ರೈತ ಮಹಿಳೆ ಬಗ್ಗೆ ಮುಖ್ಯಮಂತ್ರಿ ಕೆಟ್ಟದಾಗಿ ಮಾತನಾಡಿಲ್ಲ: ಸಚಿವೆ ಜಯಮಾಲಾ

ಉಡುಪಿ: ಮುಖ್ಯಮಂತ್ರಿ ರೈತ ಮಹಿಳೆಗೆ ಅವಮಾನ ಮಾಡಿಲ್ಲ. ಅವರು ಮಾತನಾಡುವುದನ್ನು ನಾನು ಕೇಳಿದ್ದೇನೆ. ಅವರ ಮಾತಿನ ಅರ್ಥ, ಭಾವನೆ ಮಹಿಳೆ ವಿರುದ್ಧ ಇರಲಿಲ್ಲ ಎಂದು ಸಚಿವೆ ಜಯಮಾಲಾ ಹೇಳಿದರು.

ಮಾಧ್ಯಮದ ಜತೆ ಮಾತನಾಡಿ, ಸಿಎಂ ಮಾತನ್ನು ಎಲ್ಲರೂ ಅವರವರ ಭಾವಕ್ಕೆ ತಕ್ಕಂತೆ ಅರ್ಥ ಮಾಡಿಕೊಳ್ಳುತ್ತಿದ್ದಾರೆ. ಸಿಎಂ ಹೆಣ್ಣುಮಕ್ಕಳನ್ನು ಅತ್ಯಂತ ಗೌರವದಿಂದ ತಾಯಿ ಎಂದೇ ಮಾತನಾಡಿಸುತ್ತಾರೆ. ಯಾವುದೇ ಬೇರೆ ಅರ್ಥದಲ್ಲಿ ಅವರು ಈ ಮಾತುಗಳನ್ನಾಡಿಲ್ಲ ಎಂದು ಹೇಳಿದರು.

ರೈತರ ಸಭೆಯಲ್ಲಿ ಸಕ್ಕರೆ ಕಾರ್ಖಾನೆ ಮಾಲೀಕರು ಗೈರಾಗಿರುವ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಸಕ್ಕರೆ ಕಾರ್ಖಾನೆ ಮಾಲೀಕರ ಸಂದಿಗ್ಧತೆ ಏನಿದೆಯೋ ಗೊತ್ತಿಲ್ಲ. ಅವರಿಗೆ ಒಳಗಡೆ ಏನು ಸಂಕಷ್ಟವಿದೆ ಗೊತ್ತಿಲ್ಲ. ನಾನು ಕೇಳಿ ತಿಳಿದುಕೊಂಡು ನಿಮಗೆ ಹೇಳುತ್ತೇನೆ. ನಾವು ರೈತರ ಸಮಸ್ಯೆಗಳಿಗೆ ಸ್ಪಂದಿಸುತ್ತೇವೆ. ನಾವೆಲ್ಲ ರೈತರೇ, ಅವರಿಗೋಸ್ಕರನೇ ನಮ್ಮ ಮನಸು ತುಡಿಯುತ್ತದೆ ಎಂದರು.

ರಾಜ್ಯೋತ್ಸವ ಪ್ರಶಸ್ತಿ ಪಟ್ಟಿ ಹಸ್ತಾಂತರ
ರಾಜ್ಯೋತ್ಸವ ಪ್ರಶಸ್ತಿ ವಿತರಣೆ ಕುರಿತು ನ.29ಕ್ಕೆ ಮುಖ್ಯಮಂತ್ರಿ ಸಭೆ ನಡೆಸುತ್ತಾರೆ. ಪ್ರಶಸ್ತಿ ಪುರಸ್ಕೃತರ ಪಟ್ಟಿ ತಯಾರಾಗಿದೆ ಎಂದು ಜಯಮಾಲಾ ತಿಳಿಸಿದರು.

ರಾಜ್ಯೋತ್ಸವ ಪ್ರಶಸ್ತಿಯ ಘನತೆ ಕಡಿಮೆ ಆಗಲು ಬಿಡುವುದಿಲ್ಲ. ಅಕ್ಟೋಬರ್​ 30ರಂದೇ ಮುಖ್ಯಮಂತ್ರಿಯವರಿಗೆ ಪಟ್ಟಿ ಹಸ್ತಾಂತರಿಸಿದ್ದೇನೆ. ಶೀಘ್ರವೇ ಪ್ರಶಸ್ತಿ ಪ್ರದಾನ ಮಾಡುತ್ತೇವೆ ಎಂದರು.