ರೈತರನ್ನು ಒಕ್ಕಲೆಬ್ಬಿಸಲು ಸಂಚು, ಲಕ್ಕವಳ್ಳಿ ಅರಣ್ಯ ಇಲಾಖೆ ಕಚೇರಿ ಎದುರು ರೈತರ ಪ್ರತಿಭಟನೆ

ತರೀಕೆರೆ: ಲಕ್ಕವಳ್ಳಿ ಹೋಬಳಿ ವ್ಯಾಪ್ತಿಯ ರೈತರನ್ನು ಒಕ್ಕಲೆಬ್ಬಿಸಲು ಅರಣ್ಯ ಇಲಾಖೆ ಅಧಿಕಾರಿಗಳು ಸಂಚು ನಡೆಸುತ್ತಿದ್ದಾರೆ ಎಂದು ಆರೋಪಿಸಿ ಲಕ್ಕವಳ್ಳಿ ಹೋಬಳಿ ರೈತ ಹಿತರಕ್ಷಣಾ ವೇದಿಕೆ ಸದಸ್ಯರು ಹಾಗೂ ಸಂತ್ರಸ್ತ ರೈತರು ಸೋಮವಾರ ಲಕ್ಕವಳ್ಳಿ ವಲಯ ಅರಣ್ಯ ಅಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

60 ವರ್ಷಗಳ ಹಿಂದೆಯೇ ರೈತರು, ಸ್ವಾತಂತ್ರ್ಯ ಹೋರಾಟಗಾರರು, ಭದ್ರಾ ಹಿನ್ನೀರಿನ ಮುಳುಗಡೆ ಸಂತ್ರಸ್ತರು ಹಾಗೂ ನಿವೃತ್ತ ಸೈನಿಕರಿಗೆ ಭೂಮಿ ಮಂಜೂರಾಗಿದೆ. ಹಲವು ರೈತರು ಬಗರ್​ಹುಕುಂನಡಿ ಭೂಮಿ ಉಳುಮೆ ಮಾಡಿ ಅಡಕೆ, ತೆಂಗು ಇನ್ನಿತರ ತೋಟಗಾರಿಕಾ ಬೆಳೆಗಳನ್ನು ಬೆಳೆದಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು ದುರುದ್ದೇಶದಿಂದ ರೈತರನ್ನು ಒಕ್ಕಲೆಬ್ಬಿಸಲು ಪ್ರಯತ್ನ ನಡೆಸುತ್ತಿದ್ದಾರೆ ಎಂದು ಪ್ರತಿಭಟನಾಕಾರರು ದೂರಿದರು.

ರೈತರಿಗೆ ಮಾಹಿತಿ ನೀಡದೆ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳ ವಿಶೇಷ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿ ಮೇಲಧಿಕಾರಿಗಳ ಆದೇಶದನ್ವಯ ಕೃಷಿ ಭೂಮಿ ತೆರವುಗೊಳಿಸಲು ಮುಂದಾಗಿದ್ದಾರೆ. ಭೂ ಕಬಳಿಕೆ ನ್ಯಾಯಾಲಯದಲ್ಲಿ ಸುಳ್ಳುಕೇಸು ದಾಖಲಿಸಿ ರೈತರನ್ನು ಅನಗತ್ಯವಾಗಿ ಅಲೆದಾಡಿಸುತ್ತಿದ್ದಾರೆ ಎಂದು ಆರೋಪಿಸಿದರು. ಈ ಜಮೀನನ್ನು ಅವಲಂಬಿಸಿ ಬದುಕು ಕಟ್ಟಿಕೊಂಡಿರುವ ನೂರಾರು ರೈತ ಕುಟುಂಬಗಳು ಬೀದಿಗೆ ಬೀಳುವ ಆತಂಕ ಎದುರಾಗಿದೆ. ರೈತರ ಮೇಲೆ ದಾಖಲಿಸಿರುವ ಸುಳ್ಳು ಕೇಸುಗಳನ್ನು ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿದರು.

ಒತ್ತುವರಿಯಾಗಿದ್ದರೆ ತೆರವು ನಿಶ್ಚಿತ: ರೈತರಿಗೆ ತೊಂದರೆ ಕೊಡುವ ಉದ್ದೇಶ ನಮ್ಮದಲ್ಲ. ರೈತರು ಅರಣ್ಯ ಭೂಮಿ ಒತ್ತುವರಿ ಮಾಡಿರುವುದು ಕಂಡುಬಂದಲ್ಲಿ ಅರಣ್ಯಹಕ್ಕು ಕಾಯ್ದೆಯಡಿ ಒತ್ತುವರಿದಾರರಿಗೆ ನೋಟಿಸ್ ನೀಡಿ ಖುಲಾಸೆ ಮಾಡುವ ಪ್ರಕ್ರಿಯೆಗೆ ಚಾಲನೆ ನೀಡಲಾಗುವುದು ಎಂದು ಭದ್ರಾವತಿ ಉಪ ವಿಭಾಗದ ಡಿಎಫ್​ಒ ಎನ್.ಸಿ.ಚೆಲುವರಾಜ್ ಹೇಳಿದರು. ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಜುಲೈ ಅಂತ್ಯದೊಳಗೆ ಒತ್ತುವರಿ ತೆರವುಗೊಳಿಸಲು ಆದೇಶಿಸಲಾಗಿದೆ. ರೈತರಿಗೆ ಮೂರು ಬಾರಿ ನೋಟಿಸ್ ನೀಡಿ ಕ್ರಮ ಕೈಗೊಳ್ಳಲಾಗುವುದು. ಆರ್​ಎಫ್​ಒ ಚಂದ್ರಶೇಖರ್ ರೆಡ್ಡಿ ಅವರನ್ನು ವರ್ಗಾವಣೆ ಮಾಡಬೇಕು ಎಂದು ರೈತರು ಒತ್ತಾಯಿಸಿದ್ದಾರೆ. ಈ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ಹೇಳಿದರು.

Leave a Reply

Your email address will not be published. Required fields are marked *