ಬತ್ತಿದೆ ಭತ್ತ ಬೆಳೆಯುವ ಆಸಕ್ತಿ

>

ವಿಜಯವಾಣಿ ಸುದ್ದಿಜಾಲ ಉಡುಪಿ
ಜಿಲ್ಲೆಯಲ್ಲಿ ವರ್ಷ ಕಳೆದಂತೆ ಭತ್ತದ ಕೃಷಿ ಬೆಳೆಯುವ ಪ್ರದೇಶ ಕಡಿಮೆಯಾಗುತ್ತಿದ್ದು, ಮುಂಗಾರು-ಹಿಂಗಾರಿನ 50 ಸಾವಿರ ಹೆಕ್ಟೇರ್ ಗುರಿಯಲ್ಲಿ 39,192 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಭತ್ತ ಬೆಳೆಯಲಾಗಿದೆ.

2018-19ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ಮುಂಗಾರಿನಲ್ಲಿ 44 ಸಾವಿರ ಹೆಕ್ಟೇರ್ ಪ್ರದೇಶ ಪೈಕಿ 35,487 ಹೆಕ್ಟೇರ್‌ನಲ್ಲಿ ಭತ್ತ ಕೃಷಿ ಮಾಡಲಾಗಿದೆ. ಹಿಂಗಾರಿನ 6 ಸಾವಿರ ಹೆಕ್ಟೇರ್ ಪ್ರದೇಶ ಗುರಿಯಲ್ಲಿ 3,705 ಹೆಕ್ಟೇರ್ ಭೂಮಿಯಲ್ಲಿ ಮಾತ್ರ ಭತ್ತ ಬೆಳೆಯಲಾಗಿದೆ.

9 ಸಾವಿರ ಹೆಕ್ಟೇರ್ ಮಾಯ: ಜಿಲ್ಲೆಯಲ್ಲಿ ಕಳೆದ 5 ವರ್ಷಗಳಲ್ಲಿ 9,076 ಹೆಕ್ಟೇರ್ ಪ್ರದೇಶದಲ್ಲಿ ಭತ್ತದ ಕೃಷಿ ಮಾಯವಾಗಿದೆ. 2013ರಲ್ಲಿ ಮುಂಗಾರಿನಲ್ಲಿ 44,563 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆದಿದ್ದು, 2018ರಲ್ಲಿ ಅದು 35,487 ಹೆಕ್ಟೇರ್ ಪ್ರದೇಶಕ್ಕೆ ಕುಸಿದಿದೆ. ಹೆಚ್ಚು ಇಳುವರಿ ಬರುವ, ಆಯಾಯ ಪ್ರದೇಶದ ನೀರಾವರಿ ಭೂಮಿಗೆ ಪೂರಕ ಭತ್ತದ ತಳಿಯನ್ನು ಕೃಷಿ ಇಲಾಖೆಯಿಂದ ನೀಡಬೇಕು. ಹೆಕ್ಟೇರ್‌ಗೆ ಪ್ರೋತ್ಸಾಹಧನ ಘೋಷಣೆ ಮಾಡಿದ್ದು, ಈ ಯೋಜನೆ ಸಮರ್ಪಕವಾಗಿ ಜಾರಿಯಾಗಬೇಕು ಎಂಬುದು ರೈತರ ಆಗ್ರಹ.

ಸಮಸ್ಯೆಗಳೇನು?: ರೈತರು ಭತ್ತದ ಕೃಷಿಯಿಂದ ವಿಮುಖರಾಗಲು ಉಪ್ಪು ನೀರಿನ ಸಮಸ್ಯೆ, ಕೂಲಿ, ನಿರ್ವಹಣೆ ಸಮಸ್ಯೆ, ಸೂಕ್ತ ಬೆಲೆ ಸಿಗದಿರುವುದು, ಹೆಚ್ಚುತ್ತಿರುವ ಉತ್ಪಾದನಾ ವೆಚ್ಚ ಪ್ರಮುಖ ಕಾರಣವಾಗಿದೆ.

ತೋಟಗಾರಿಕೆ ಬೆಳೆಗೆ ಆಸಕ್ತಿ: ರೈತರು ಭತ್ತಕ್ಕಿಂತ ಲಾಭದಾಯಕ ವಾಣಿಜ್ಯ ಬೆಳೆಗಳನ್ನು ಬೆಳೆಯಲು ಹೆಚ್ಚು ಒಲವನ್ನು ಹೊಂದಿದ್ದಾರೆ. ಭತ್ತದ ಗದ್ದೆಗಳನ್ನು ಅಡಕೆ, ಕಾಳುಮೆಣಸು ಸೇರಿದಂತೆ ತೋಟಗಾರಿಕೆ ಬೆಳೆಗಳಿಗೆ ವಿಸ್ತರಿಸುತ್ತಿದ್ದಾರೆ. ಉಡುಪಿ, ಕುಂದಾಪುರ, ಕಾರ್ಕಳ, ಬ್ರಹ್ಮಾವರ, ಪಡುಬಿದ್ರಿ, ಕಾಪು ನಗರ ಭಾಗದಲ್ಲಿ ರಿಯಲ್ ಎಸ್ಟೇಟ್ ವ್ಯವಹಾರ ಜೋರಾಗಿದ್ದು, ಗದ್ದೆಗಳು ಸೈಟ್‌ಗಳಾಗಿ ಪರಿವರ್ತನೆಯಾಗುತ್ತಿದೆ. ಬೃಹತ್ ವಾಣಿಜ್ಯ, ವಸತಿ ಸಮುಚ್ಚಯಗಳು ಇಲ್ಲಿ ತಲೆ ಎತ್ತಿವೆ. ರಾಜ್ಯ, ರಾಷ್ಟ್ರೀಯ ಹೆದ್ದಾರಿ ಅಕ್ಕಪಕ್ಕದ ಗದ್ದೆಗಳಿಗೆ ಬೇಡಿಕೆ ಹೆಚ್ಚುತ್ತಿದೆ.

ಎಲ್ಲೆಲ್ಲಿ ಎಷ್ಟು ಬೆಳೆ?: ಮುಂಗಾರಿನಲ್ಲಿ ಉಡುಪಿ ತಾಲೂಕು ವ್ಯಾಪ್ತಿಯಲ್ಲಿ 17,750 ಹೆಕ್ಟೇರ್ ಗುರಿಯಲ್ಲಿ 15,412 ಹೆಕ್ಟೇರ್, ಕಾರ್ಕಳದಲ್ಲಿ 8 ಸಾವಿರ ಹೆಕ್ಟೇರ್ ಗುರಿಯಲ್ಲಿ 6,347 ಹೆಕ್ಟೇರ್, ಕುಂದಾಪುರದಲ್ಲಿ 18,250 ಹೆಕ್ಟೇರ್ ಗುರಿಯಲ್ಲಿ 13,728 ಹೆಕ್ಟೇರ್ ಭತ್ತ ಬೆಳೆಯಲಾಗಿದೆ. ಹಿಂಗಾರಿನಲ್ಲಿ ಉಡುಪಿ 1 ಸಾವಿರ ಹೆಕ್ಟೇರ್ ಗುರಿಯಲ್ಲಿ 663, ಕಾರ್ಕಳದಲ್ಲಿ 2,500 ಹೆಕ್ಟೇರ್‌ನಲ್ಲಿ 1,746 ಹಾಗೂ ಕುಂದಾಪುರ 2,500 ಹೆಕ್ಟೇರ್ ಪ್ರದೇಶದಲ್ಲಿ 1,296 ಹೆಕ್ಟೇರ್ ಭೂಮಿಯಲ್ಲಿ ಭತ್ತ ಕೃಷಿ ಮಾಡಲಾಗಿದೆ.

ಜಿಲ್ಲೆಯಲ್ಲಿ ಭತ್ತ ಬೆಳೆಯುವ ಗದ್ದೆಗಳು ತೋಟಗಾರಿಕೆ ಬೆಳೆಗೆ ಪರಿವರ್ತನೆಯಾಗುತ್ತಿದೆ. ಈ ಹಿಂದಿನಿಂದಲೂ ನಮ್ಮ ಜಿಲ್ಲೆಗೆ ಬೇಕಾದಷ್ಟು ಭತ್ತ ಬೆಳೆಯಲಾಗುತ್ತಿಲ್ಲ. ಕೂಲಿ ಮತ್ತು ನಿರ್ವಹಣೆ ಸಮಸ್ಯೆ ರೈತರಿಗೆ ಹೊರೆಯಾಗುವ ಸಾಧ್ಯತೆ ಇದೆ. ಇಲಾಖೆ ವತಿಯಿಂದ ಭತ್ತ ಕೃಷಿಗೆ ಸಹಕಾರಿಯಾಗಲು ಬೇಕಾದ ಯಂತ್ರೋಪಕರಣಗಳು, ಎಲ್ಲ ರೀತಿಯ ಸಹಕಾರ ಕಲ್ಪಿಸಲಾಗುವುದು.
– ಕೆಂಪೇ ಗೌಡ, ಜಂಟಿ ನಿರ್ದೇಶಕ, ಕೃಷಿ ಇಲಾಖೆ ಉಡುಪಿ ಜಿಲ್ಲೆ