ರೈತರ ಪ್ರತಿಭಟನೆಯಿಂದ ಮಹಾ ಡೇರಿಗಳು ಬಂದ್

ಮಾಂಜರಿ: ಹಾಲಿಗೆ ಬೆಂಬಲ ಬೆಲೆ ನಿಗದಿಪಡಿಸುವಂತೆ ಆಗ್ರಹಿಸಿ ಮಹಾರಾಷ್ಟ್ರದ ರೈತಪರ ಸಂಘಟನೆಗಳು ಜು. 16ರಿಂದ ಕರೆ ನೀಡಿರುವ ಡೇರಿ ಬಂದ್‌ನಿಂದಾಗಿ ಮಹಾರಾಷ್ಟ್ರಕ್ಕೆ ರವಾನೆಯಾಗುತ್ತಿದ್ದ ಗಡಿಭಾಗದ ಹೈನುಗಾರರ ಲಕ್ಷಾಂತರ ಲೀಟರ್ ಹಾಲು ಬುಧವಾರವೂ ನಾಶವಾಗುವಂತಾಗಿದೆ.

ಮಹಾರಾಷ್ಟ್ರದ ಗೋಕುಳ ಹಾಲು ಸಂಗ್ರಹಣಾ ಸಂಸ್ಥೆ ಹಾಗೂ ಇನ್ನಿತರ ಸಂಸ್ಥೆಗಳು ಹಾಲು ಖರೀದಿ ದರ ಕಡಿಮೆ ಮಾಡಿರುವುದನ್ನು ಖಂಡಿಸಿ ಮಹಾರಾಷ್ಟ್ರದ ರೈತಪರ ಸಂಘಟನೆಗಳು ಹೋರಾಟ ಮಾಡಲು ನಿರ್ಧರಿವೆ. ಇದರಿಂದಾಗಿ ಮಹಾರಾಷ್ಟ್ರಕ್ಕೆ ಹಾಲು ಸಾಗಿಸುತ್ತಿದ್ದ ಡೇರಿಗಳ ಬಾಗಿಲು ಬಂದ್ ಮಾಡಲಾಗಿದೆ.

ಹಾಲು ಖರೀದಿ-ಮಾರಾಟ ಸ್ಥಗಿತ: ಗಡಿಮಹಾರಾಷ್ಟ್ರದ ಅಗ್ರಗಣ್ಯ ಸಂಸ್ಥೆ ಎಂದೇ ಖ್ಯಾತಿ ಪಡೆದಿರುವ ಗೋಕುಳ ಹಾಲು ಸಂಗ್ರಹಣಾ ಸಂಸ್ಥೆ ಸೇರಿ ಮಹಾರಾಷ್ಟ್ರದ ಎಲ್ಲ ಸಂಸ್ಥೆಗಳಿಗೆ ಹಾಲು ಸರಬರಾಜು ಮಾಡದಂತೆ ಸ್ಥಳೀಯ ಡೇರಿಗಳಿಗೆ ಒತ್ತಡ ಹೇರಿದ್ದ ಸ್ವಾಭಿಮಾನಿ ರೈತ ಸಂಘಟನೆ ಮುಖಂಡರು, ಮುಂಬೈ ಸೇರಿ ಪ್ರಮುಖ ನಗರಗಳಿಗೆ ಹಾಲು ಸರಬರಾಜಾಗುವುದನ್ನು ಸಹ ತಡೆದಿದ್ದಾರೆ.

ಎರಡು ತಿಂಗಳ ಹಿಂದೆ ಇದ್ದಕ್ಕಿದ್ದಂತೆ ಕರ್ನಾಟಕದ ಹಾಲು ಖರೀದಿ ಸ್ಥಗಿತಗೊಳಿಸುವ ಮೂಲಕ ರೈತರಿಗೆ ಶಾಕ್ ನೀಡಿದ್ದ ಗೋಕುಳ ಸಂಸ್ಥೆ, ಒತ್ತಡಕ್ಕೆ ಮಣಿದು ಹಾಲು ಖರೀದಿ ಪುನಃ ಆರಂಭಿಸಿತ್ತು. ಆದರೆ ಕಡಿಮೆ ದರ ಒಪ್ಪದ ಮಹಾರಾಷ್ಟ್ರದ ಸಂಘಟನೆಗಳು ಹಾಲಿಗೆ ಹೆಚ್ಚಿನ ಬೆಂಬಲ ಬೆಲೆ ಘೋಷಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರಲು ಹಾಲು ಸರಬರಾಜನ್ನು ತಡೆಹಿಡಿಯಲು ಮುಂದಾಗಿವೆ.

ಕರ್ನಾಟಕದಲ್ಲಿ ದರ ಕಡಿಮೆ: ಸ್ಥಳೀಯ ಹಾಲು ಉತ್ಪಾದನಾ ಸಂಸ್ಥೆಗಳಿಗಿಂತ ಹೆಚ್ಚಿನ ದರ ನೀಡಿ ಹಸುವಿನ ಹಾಲು ಖರೀದಿಸಲು ಮಹಾರಾಷ್ಟ್ರದ ಹಾಲು ಸಂಗ್ರಹಣಾ ಸಂಸ್ಥೆಗಳು ಮುಂದಾಗಿದ್ದರಿಂದ ಗಡಿಭಾಗದ ರೈತರು ಮಹಾರಾಷ್ಟ್ರದ ಸಂಸ್ಥೆಗಳಿಗೆ ಹಾಲು ಪೂರೈಕೆ ಮಾಡುತ್ತಿದ್ದರು. ಆದರೆ ಇದೀಗ ಕಡಿಮೆ ದರ ನೀಡುವ ಕರ್ನಾಟಕದ ಹಾಲು ಉತ್ಪಾದನಾ ಸಂಸ್ಥೆಗಳಿಗೆ ಹಾಲು ನೀಡಿದರೆ ಹೆಚ್ಚಿನ ಹೈನುಗಾರರಿಗೆ ನಷ್ಟವಾಗುತ್ತದೆ.