ಮಂಡ್ಯ: ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧದ ಕಾರ್ಮೋಡವಿರುವ ಹಿನ್ನೆಲೆಯಲ್ಲಿ ಯಾವುದೇ ರೀತಿಯ ಸಹಾಯಕ್ಕೂ ನಾವು ಬರುತ್ತೇವೆಂದು ಜಿಲ್ಲಾ ರೈತ ಸಂಘ ಹಾಗೂ ಹಸಿರು ಸೇನೆ(ಏಕೀಕರಣ) ಘೋಷಣೆ ಮಾಡಿದೆ.
ಈ ಸಂಬಂಧ ಜಿಲ್ಲಾಧ್ಯಕ್ಷ ಇಂಡುವಾಳು ಚಂದ್ರಶೇಖರ್ ನೇತೃತ್ವದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಅವರಿಗೆ ಮನವಿ ಸಲ್ಲಿಸಿರುವ ರೈತರು, ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಅಥವಾ ಯಾವುದೇ ರೀತಿಯ ಸಹಾಯಬೇಕಾದರೂ ಮಾಡಲು ಸಿದ್ದವಿದ್ದೇವೆ ಎಂದು ಹೇಳಿದ್ದಾರೆ.
ಆಪರೇಷನ್ ಸಿಂಧೂರ ಮೂಲಕ ಪಾಕಿಸ್ತಾನ ಹಾಗೂ ಪಾಕಿಸ್ತಾನ ಆಕ್ರಮಿಕ ಕಾಶ್ಮೀರದಲ್ಲಿ 100ಕ್ಕೂ ಹೆಚ್ಚು ಭಯೋತ್ಪಾದಕರ ತಾಣವನ್ನು ನಿರ್ನಾಮ ಮಾಡುವಲ್ಲಿ ನಮ್ಮ ಸೈನ್ಯ ಯಶಸ್ವಿಯಾಗಿದೆ. ಕದನ ವಿರಾಮದ ಬಳಿಕ ನಿಯಮ ಉಲ್ಲಂಘಿಸಿ ಪಾಕಿಸ್ತಾನ ನಮ್ಮ ಸೇನಾ ನೆಲೆಯನ್ನು ಗುರಿಯಾಗಿಸಿಕೊಂಡು ದಾಳಿ ಮಾಡಿದೆ. ಸಧ್ಯಕ್ಕೆ ಪರಿಸ್ಥಿತಿ ಉಲ್ಣಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ತುರ್ತು ಸಂದರ್ಭದಲ್ಲಿ ಭಾರತೀಯ ಸೈನ್ಯವನ್ನು ಬೆಂಬಲಿಸಲು ಹಾಗೂ ಆಂತರೀಕ ಕಾನೂನು ವ್ಯವಸ್ಥೆ ಕಾಪಾಡಲು ಪೊಲೀಸ್ ಇಲಾಖೆಯ ಹೆಗಲಿಗೆ ಹೆಗಲು ಕೊಟ್ಟು ದೇಶ ಸೇವೆ ಮಾಡಲು ಸಂಘ ತೀರ್ಮಾನಿಸಿದೆ. ಮಾತ್ರವಲ್ಲದೆ ಯುದ್ಧ ಮುಗಿಯುವವರೆಗೂ ಯಾವುದೇ ರೀತಿಯ ಪ್ರತಿಭಟನೆ ಮಾಡದಿರಲು ನಿರ್ಧರಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಇದಲ್ಲದೆ ಯುದ್ಧ ಹಾಗೂ ತುರ್ತು ಪರಿಸ್ಥಿತಿ ಮತ್ತು ನೈಸರ್ಗಿಕ ವಿಕೋಪ ಎದುರಿಸುವಲ್ಲಿ, ಅಗತ್ಯ ಸೇವೆಗಳ ನಿರ್ವಹಣೆಯಲ್ಲಿ ನಾಗರಿಕ ಆಡಳಿತಕ್ಕೆ ಸಹಾಯ ಮಾಡಲು ಜಿಲಾ ರೈತ ಸಂಘ ಹಾಗೂ ಹಸಿರು ಸೇನೆ ಸಿದ್ಧವಿದೆ ಎಂದಿದ್ದಾರೆ.
ಸಂಘಟನೆಯ ಶಿವಳ್ಳಿ ಚಂದ್ರು, ನಾಗರಾಜು, ಕುಮಾರ್, ಚನ್ನಯ್ಯ ಇತರರಿದ್ದರು.
