ಬ್ಯಾಂಕ್​ಗಳ ವಿರುದ್ಧ ಸೇಡಿನ ಅಸ್ತ್ರ

|ರುದ್ರಣ್ಣ ಹರ್ತಿಕೋಟೆ

ಬೆಂಗಳೂರು: ರೈತರ ಕೃಷಿ ಸಾಲದ ಮೇಲಿನ ಬಡ್ಡಿ ಮನ್ನಾಕ್ಕೆ ಒಪ್ಪದ ರಾಷ್ಟ್ರೀಕೃತ ಬ್ಯಾಂಕ್​ಗಳನ್ನು ಮಣಿಸಲು ಸೇಡಿನ ಅಸ್ತ್ರ ಹಿಡಿದಿರುವ ರಾಜ್ಯ ಸರ್ಕಾರ, ವಿವಿಧ ಬ್ಯಾಂಕ್​ಗಳಲ್ಲಿರುವ ಠೇವಣಿಯನ್ನು ಅಪೆಕ್ಸ್ ಬ್ಯಾಂಕ್​ಗೆ ವರ್ಗಾವಣೆ ಮಾಡುವ ನಿಟ್ಟಿನಲ್ಲಿ ಚರ್ಚೆ ಆರಂಭಿಸಿದೆ.

ರೈತರ ಸಾಲಮನ್ನಾದ ಕಂತುಗಳಿಗೆ ಒಪ್ಪಿರುವ ಬ್ಯಾಂಕ್​ಗಳು ಉದ್ಯಮಿಗಳಿಗೆ ಒಂದು ಅವಧಿ ತೀರುವಳಿಗೆ ಅವಕಾಶ ನೀಡುವಂತೆ ರೈತರ ಸಾಲದ ಬಡ್ಡಿ ಮನ್ನಾ ಮಾಡಲು ಒಪು್ಪತ್ತಿಲ್ಲ. ಇದರಿಂದಾಗಿ ಸರ್ಕಾರದ ಮೇಲೆ 7419 ಕೋಟಿ ರೂ. ಹೊರೆ ಬೀಳುತ್ತಿದೆ. ಸಣ್ಣ ರೈತರನ್ನು ಋಣಮುಕ್ತ ಮಾಡಿ ಹೊಸದಾಗಿ ಸಾಲ ದೊರಕಿಸಿಕೊಡುವ ಕ್ರಮವಾಗಿ ರೈತರಿನ್ನು ಲೇವಾದೇವಿದಾರರು ಹಾಗೂ ರಾಷ್ಟ್ರೀಕೃತ ಬ್ಯಾಂಕ್​ಗಳ ಮೊರೆ ಹೋಗದೆ ಸಹಕಾರ ಸಂಸ್ಥೆಗಳಿಗೇ ಬರುವಂತಾಗಬೇಕೆಂಬುದು ಸರ್ಕಾರದ ಆಶಯ. ಈ ಉದ್ದೇಶದಿಂದಲೇ ಸಹಕಾರ ವಲಯವನ್ನು ಆರ್ಥಿಕವಾಗಿ ಸದೃಢಗೊಳಿಸಲು ಇಂಥದ್ದೊಂದು ಮಹತ್ವದ ನಿರ್ಧಾರಕ್ಕೆ ಬಂದಿರುವುದಾಗಿ ಸರ್ಕಾರದ ಮೂಲಗಳು ತಿಳಿಸಿವೆ.

ಠೇವಣಿ ಹಿಂಪಡೆಯುವ ನಿರ್ಧಾರ ಕೈಗೊಂಡಲ್ಲಿ ರಾಷ್ಟ್ರೀಕೃತ ಬ್ಯಾಂಕ್​ಗಳು ಬಡ್ಡಿ ಮನ್ನಾಕ್ಕೆ ಒಪ್ಪಬಹುದೆಂಬುದು ಸರ್ಕಾರದ ದೂರಾಲೋಚನೆಯಾಗಿದೆ.

28 ಲಕ್ಷ ರೈತರು ಟಾರ್ಗೆಟ್

ಅಂದಾಜಿನ ಪ್ರಕಾರ ರಾಜ್ಯದಲ್ಲಿ 78 ಲಕ್ಷ ರೈತರಿದ್ದು, ಈ ಪೈಕಿ ಸಹಕಾರ ವಲಯದಲ್ಲಿ 22 ಲಕ್ಷ ಹಾಗೂ ರಾಷ್ಟ್ರೀಕೃತ ಬ್ಯಾಂಕ್​ಗಳಿಂದ 28 ಲಕ್ಷ ರೈತರು ಸಾಲ ಪಡೆಯುತ್ತಾರೆ. ಉಳಿದ 28 ಲಕ್ಷ ರೈತರಿಗೆ ಎಲ್ಲಿಯೂ ಸಾಲ ಸಿಗುತ್ತಿಲ್ಲ. ಇಂತಹ ರೈತರನ್ನು ಸಹಕಾರ ವಲಯದ ಕಕ್ಷೆಗೆ ತರುವುದು ಸರ್ಕಾರದ ಉದ್ದೇಶವಾಗಿದೆ.

5 ಸಾವಿರ ಕೋಟಿ ರೂ. ಅಗತ್ಯ

ಸಹಕಾರ ವಲಯದ ಕಕ್ಷೆಗೆ ತರುವ ರೈತರಿಗೆ ಕನಿಷ್ಠ 25 ಸಾವಿರ ರೂ. ಸಾಲ ನೀಡಬೇಕೆಂದರೂ 5,000 ಕೋಟಿ ರೂ. ಅಗತ್ಯವಿದೆ. ಸದ್ಯದ ಮಟ್ಟಿಗೆ ಸರ್ಕಾರ ಅಷ್ಟು ಮೊತ್ತ ಭರಿಸುವ ಸ್ಥಿತಿಯಲ್ಲಿ ಇಲ್ಲ. ಆದ್ದರಿಂದಲೇ ರಾಷ್ಟ್ರೀಕೃತ ಬ್ಯಾಂಕ್​ಗಳಲ್ಲಿರುವ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಬಳಕೆಯಾಗದ ಮೊತ್ತವನ್ನು ಅಪೆಕ್ಸ್ ಬ್ಯಾಂಕ್​ಗೆ ವರ್ಗಾವಣೆ ಮಾಡುವುದು ಸರ್ಕಾರದ ಉದ್ದೇಶವಾಗಿದೆ.

10 ಸಾವಿರ ಕೋಟಿ ನಿರೀಕ್ಷೆ

ವಿವಿಧ ಇಲಾಖೆಗಳಲ್ಲಿ ಬಳಕೆಯಾಗದ ಹಾಗೂ ಕಳ್ಳಗಂಟು ಹಲವು ಬ್ಯಾಂಕ್​ಗಳಲ್ಲಿ ಠೇವಣಿಯಾಗಿದೆ. ಇಂತಹ ಮೊತ್ತ 10 ಸಾವಿರ ಕೋಟಿ ರೂ. ಆಗಬಹುದೆಂದು ನಿರೀಕ್ಷಿಸಲಾಗಿದೆ.

ನಬಾರ್ಡ್ ಮೇಲೂ ಒತ್ತಡ

ನಬಾರ್ಡ್ ನೀಡುವ ಕೃಷಿ ಸಾಲ ಮೊತ್ತವನ್ನು ಶೇ. 60ರಿಂದ 40ಕ್ಕೆ ಇಳಿಸಿದೆ. ಇದರಿಂದಲೂ ಸಾಕಷ್ಟು ಸಮಸ್ಯೆಯಾಗಿದೆ. ಸಾಲ ಮೊತ್ತವನ್ನು ಶೇ.70ಕ್ಕೆ ಏರಿಸುವಂತೆ ನಬಾರ್ಡ್ ಮೇಲೆ ಸರ್ಕಾರ ಒತ್ತಡ ತಂದಿದೆ. ಆದರೆ ಹಿಂದಿನಂತೆ ಶೇ. 60ಕ್ಕೆ ನಿಗದಿ ಮಾಡಲು ನಬಾರ್ಡ್ ತಾತ್ವಿಕ ಒಪ್ಪಿಗೆ ನೀಡಿದೆ. ಕೇಂದ್ರದ ಅನುಮತಿಗಾಗಿ ಕಾಯುತ್ತಿದೆ. ಆ ರೀತಿಯಾದರೆ ಸಾಲ ನೀಡಲು ಒಂದು ಸಾವಿರ ಕೋಟಿ ನಬಾರ್ಡ್ ಕಡೆಯಿಂದ ಹೆಚ್ಚುವರಿಯಾಗಿ ದೊರಕುತ್ತದೆ.

ಸಿಗುವ ಸಾಲ ಎಷ್ಟು?

ರಾಜ್ಯದಲ್ಲಿ ಸಹಕಾರ ವಲಯದಿಂದ 22 ಲಕ್ಷ ರೈತರಿಗೆ ಸಾಲ ಸಿಗುತ್ತದೆ. ಅದರಲ್ಲಿ 25 ಸಾವಿರ ರೂ.ಗಳಿಗಿಂತ ಕಡಿಮೆ ಮೊತ್ತ ಪಡೆಯುವವರು 6 ಲಕ್ಷ ರೈತರು. 50 ಸಾವಿರ ರೂ.ಗಳಿಗಿಂತ ಕಡಿಮೆ ಮೊತ್ತ ಪಡೆಯುವ ರೈತ ಸಂಖ್ಯೆ 15 ಲಕ್ಷ ಇದೆ. ಉಳಿದ ಒಂದು ಲಕ್ಷ ರೈತರಿಗಷ್ಟೇ 1 ಲಕ್ಷ ರೂ.ಗಿಂತ ಹೆಚ್ಚಿನ ಸಾಲ ಸಿಗುತ್ತದೆ.

ರೈತರು ಸಹಕಾರ ವಲಯದ ಕಡೆ ಹೆಚ್ಚಿನ ಪ್ರಮಾಣದಲ್ಲಿ ಬರಬೇಕಾಗಿದೆ. ಅದಕ್ಕಾಗಿಯೇ ರಾಷ್ಟ್ರೀಕೃತ ಬ್ಯಾಂಕ್​ಗಳಲ್ಲಿರುವ ಠೇವಣಿಯನ್ನು ಅಪೆಕ್ಸ್ ಬ್ಯಾಂಕ್​ಗೆ ವರ್ಗಾವಣೆ ಮಾಡಬೇಕಾಗಿದೆ. ಆ ಬಗ್ಗೆ ಮುಖ್ಯಮಂತ್ರಿ ಅವರೊಂದಿಗೆ ಚರ್ಚೆ ನಡೆಸಿದ್ದೇನೆ.

-ಬಂಡೆಪ್ಪ ಖಾಶೆಂಪುರ ಸಹಕಾರ ಸಚಿವ

ಆರ್​ಬಿಐ ಮನವೊಲಿಕೆಗೆ ನಿರ್ಧಾರ

ವಿವಿಧ ಇಲಾಖೆಗಳ ಠೇವಣಿಯನ್ನು ಅಪೆಕ್ಸ್ ಬ್ಯಾಂಕ್​ಗೆ ವರ್ಗಾಯಿಸಲು ಹಿಂದಿನ ಸರ್ಕಾರ ಪ್ರಯತ್ನ ನಡೆಸಿದಾಗ ಆರ್​ಬಿಐ ಆಕ್ಷೇಪ ವ್ಯಕ್ತಪಡಿಸಿತ್ತು. ಸರ್ಕಾರದ ಹಣವನ್ನು ಸಹಕಾರ ವಲಯದಲ್ಲಿ ಇಡಬಾರದೆಂದು ಹೇಳಿತ್ತಲ್ಲದೆ ಸಹಕಾರ ವಲಯದ ಬ್ಯಾಂಕ್​ಗಳ ವಿಶ್ವಾಸಾರ್ಹತೆಯ ಬಗ್ಗೆಯೇ ಅನುಮಾನ ವ್ಯಕ್ತಪಡಿಸಿತ್ತು. ಆದರೆ ಹಿಂದಿನ ಸರ್ಕಾರ ಸಾಲಮನ್ನಾ ಮಾಡಿದಾಗ ಎಂಎಂಎಲ್​ನಿಂದ 1800 ಕೋಟಿ ರೂ.ವರ್ಗಾಯಿಸಿತ್ತು. ಇದೀಗ ಆರ್​ಬಿಐಗೆ ಮನವರಿಕೆ ಮಾಡಿಕೊಡಲು ಸರ್ಕಾರ ನಿರ್ಧರಿಸಿದೆ. ನಬಾರ್ಡ್ ನೆರವು ಕಡಿಮೆಯಾಗಿರುವುದು, ಸಾಲಮನ್ನಾದಿಂದ ಆಗಿರುವ ಆರ್ಥಿಕ ಹೊರೆ, ಅಪೆಕ್ಸ್ ಬ್ಯಾಂಕ್ ಸಹ 15 ಸಾವಿರ ಕೋಟಿ ರೂ.ಗಳ ವಹಿವಾಟು ನಡೆಸುತ್ತಿದೆ. ರಾಷ್ಟ್ರೀಕೃತ ಬ್ಯಾಂಕ್​ಗಳು 1 ಅವಧಿ ತೀರುವಳಿ ಸಂದರ್ಭದಲ್ಲಿ ಬಡ್ಡಿಮನ್ನಾಕ್ಕೆ ಒಪ್ಪದೇ ಇರುವುದನ್ನು ವಿವರಿಸಿ ಮನವರಿಕೆ ಮಾಡಲು ಸರ್ಕಾರ ಮುಂದಾಗಿದೆ ಎನ್ನಲಾಗುತ್ತಿದೆ.

ರಾಷ್ಟ್ರೀಕೃತ ಬ್ಯಾಂಕ್​ಗಳು ಋಣಮುಕ್ತ ಪತ್ರ ನೀಡುವುದಿಲ್ಲ. ಸರ್ಕಾರ ಸಾಲ ಮನ್ನಾ ಯೋಜನೆ ಯಾವ ರೀತಿಯಲ್ಲಿ ಕಾರ್ಯಗತಗೊಳಿಸುತ್ತದೆ ಎಂಬುದು ಗೊತ್ತಿಲ್ಲ. ರಾಷ್ಟ್ರೀಕೃತ ಬ್ಯಾಂಕ್​ಗಳ ಸಾಲ ಮನ್ನಾದ ಫಲ ರೈತರಿಗೆ ಹೇಗೆ ಸಿಗುತ್ತದೆ ಎಂಬುದನ್ನು ಕಾದು ನೋಡುತ್ತೇವೆ. ಬ್ಯಾಂಕ್​ಗಳಿಗೆ ನಾಲ್ಕು ಕಂತುಗಳಲ್ಲಿ ಪಾವತಿ ಮಾಡುವ ಬಗ್ಗೆಯೂ ಸ್ಪಷ್ಟತೆ ಇಲ್ಲ. ಬ್ಯಾಂಕ್ ಕಡೆಯಿಂದಲೂ ಯಾವುದೇ ಸ್ಪಷ್ಟನೆ ಬಂದಿಲ್ಲ.

| ಬಿ.ಎಸ್.ಯಡಿಯೂರಪ್ಪ ಬಿಜೆಪಿ ರಾಜ್ಯಾಧ್ಯಕ್ಷ