ಶಿರಹಟ್ಟಿ: ತಾಲೂಕಿನಾದ್ಯಂತ ಎರಡ್ಮೂರು ವಾರಗಳಿಂದ ಉತ್ತಮ ಮಳೆ ಸುರಿಯುತ್ತಿದೆ. ಈ ಬಾರಿ ಅಶ್ವಿನಿ, ಭರಣಿ, ಕೃತ್ತಿಕಾ ಮತ್ತು ಮೃಗಶಿರ ಮಳೆಗಳು ಉತ್ತಮವಾಗಿ ಸುರಿದಿರುವುದು ರೈತರ ಮೊಗದಲ್ಲಿ ಸಂತಸ ಮೂಡಿಸಿದೆ. ರೈತರು ಕೃಷಿ ಚಟುವಟಿಕೆ ಚುರುಕುಗೊಳಿಸಿದ್ದಾರೆ.
ತಾಲೂಕಿನ ಕಡಕೋಳ, ಹೊಸಳ್ಳಿ, ಮಾಚೇನಹಳ್ಳಿ, ಮಜ್ಜೂರ, ವರವಿ, ತೆಗ್ಗಿನ ಭಾವನೂರ, ಹಡಗಲಿ, ಬನ್ನಿಕೊಪ್ಪ, ಬೆಳ್ಳಟ್ಟಿ, ಮಾಗಡಿ, ಹೊಳಲಾಪೂರ, ಪರಸಾಪುರ, ಛಬ್ಬಿ, ರಣತೂರ, ನಾಗರಮಡುವು ಸೇರಿದಂತೆ ಹಲವು ಗ್ರಾಮಗಳಲ್ಲಿ ಉತ್ತಮ ಮಳೆ ಸುರಿದಿದೆ. ರೈತರು ಬೀಜ ಮತ್ತು ಗೊಬ್ಬರ ಸಂಗ್ರಹಿಸಿಕೊಂಡಿದ್ದಾರೆ.
ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ತಾಲೂಕಿನಲ್ಲಿ ಒಟ್ಟು 36,411 ಹೆಕ್ಟೇರ್ ಬಿತ್ತನೆ ಗುರಿ ಹೊಂದಲಾಗಿದೆ ಎಂದು ತಾಲೂಕು ಸಹಾಯಕ ಕೃಷಿ ನಿರ್ದೇಶಕ ರೇವಣೆಪ್ಪ ಮನಗೂಳಿ ತಿಳಿಸಿದ್ದಾರೆ.
ಇದರಲ್ಲಿ ಶೇಂಗಾ (3350 ಹೆಕ್ಟೇರ್), ಹೆಸರು (3200 ಹೆಕ್ಟೇರ್), ಗೋವಿನಜೋಳ (27146 ಹೆಕ್ಟೇರ್), ಸೂರ್ಯಕಾಂತಿ (45 ಹೆಕ್ಟೇರ್), ತೊಗರಿ (450 ಹೆಕ್ಟೇರ್), ಅಲಸಂದಿ (55 ಹೆಕ್ಟೇರ್), ಭತ್ತ (460 ಹೆಕ್ಟೇರ್), ಹತ್ತಿ (575 ಹೆಕ್ಟೇರ್), ಕಬ್ಬು (500 ಹೆಕ್ಟೇರ್), ಹೈಬ್ರೀಡ್ ಜೋಳ (125 ಹೆಕ್ಟೇರ್) ಸೇರಿವೆ. ಮುಂಗಾರು ಮಳೆ ಉತ್ತಮವಾದರೆ ಈ ಗುರಿ ಮೀರುವ ಸಾಧ್ಯತೆ ಇದೆ ಎಂದು ಅವರು ಆಶಯ ವ್ಯಕ್ತಪಡಿಸಿದ್ದಾರೆ.
ತಾಲೂಕಿನಲ್ಲಿ ಒಟ್ಟು 94,913 ಹೆಕ್ಟೇರ್ ಭೌಗೋಳಿಕ ಕ್ಷೇತ್ರವಿದ್ದು, ಇದರಲ್ಲಿ 74,475 ಹೆಕ್ಟೇರ್ ಸಾಗುವಳಿ ಕ್ಷೇತ್ರವಾಗಿದೆ. ಇದರಲ್ಲಿ 60 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಪ್ರಮುಖ ವಾಣಿಜ್ಯ ಬೆಳೆಗಳನ್ನು ಬೆಳೆಯುವ ಉದ್ದೇಶವಿದೆ.
ಮೇ 23ರವರೆಗೆ ತಾಲೂಕಿನಲ್ಲಿ 94.8 ಮಿ.ಮೀ. ಮಳೆಯಾಗಬೇಕಿತ್ತು, ಆದರೆ 178.9 ಮಿ.ಮೀ. ಮಳೆ ಸುರಿದಿದೆ. ಇದು ಶೇ. 89ರಷ್ಟು ಮಳೆ ಹೆಚ್ಚಾದ ಬಗ್ಗೆ ವರದಿಯಾಗಿದೆ. ಪ್ರತಿ ವರ್ಷದಂತೆ ಈ ವರ್ಷವೂ ಮುಂಗಾರು ಹಂಗಾಮಿನ
ಬಿತ್ತನೆಗಾಗಿ ತಾಲೂಕಿನ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಶೇ. 50ರ ಸಹಾಯಧನ ಯೋಜನೆಯಡಿ ಹೆಸರು ಮತ್ತು ಗೋವಿನ ಜೋಳದ ಬೀಜಗಳನ್ನು ನೀಡಲಾಗುವುದು.
ರೈತರಿಗೆ ಸಲಹೆಗಳು: ರೈತರು ಬಿತ್ತನೆ ಕೈಗೊಳ್ಳುವ ಮುನ್ನ ಕಡ್ಡಾಯವಾಗಿ ಜೈವಿಕ ಗೊಬ್ಬರಗಳಿಂದ ಬೀಜೋಪಚಾರ ಮಾಡಬೇಕು. ಇದರಿಂದ ಬೆಳೆಯ ಪ್ರಾಥಮಿಕ ಹಂತದಲ್ಲಿ ಸಾರಜನಕ ಚೆನ್ನಾಗಿ ಲಭ್ಯವಾಗಿ ಬೆಳೆಯ ಉತ್ತಮ ಬೆಳವಣಿಗೆಗೆ ಸಹಾಯವಾಗುತ್ತದೆ. ಪ್ರತಿ ಕೆಜಿ ಬೀಜಕ್ಕೆ 10 ಗ್ರಾಂ ಟ್ರೆಂಕೋಡರ್ವದಿಂದ ಬೀಜೋಪಚಾರ ಮಾಡಿದಲ್ಲಿ ಎಲೆಚುಕ್ಕೆ ರೋಗ ನಿರ್ವಹಣೆ ಮಾಡಬಹುದು.
ಗೋವಿನ ಜೋಳದಲ್ಲಿ ಪ್ರತಿ ಕಿ.ಗ್ರಾಂ. ಬೀಜಕ್ಕೆ 25 ಗ್ರಾಂ ರಂಜಕ ಕರಗಿಸುವ ಅಣುಜೀವಿ (ಸುಡೋಮೊನಾಸ ಸ್ಟೈಯೇಟಾ ಎಚ್-21) ಹಾಗೂ 6 ಗ್ರಾಂ ಟ್ರೆಕೋಡರ್ವ ಜೈವಿಕ ಶಿಲೀಂಧ್ರ ನಾಶಕದಿಂದ ಬೀಜೋಪಚಾರ ಮಾಡಿ ಬಿತ್ತನೆ ಮಾಡುವುದರಿಂದ ಕಾಂಡ ಕಪ್ಪು ಕೊಳೆ ರೋಗ ನಿಯಂತ್ರಿಸಬಹುದಾಗಿದೆ.
ರಸಗೊಬ್ಬರ ದಾಸ್ತಾನು, ವಿತರಣೆ: ಜಿಲ್ಲೆಯಲ್ಲಿ ಮುಂಗಾರು ಹಂಗಾಮಿಗಾಗಿ 15 ಮೆಟ್ರಿಕ್ ಟನ್ ರಸಗೊಬ್ಬರದ ಬೇಡಿಕೆಯಿದ್ದು, ಈಗಾಗಲೇ ಇಲಾಖೆ 6,253 ಮೆಟ್ರಿಕ್ ಟನ್ ಯೂರಿಯಾ, 2,200 ಮೆಟ್ರಿಕ್ ಟನ್ ಡಿಎಪಿ, 614 ಮೆಟ್ರಿಕ್ ಟನ್ ಎಂಒಪಿ, 4,010 ಮೆಟ್ರಿಕ್ ಟನ್ ಸೇರಿದಂತೆ ಒಟ್ಟು 13,331 ಮೆಟ್ರಿಕ್ ಟನ್ ರಸಗೊಬ್ಬರವನ್ನು ದಾಸ್ತಾನು ಮಾಡಿದೆ.
ಹೆಸರು, ಶೇಂಗಾ, ಹೈಬ್ರೀಡ್ ಜೋಳ ಬಿತ್ತನೆಗೆ ಸಜ್ಜಾಗಿದ್ದು, ಬೀಜ ಮತ್ತು ಗೊಬ್ಬರದ ಸಿದ್ಧತೆ ನಡೆದಿದೆ. ಮಳೆ ಒಂದೆರಡು ದಿನ ಬಿಡುವು ಕೊಟ್ಟರೆ ಬಿತ್ತನೆ ಕಾರ್ಯ ಪ್ರಾರಂಭವಾಗಲಿದೆ.
| ಬಸವರಾಜ ಕಬಾಡಿ ರೈತ
ಪ್ರಮಾಣಿತ ಬೀಜಗಳನ್ನು ರೈತ ಸಂಪರ್ಕ ಕೇಂದ್ರಗಳ ಮೂಲಕ ವಿತರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.
| ರೇವಣ್ಣಪ್ಪ ಮನಗೂಳಿ
ತಾಲೂಕು ಸಹಾಯಕ ಕೃಷಿ ನಿರ್ದೇಶಕ