ಹಾನಗಲ್ಲ: ಮೂವತ್ತು ಸಾವಿರ ಎಕರೆ ಕೃಷಿ ಭೂಮಿಗೆ ನೀರಾವರಿ ಒದಗಿಸುವ, 72 ಕರೆ ತುಂಬಿಸುವ ಕೂಸನೂರು ಏತ ನೀರಾವರಿ ಯೋಜನೆ ಆರಂಭಿಸುವಂತೆ ತಾಲೂಕಿನ 20 ಗ್ರಾಮಗಳ ರೈತರು ಸರ್ಕಾರವನ್ನು ಆಗ್ರಹಿಸಿದರು.
ತಾಲೂಕಿನ ಕೂಸನೂರಿನಲ್ಲಿ ಭಾನುವಾರ ಏರ್ಪಡಿಸಿದ್ದ ನೀರಾವರಿ ಯೋಜನೆಯ ಸಂಘಟನಾ ಸಭೆಯ ನೇತೃತ್ವ ವಹಿಸಿ ಮಾತನಾಡಿದ ಬಿಜೆಪಿ ರೈತ ಮೋರ್ಚಾ ರಾಜ್ಯ ಕಾರ್ಯದರ್ಶಿ ಬಸವರಾಜ ಹಾದಿಮನಿ, ರೈತರ ಭೂಮಿಗೆ ನೀರು ಕೊಡಿ, ರೈತರ ಆರ್ಥಿಕತೆ ವೃದ್ಧಿಸಿದರೆ ಸರ್ಕಾರಕ್ಕೆ ಸಾಲ ಕೊಡುತ್ತೇವೆ. ಕೃಷಿಯ ನಿರ್ಲಕ್ಷ್ಯೆಂದರೆ ರಾಜ್ಯದ ಅಭಿವೃದ್ಧಿಯ ಅವಸಾನವಿದ್ದಂತೆ. ತುಂಡು ಭೂಮಿಯಲ್ಲಿ ದುಡಿದು ಬದುಕು ಕಟ್ಟಿಕೊಳ್ಳಲು ನೀರಾವರಿಯೇ ಮೂಲ. ಇಲ್ಲದಿದ್ದರೆ ಇಲ್ಲಿನ ರೈತರು ಗುಳೆ ಹೋಗಿ ಊರುಗಳೆಲ್ಲ ಬಿಕೋ ಎನ್ನುವ ಸ್ಥಿತಿ ನಿರ್ವಣವಾಗುತ್ತದೆ ಎಂದು ಎಚ್ಚರಿಸಿದರು.
105 ಕೋಟಿ ರೂ. ವೆಚ್ಚದ, 30 ಸಾವಿರ ಎಕರೆ ಕೃಷಿ ಭೂಮಿಗೆ ನೀರೊದಗಿಸುವ ಕೂಸನೂರು ಏತ ನೀರಾವರಿ ಯೋಜನೆ ಜಾರಿಯಿಂದ 20 ಹಳ್ಳಿಗಳ ರೈತರ ಬದುಕು ಹಸನಾಗುತ್ತದೆ. ಕೆರೆ ತುಂಬಿಸುವ ಯೋಜನೆಯಿಂದ ಅಂತರ್ಜಲವೂ ವೃದ್ಧಿಗೊಂಡು ಬೇಸಿಗೆಯಲ್ಲಿಯೂ ಕೊಳವೆ ಬಾವಿಗಳ ಮೂಲಕ ನೀರಾವರಿ ಮಾಡಲು ಸಾಧ್ಯ. ಕೃಷಿಕರ ಬದುಕು ಹಸನು ಮಾಡುವ ಈ ಯೋಜನೆ ಅನುಷ್ಠಾನಕ್ಕೆ ಎಲ್ಲ ಜನಪ್ರತಿನಿಧಿಗಳು ಪಕ್ಷಾತೀತ ಬೆಂಬಲ ನೀಡಬೇಕು. ಯೋಜನೆಗೆ ನಮ್ಮ ಶಾಸಕ, ಮಂತ್ರಿಗಳು, ಸಂಸದರಾದಿಯಾಗಿ ಎಲ್ಲರೂ ರೈತಪರ ನಿಲುವು ಪ್ರದರ್ಶಿಸಲಿ ಎಂದರು.
ರೈತ ನಾಯಕ ರಾಜಶೇಖರ ಬೆಟಗೇರಿ ಮಾತನಾಡಿ, ಬಸಾಪುರ ಏತ ನೀರಾವರಿ ವಿಫಲವಾಗಿದೆ. ಇದು ಕಳೆದ ವರ್ಷ ಕಾರ್ಯಾರಂಭ ಮಾಡದೇ ಸಾವಿರಾರು ಎಕರೆ ಕೃಷಿ ಭೂಮಿ ಬರಡಾಗಿದೆ. ರೈತ ಸಾಲಕ್ಕೆ ಸಿಕ್ಕು ನಲುಗಿದ್ದಾನೆ. ಹೊಸ ಕೂಸನೂರು ಏತ ನೀರಾವರಿ ಯೋಜನೆಯಿಂದ ನೀರು ಪೋಲಾಗದೆ, ಸಮರ್ಪಕವಾಗಿ 20 ಹಳ್ಳಿಗಳ ಕೃಷಿ ಭೂಮಿಗೆ ನೀರು ನೀಡಲು ಸಾಧ್ಯ. ಆದ್ದರಿಂದ ಈ ಯೋಜನೆಗೆ ಸರ್ಕಾರ ಮಂಜೂರಿ ನೀಡಿ ಕಾಮಗಾರಿ ಆರಂಭಿಸಬೇಕು. ಇದಕ್ಕಾಗಿ ಎಲ್ಲ ಗ್ರಾಮಗಳಲ್ಲಿ ಹೋರಾಟ ಹಾಗೂ ಜಾಗೃತಿ ಸಭೆ ನಡೆಸಲಿದ್ದೇವೆ. 6 ತಿಂಗಳಿನಿಂದ ನಮ್ಮ ಹೋರಾಟ ನಡೆದಿದೆ ಎಂದರು.
ಜಿಪಂ ಮಾಜಿ ಸದಸ್ಯ ಮಹದೇವಪ್ಪ ಬಾಗಸರ್, ನಿಜಲಿಂಗಪ್ಪ ಮುದಿಯಪ್ಪನವರ, ನಿಂಗಪ್ಪ ಕೊಪ್ಪದ, ಈಶ್ವರ ದೇಸಾಯಿ, ಪ್ರಕಾಶ ಬಣಕಾರ, ಡಾ.ಸುನಿಲ ಹಿರೇಮಠ, ಕರಿಯಪ್ಪ ದಿಬ್ಬಣ್ಣನವರ, ಮಲ್ಲೇಶಪ್ಪ ಹಾಲಮ್ಮನವರ, ಸಂಗನಗೌಡ ಮಲ್ಲನಗೌಡ್ರ, ಅಜ್ಜಪ್ಪ ಶಿರಳ್ಳಿ, ಮಹಾಂತೇಶ ಅಮ್ರದ, ಬಸವರಾಜ ಪೂಜಾರ, ವೀರಪ್ಪ ಅಕ್ಕಿವಳ್ಳಿ, ಮಂಜುನಾಥ ಗೋರಣ್ಣನವರ, ಸುಭಾಸ ಗೋರಣ್ಣನವರ, ಲೋಕೇಶ ಸೂಡಂಬಿ, ಸಿದ್ದಪ್ಪ ಬ್ಯಾತನಾಳ ಸೇರಿದಂತೆ ನೂರಾರು ರೈತರು ಸಭೆಯಲ್ಲಿ ಪಾಲ್ಗೊಂಡಿದ್ದರು. ಈ ಯೋಜನೆ ಜಾರಿಗೆ ಸರ್ಕಾರ ಮುಂದಾಗಲಿ. ರೈತರ ಹಿತಕ್ಕೆ ಬದ್ಧವಾಗಿರಲಿ. ನಮ್ಮ ಹೊಲಕ್ಕೆ ನೀರು ಕೊಡಿ ಎಂಬ ಘೊಷವಾಕ್ಯ ಪ್ರಕಟಿಸಿದರು.
ರೈತರ ಹೋರಾಟ ನಿರಂತರ
ಈಗಾಗಲೇ ಇರುವ ಕೂಸನೂರು, ವಾಸನ, ಬಸಾಪುರ ನೀರಾವರಿ ಯೋಜನೆಗಳು ಸ್ಥಗಿತಗೊಂಡಿವೆ. ಹಳೆಯ ತಂತ್ರಜ್ಞಾನದ ಈ ಯೋಜನೆಗಳು ಕೃಷಿಗೆ ನೀರೊದಗಿಸಲು ಸಾಧ್ಯವಿಲ್ಲ. ಭತ್ತ ಗೋವಿನಜೋಳ, ಅಡಕೆ, ಶುಂಠಿ, ಹತ್ತಿ, ಕಬ್ಬು, ಮೆಣಸಿನಕಾಯಿ, ತರಕಾರಿ ಸೇರಿದಂತೆ ಕೃಷಿ, ತೋಟಗಾರಿಕೆ ಬೆಳೆಗಳ ಕ್ಷೇತ್ರ ಇದಾಗಿದ್ದು ನೀರು ಕೊಟ್ಟರೆ ಮಾತ್ರ ಬದುಕುಳಿಯಬಲ್ಲವು. ಕರ್ನಾಟಕ ನೀರಾವರಿ ನಿಗಮದ ತಾಂತ್ರಿಕ ಸಮಿತಿ ಅಧ್ಯಕ್ಷ ಜಿ.ಟಿ. ಚಂದ್ರಶೇಖರಪ್ಪ ಅವರ ಗಮನಕ್ಕೆ ಈ ವಿಷಯ ತರಲಾಗಿದ್ದು, ಈಗಾಗಲೇ ಈ ಯೋಜನೆಯ ನಕ್ಷೆ ಸಿದ್ಧಪಡಿಸಲಾಗಿದೆ. ಇದಕ್ಕಾಗಿ ನಮ್ಮ ಹೋರಾಟ ನಿರಂತರವಾಗಿರಲಿದೆ. ಈ ಯೋಜನೆ ಜಾರಿಯಾಗುವವರೆಗೆ ನಿದ್ರಿಸುವುದಿಲ್ಲ ಎಂದು ರೈತರು ಒಕ್ಕೊರಲಿನಿಂದ ಘೊಷಿಸಿದರು.