ಗುಂಡ್ಲುಪೇಟೆ: ಗೋಪಾಲಸ್ವಾಮಿಬೆಟ್ಟದಲ್ಲಿ ಮಲಯಾಳಂ ಚಿತ್ರದ ಶೂಟಿಂಗ್ ನಡೆಸಲು ಅವಕಾಶ ನೀಡಿದ ಅರಣ್ಯಾಧಿಕಾರಿಗಳ ಅಮಾನತಿಗೆ ಒತ್ತಾಯಿಸಿ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.

ಹಸಿರು ಸೇನೆ ಹಾಗೂ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಡಾ.ಗುರುಪ್ರಸಾದ್ ಹಾಗೂ ಜಿಲ್ಲಾ ಕಾರ್ಯಾಧ್ಯಕ್ಷ ಮಾಡ್ರಹಳ್ಳಿ ಮಹದೇವಪ್ಪ ನೇತೃತ್ವದಲ್ಲಿ ಗುರುವಾರ ಪಟ್ಟಣದ ಪ್ರವಾಸಿ ಮಂದಿರದಿಂದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯಲ್ಲಿ ಸಾಗಿದ ಕಾರ್ಯಕರ್ತರು, ಬಸವೇಶ್ವರ ವೃತ್ತದಲ್ಲಿ ಸುಮಾರು ಒಂದು ಗಂಟೆಗಳ ಕಾಲ ಹೆದ್ದಾರಿಯಲ್ಲಿ ಕುಳಿತು ಅರಣ್ಯಾಧಿಕಾರಿಗಳ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದರು. ಇದರಿಂದ ರಸ್ತೆಯಲ್ಲಿ ಸುಮಾರು ಮೂರು ಕಿಲೋಮೀಟರ್ ಉದ್ದಕ್ಕೂ ವಾಹನಗಳು ನಿಂತು ವಾಹನಗಳ ಸಂಚಾರಕ್ಕೆ ಅಡ್ಡಿಯಾಯಿತು.
ಅರಣ್ಯಾಧಿಕಾರಿಗಳು ನಿಯಮಬಾಹಿರವಾಗಿ ನಡೆದುಕೊಳ್ಳುತ್ತಿದ್ದಾರೆ. ಸರ್ಕಾರದ ಗಮನಕ್ಕೆ ತರದೆ, ಮುಜರಾಯಿ ಇಲಾಖೆ ಗಮನಕ್ಕೂ ತರದೆ ಮಲಯಾಳಂ ಚಲನಚಿತ್ರದ ಶೂಟಿಂಗ್‌ಗೆ ಅವಕಾಶ ನೀಡಿದ್ದಾರೆ. ಸಂಜೆ 4 ಗಂಟೆ ನಂತರ ಸಾರ್ವಜನಿಕರನ್ನು ಬೆಟ್ಟಕ್ಕೆ ಬಿಡಲು ನಿರ್ಬಂಧಿಸುವ ಅಧಿಕಾರಿಗಳು ತಮಗೆ ಬೇಕಾದವರನ್ನು ಮಾತ್ರ ಬಿಟ್ಟುಕಳುಹಿಸುತ್ತಿದ್ದಾರೆ. ಈ ಬಗ್ಗೆ ಮಾಧ್ಯಮಗಳ ಗಮನಕ್ಕೆ ತಂದವರ ವಿರುದ್ಧ ಪ್ರತಿಕಾರಕ್ಕೆ ಮುಂದಾಗಿದ್ದು ಬೆಟ್ಟದ ತಪ್ಪಲಿನಲ್ಲಿ ಹತ್ತಾರು ವರ್ಷಗಳಿಂದ ಹೋಟೆಲ್, ಅಂಗಡಿ ನಡೆಸುತ್ತ ಜೀವನ ಸಾಗಿಸುತ್ತಿರುವವರನ್ನು ಎತ್ತಂಗಡಿ ಮಾಡಲು ಮುಂದಾಗಿದ್ದಾರೆ. ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಯಂತ್ರಗಳ ಬಳಕೆ ನಿರ್ಬಂಧಿಸಿದ್ದರೂ ಅರಣ್ಯದೊಳಗೆ ಜೆಸಿಬಿಗಳನ್ನು ಬಳಸಿ ಕಾಮಗಾರಿ ನಡೆಸುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ರಸ್ತೆ ಸಂಚಾರ ತಡೆ ತೆರವುಗೊಳಿಸಲು ಪೊಲೀಸರು ಮಾಡಿದ ಪ್ರಯತ್ನ ವಿಫಲವಾದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಆಗಮಿಸಿದ ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಮಾತನಾಡಿ, ಚಿತ್ರೀಕರಣ ನಡೆಸಿದ ಬಗ್ಗೆ ತಾವು ಮಾಹಿತಿ ಪಡೆದುಕೊಂಡಿದ್ದು ಅರಣ್ಯ ಪ್ರದೇಶದಲ್ಲಿ ಚಿತ್ರೀಕರಣಕ್ಕೆ ಅವಕಾಶ ನೀಡಲು ಸಾಧ್ಯವಿದೆ. ಆದರೆ ಕಂದಾಯ ಇಲಾಖೆಯ ಗಮನಕ್ಕೆ ತರದಿರುವ ಬಗ್ಗೆ ಸಚಿವರು ಮತ್ತು ಸರ್ಕಾರದ ಗಮನಕ್ಕೆ ತಂದು ಕ್ರಮಕೈಗೊಳ್ಳುವುದಾಗಿ ಹೇಳಿದರು. ಮನವಿಯನ್ನು ನನಗೆ ಕೊಟ್ಟರೆ 24ರಂದು ನಡೆಯುವ ಸಚಿವ ಸಂಪುಟದ ಸಭೆಯಲ್ಲಿ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು.
ನಿಯಮಬಾಹಿರವಾಗಿ ನಡೆದುಕೊಳ್ಳುತ್ತಿರುವ ಅರಣ್ಯಾಧಿಕಾರಿಗಳನ್ನು ಕೂಡಲೇ ಅಮಾನತು ಮಾಡಿ ಪ್ರಕರಣವನ್ನು ತನಿಖೆ ಮಾಡಿಸಬೇಕು ಎಂದು ರೈತ ಮುಖಂಡರು ಒತ್ತಾಯಿಸಿದರು. ಅಧಿಕಾರಿಗಳ ಅಮಾನತು ಮಾಡಿಸುವುದಾದರೆ ಅದನ್ನು ನೀವೇ ಮಾಡಿಸಿ ಎಂದು ಹೇಳಿದ ಶಾಸಕರು ಅಲ್ಲಿಂದ ತೆರಳಲು ಮುಂದಾಗಿದ್ದು ರೈತರನ್ನು ಕೆರಳಿಸಿತು. ಶಾಸಕರೇ ನನಗೂ ಇದಕ್ಕೂ ಸಂಬಂಧವಿಲ್ಲ ಎಂದು ಹೇಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸ್ವಲ್ಪ ದೂರ ತೆರಳಿದ್ದ ಶಾಸಕರು ಮುಖಂಡರ ಮನವೊಲಿಕೆ ನಂತರ ಮರಳಿದರು. ನಾನು ಜವಾಬ್ದಾರಿಯುತ ಶಾಸಕನಾಗಿದ್ದು ಜನತೆಯಿಂದ ಆಯ್ಕೆಯಾಗಿದ್ದೇನೆ. ಮುಂದಿನ ದಿನಗಳಲ್ಲಿ ಹಿರಿಯ ಅಧಿಕಾರಿಗಳ ಸಮುಖದಲ್ಲಿ ರೈತರ ಮತ್ತು ಅಧಿಕಾರಿಗಳ ಸಭೆ ನಡೆಸಲು ಅವಕಾಶ ಮಾಡಿಕೊಡುವುದಾಗಿ ಹೇಳಿ ಸಾರ್ವಜನಿಕರ ಹಿತಾಸಕ್ತಿಯಿಂದ ರಸ್ತೆ ಸಂಚಾರ ತಡೆ ತೆರವುಗೊಳಿಸಿ ಎಂದು ಕೋರಿದ ನಂತರ ರಸ್ತೆ ಸಂಚಾರ ತಡೆ ಸ್ಥಗಿತಗೊಳಿಸಿದರು.