್ಲಾಸ್ಟಿಕ್ ಬಾಕ್ಸ್​​ನಲ್ಲಿ ಬಿಸಿ ಅನ್ನ ಇಡುವ ಅಭ್ಯಾಸವಿದೆಯೇ? ಆರೋಗ್ಯದ ಬಗ್ಗೆ ಇರಲಿ ಎಚ್ಚರ.. hot rice in plastic boxes

hot rice in plastic boxes: ಪ್ಲಾಸ್ಟಿಕ್ ಬಳಕೆಯನ್ನು ತಡೆಯಲಾಗುತ್ತಿಲ್ಲ. ಪ್ಲಾಸ್ಟಿಕ್ ಪಾತ್ರೆಗಳನ್ನು ಬಳಸುವುದು ಹಾನಿಕಾರಕ,…