ಶಿವಮೊಗ್ಗ: ಕೇಂದ್ರ ಕೃಷಿ ನೀತಿ ವಿರೋಧದ ಹಿಂದೆ ಕಾಣದ ಕೈಗಳು ಕೆಲಸ ಮಾಡುತ್ತಿವೆ. ರಾಜಕೀಯ ಕುತಂತ್ರದಿಂದ ರೈತರ ದಾರಿ ತಪ್ಪಿಸಲಾಗುತ್ತಿದೆ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಆರೋಪಿಸಿದರು.

ಕೇಂದ್ರ ಸರ್ಕಾರ ಕೃಷಿ ಕಾಯ್ದೆಗೆ ತಿದ್ದುಪಡಿ ತಂದಿರುವುದು ರೈತರ ಹಿತಕ್ಕಾಗಿಯೇ ಹೊರತು ತೊಂದರೆ ನೀಡುವುದಕ್ಕಲ್ಲ. ಕೇಂದ್ರ ಸರ್ಕಾರ ಬಹುರಾಷ್ಟ್ರೀಯ ಕಂಪನಿಗಳ ಪರವಾಗಿ ನಿರ್ಧಾರ ಕೈಗೊಂಡಿದೆ ಎಂಬ ಪ್ರತಿಪಕ್ಷಗಳ ಆರೋಪದಲ್ಲಿ ಹುರುಳಿಲ್ಲ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಇದುವರೆಗೆ ಪ್ರತಿಪಕ್ಷಗಳು ಎಲ್ಲ ವಿಷಯದಲ್ಲೂ ಸೋಲು ಕಂಡಿವೆ. ಕೇಂದ್ರದ ಉತ್ತಮ ಆಡಳಿತದಲ್ಲಿ ಯಾವುದೇ ನ್ಯೂನತೆ ಕಾಣುತ್ತಿಲ್ಲ. ಈಗ ಕೃಷಿ ಕಾಯ್ದೆ ತಿದ್ದುಪಡಿ ಮುಂದಿಟ್ಟುಕೊಂಡು ಜನರಲ್ಲಿ ತಪ್ಪು ಭಾವನೆ ಮೂಡಿಸಲು ಯತ್ನಿಸಲಾಗುತ್ತಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದ ಅವರು, ಕೇಂದ್ರದ ಕೃಷಿ ನೀತಿಯನ್ನು ಬಲವಾಗಿ ಸಮರ್ಥಿಸಿಕೊಂಡರು.
ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ರೈತ ಮೋರ್ಚಾ ಜಿಲ್ಲಾಧ್ಯಕ್ಷ ಸಾಲೆಕೊಪ್ಪ ರಾಮಚಂದ್ರ, ಆರ್ಯವೈಶ್ಯ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಡಿ.ಎಸ್.ಅರುಣ್, ಸೂಡಾ ಅಧ್ಯಕ್ಷ ಎಸ್.ಎಸ್.ಜ್ಯೋತಿಪ್ರಕಾಶ್, ಬಿಜೆಪಿ ವಿಭಾಗೀಯ ಪ್ರಭಾರಿ ಗಿರೀಶ್ ಪಟೇಲ್, ಪಾಲಿಕೆ ಸದಸ್ಯೆ ಸುನೀತಾ ಅಣ್ಣಪ್ಪ ಇತರರಿದ್ದರು.