ಕೆ.ಕೆಂಚಪ್ಪ, ಮೊಳಕಾಲ್ಮೂರು: ಕಳೆದ ವರ್ಷ ಬೀಕರ ಬರದ ತಾಪಕ್ಕೆ ತುತ್ತಾಗಿ ಜನ, ಜಾನುವಾರು ಅನ್ನ ನೀರಿಗೆ ಪರಿತಪಿಸುವ ದುಸ್ತರ ಪರಿಸ್ಥಿತಿ ಇನ್ನೇನು ಬಿಗಡಾಯಿಸಿತು ಎನ್ನುವಷ್ಟರಲ್ಲಿ ಸುರಿದ ಭರಪೂರ ಮಳೆ 2025ರ ಹೊಸ ವರ್ಷದ ಸಂಭ್ರಮಕ್ಕೆ ಇಂಬು ನೀಡಿದೆ.
ಬಯಲುಸೀಮೆ ಪ್ರದೇಶ ಮೊಳಕಾಲ್ಮೂರು ತಾಲೂಕಿನ ರೈತಾಪಿ ವರ್ಗ ಸದಾ ಒಂದಲ್ಲ ಒಂದು ಸಂಕಷ್ಟಗಳನ್ನು ಎದುರಿಸುತ್ತಾ ಬಂದಿದೆ. ಕಳೆದ ವರ್ಷದ ಭೀಕರ ಬರ ತಂದ ಪಜೀತಿಯಿಂದ ಹೊಲಕ್ಕೆ ಹಾಕಿದ ಬಂಡವಾಳವೂ ಕೈಸೇರದೆ ಕಂಗಲಾಗಿದ್ದ ರೈತರು ಈ ವರ್ಷ ಸುರಿದ ಬರ್ಜರಿ ಮಳೆ ಅದೆಲ್ಲವನ್ನೂ ಮರೆಸಿದೆ.
ಕಳೆದ ಮೇ- ಜೂನ್ ತಿಂಗಳಲ್ಲಿ ಶುರುವಾದ ಮಳೆ ನಡುವೆ ಕೈಕೊಟ್ಟರೂ ನಂತರ ಜಿಲ್ಲೆಯಲ್ಲೇ ವಾಡಿಕೆಗಿಂತ ಅತಿ ಹೆಚ್ಚು ಸುರಿದ ಕಾರಣ ಇವತ್ತಿಗೂ ಕೆರೆ, ಕಟ್ಟೆಗಳು ಮೈದುಂಬಿ ಇನ್ನೂ ಜೌಗು ನೀರು ಹರಿಯುತ್ತಿದೆ. ಅಂತರ್ಜಲ ವೃದ್ಧಿಯಿಂದ ಕಲ್ಯಾಣಿಗಳಿಗೂ ಜೀವ ಕಳೆ ಬಂದಿದೆ.
ತಾಲೂಕಿನ 32,500 ಹೆಕ್ಟೇರ್ ಪೈಕಿ 26 ಸಾವಿರ ಹೆಕ್ಟೇರ್ ಮಳೆಯಾಶ್ರಿತ ಪ್ರದೇಶದಲ್ಲಿ ಬಿತ್ತನೆ ಮಾಡಿದ ಶೇಂಗಾ, ತೊಗರಿ, ಔಡಲ, ನವಣೆ, ಸಜ್ಜೆ ಇತ್ಯಾದಿ ಬೆಳೆಗಳು ಸಮೃದ್ಧವಾಗಿ ಫಲ ಕೊಟ್ಟಿವೆ.
ಅತಿಯಾದ ಮಳೆಯಿಂದ ಹಲವೆಡೆ ಜಮೀನುಗಳಿಗೆ ನೀರು ನುಗ್ಗಿ ಒಂದಿಷ್ಟು ಬೆಳೆ ಹಾನಿಯಾಗಿರುವುದು ಬಿಟ್ಟರೆ ವರ್ಷದ ಬೆಳೆಗಳು ರೈತರ ಕೈಹಿಡಿದಿವೆ. ಬರದೂರಿನಲ್ಲಿ ಭತ್ತದ ಬೆಳೆಯೂ ಗಣನೀಯ ಏರಿಕೆ ಕಂಡಿದೆ.
ತೋಟಗಾರಿಕೆ ಬೆಳೆಗಳಿಗೂ ವರದಾನ: ತಾಲೂಕಿನ ಹಲವೆಡೆ 6-7 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಕೊಳವೆ ಬಾವಿ ಆಶ್ರಿತ ದಾಳಿಂಬೆ, ಸಪೋಟ, ಮಾವು, ನೇರಳೆ, ತೆಂಗು ಹಾಗೂ ತರಹೇವಾರಿ ಹಣ್ಣು, ಹೂವು, ತರಕಾರಿ ಬೆಳೆಗೂ ನೀರಿನ ಕೊರತೆ ನೀಗಿದೆ.
ಸಾವಿರ ಅಡಿ ಆಳದಲ್ಲಿದ್ದ ಅಂತರ್ಜಲ ಈಗ 100-200 ಅಡಿಗೆ ಸಿಗುತ್ತಿದೆ. 2-3 ವರ್ಷಗಳ ಕಾಲ ನೀರಿಗೆ ಅಭಾವ ತಲೆದೋರದು ಎಂಬ ಮಾತುಗಳು ಕೇಳಿ ಬರುತ್ತಿವೆ.
ಅರಣ್ಯ ಪ್ರದೇಶಕ್ಕೂ ಜೀವದಾನ: ಕಳೆದ ವರ್ಷ ಬರದ ತಾಪಕ್ಕೆ ತುತ್ತಾದ ಕಾಯ್ದಿಟ್ಟ ಅರಣ್ಯ ಪ್ರದೇಶ ಅತಿಯಾದ ಉಷ್ಣಾಂಶದಿಂದ ತರಗೆಲೆಯಂತಾಗಿದ್ದವು. ಅಡವಿಯ ಪ್ರಾಣಿ ಪಕ್ಷಿಗಳಿಗೂ ನೀರಿಗೂ ಕಂಟಕವಾಗಿತ್ತು. ಇದನ್ನು ಮನಗಂಡ ಅರಣ್ಯ ಇಲಾಖೆ ಅಧಿಕಾರಿಗಳು ಅರಣ್ಯದಲ್ಲಿ ಆಯ್ದ ಕಡೆ ಪ್ರಾಣಿ ಪಕ್ಷಿಗಳ ಜೀವ ಸಂಕುಲಕ್ಕೆ ನೀರಿನ ಅನುಕೂಲ ಮಾಡಿದ್ದರು. ಈಗ ಕಾಡನ್ನು ನೋಡುವುದೇ ಒಂದು ಚಂದ. ಅಚ್ಚಹಸಿರಿನಿಂದ ಕಂಗೊಳಿಸುತ್ತಿದೆ.
ಸದಾ ಬರವನ್ನೇ ಸವಾಲಾಗಿ ಸ್ವೀಕರಿಸಿ ಒಪ್ಪತ್ತಿನ ಗಂಜಿಯಾದರೂ ಕುಡಿದು ಬದುಕು ಕಟ್ಟಿಕೊಂಡಿರುವ ಈ ಭಾಗದ ಜನರ ಧೈರ್ಯ ಮೆಚ್ಚುವಂತಹದ್ದು. ಅತಿವೃಷ್ಟಿ, ಅನಾವೃಷ್ಟಿಯಿಂದ ಆದ ಬೆಳೆ ಹಾನಿ ಪರಿಹಾರ ಕೊಡಿಸುವಲ್ಲಿ ಆಳುವ ಸರ್ಕಾರಗಳ ಅವೈಜ್ಞಾನಿಕ ನೀತಿಗಳು ಬದಲಾಗಬೇಕು. ಬೆಳೆ ವಿಮೆ ಪರಿಹಾರದಲ್ಲೂ ವ್ಯವಸ್ಥಿತ ಮೋಸದ ಜಾಲ ಅಡಗಿದೆ. ಸರಿಪಡಿಸಿ ಎಂದು ಹಲವು ವರ್ಷಗಳಿಂದ ಎಚ್ಚರಿಕೆ ಕೊಟ್ಟರೂ ಮೃದುದೋರಣೆ ತಾಳಿರುವ ಕೇಂದ್ರದ ನಡೆ ನೋವಿನ ಸಂಗತಿ. ಮುಂದೆ ಎಲ್ಲವನ್ನೂ ಸರಿದಾರಿಗೆ ತರುವ ನಿಟ್ಟಿನಲ್ಲಿ ರೈತಸಂಘ ಒಗ್ಗಟ್ಟಿನ ಬಲದಲ್ಲಿ ಸಾಂಘಿಕ ಹೋರಾಟಕ್ಕೆ ಸಜ್ಜಾಗಲಿದೆ.
ಬೇಡರಡ್ಡಿಹಳ್ಳಿ ಬಸವರೆಡ್ಡಿ, ರಾಜ್ಯ ಉಪಾಧ್ಯಕ್ಷ, ರೈತಸಂಘ.