ಜೋಳ ತೂಕದಲ್ಲಿ ಮೋಸ

ಹಾಸನ: ರೈತರಿಂದ ಖರೀದಿಸಿದ ಜೋಳದಲ್ಲಿ ಪ್ರತಿ ಚೀಲಕ್ಕೆ 10 ಕೆ.ಜಿ. ಮೋಸ ಮಾಡುತ್ತಿದ್ದ ವ್ಯಾಪಾರಿಯೊಬ್ಬ ರೈತರ ಬಲೆಗೆ ಬಿದ್ದಿದ್ದಾನೆ.

ತಾಲೂಕಿನ ಕಿತ್ತಾನೆ ಮಾದಾಪುರ ಗ್ರಾಮದಲ್ಲಿ ಭಾನುವಾರ ಸಂಜೆ ಘಟನೆ ನಡೆದಿದ್ದು, ತೂಕದಲ್ಲಿ ಮೋಸ ಮಾಡುತ್ತಿದ್ದ ವ್ಯಾಪಾರಿ ಬೂವನಹಳ್ಳಿ ಮಹೇಶ್ ಎಂಬಾತನನ್ನು ಗ್ರಾಮಸ್ಥರು ತಮ್ಮ ವಶದಲ್ಲಿಟ್ಟುಕೊಂಡಿದ್ದಾರೆ.

ಜೋಳದ ವ್ಯಾಪಾರ ಮಾಡಿಕೊಂಡಿರುವ ಈತ ಮಾದಾಪುರ ಗ್ರಾಮದಲ್ಲಿ 250 ಚೀಲ ಮುಸುಕಿನ ಜೋಳವನ್ನು 1350 ಹಾಗೂ 1400 ರೂ.ಗೆ ಖರೀದಿಸಿದ್ದಾನೆ. ಜೋಳದ ಚೀಲ ತೂಕ ಹಾಕುವಾಗ ಅನುಮಾನಗೊಂಡ ರೈತರು ಈತನ ಮಾಪಕದಲ್ಲಿ ಅಳತೆ ಮುಗಿದ ತಕ್ಷಣ ಬೇರೆ ಕಡೆಗೆ ಅದೇ ಜೋಳ ತೂಕ ಮಾಡಿದಾಗ 10 ಕೆ.ಜಿ. ವ್ಯತ್ಯಾಸವಾಗಿರುವುದು ಬೆಳಕಿಗೆ ಬಂದಿದೆ. ವ್ಯಾಪಾರಿ ಮಹೇಶನ ಮೋಸದಾಟ ತಿಳಿದ ಗ್ರಾಮಸ್ಥರು ಆತನನ್ನು ಲಾರಿ ಸಮೇತ ಅಲ್ಲಿಯೇ ಕೂಡಿ ಹಾಕಿದ್ದಾರೆ.

ವಿಷಯ ತಿಳಿದು ಎಪಿಎಂಸಿ ಅಧಿಕಾರಿ ಶ್ರೀ ಹರಿ ಹಾಗೂ ತೂಕ ಮತ್ತು ಅಳತೆ ಇಲಾಖೆ ಅಧಿಕಾರಿ ಅನಿಲ್‌ಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಲಾರಿಯಲ್ಲಿದ್ದ ಎಲ್ಲ ಜೋಳದ ಚೀಲವನ್ನು ರೈತರು ತಮ್ಮ ವಶಕ್ಕೆ ಪಡೆದಿದ್ದಾರೆ. ಆರೋಪಿ ಮಹೇಶ್ ವಿರುದ್ಧ ತನಿಖೆ ಮುಂದುವರಿದಿದೆ.