ಹುಬ್ಬಳ್ಳಿ: ಕುಂದಗೋಳ ಫಾರ್ಮರ್ಸ್ ಪ್ರೊಡ್ಯೂಸರ್ ಕಂಪನಿಯ 3ನೇ ವಾರ್ಷಿಕ ಮಹಾಸಭೆ ಶುಕ್ರವಾರ ಕುಂದಗೋಳದ ಮರಾಠ ಸಭಾಭವನದಲ್ಲಿ ಜರುಗಿತು.
ಅಧ್ಯಕ್ಷತೆ ವಹಿಸಿದ್ದ ಕಂಪನಿಯ ಅಧ್ಯಕ್ಷ ಮೃತ್ಯುಂಜಯ ಪಾಟೀಲ ಮಾತನಾಡಿ, 2024- 25ನೇ ಸಾಲಿನ ಕ್ರಿಯಾಯೋಜನೆಯ- ಸುಸ್ಥಿರ ಕೃಷಿ ವಿಧಾನಗಳನ್ನು ತಿಳಿಸಿದರು. ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆ, ಕಡಿಮೆ ಖರ್ಚಿನಲ್ಲಿ ಕೃಷಿಭೂಮಿ ಫಲವತ್ತತೆ ಹೆಚ್ಚಿಸುವುದು, ಸುಧಾರಿತ ಬೆಳೆಗಳ ತಂತ್ರಜ್ಞಾನ, ರೈತರ ಉಪ ಆದಾಯದ ಚಟುವಟಿಕೆ ಕುರಿತು ತರಬೇತಿ ಕೊಡಿಸಿ ರೈತರ ಜೀವನಮಟ್ಟ ಸುಧಾರಣೆ ಮಾಡಬೇಕಿದೆ ಎಂದರು.
ಸುಸ್ಥಿರ ಹತ್ತಿ ಬೆಳೆಯ ಕುರಿತು ಪ್ರಾಯೋಗಿಕವಾಗಿ ಜಪಾನ್ ಕಂಪನಿಯೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಕಂಪನಿಯ 27 ಷೇರುದಾರ ರೈತರು ನವೀನ ಪದ್ಧತಿಯಲ್ಲಿ ಹತ್ತಿ ಬೇಸಾಯ ಮಾಡಿ ಎಕರೆಗೆ ಕನಿಷ್ಠ 25 ಸಾವಿರದಿಂದ 30,000 ವರೆಗೆ ಸಸ್ಯ ಸಾಂಧ್ರತೆ, ಟ್ರಾಕ್ಟರ್ ಬಳಸಿ ಕೂರಿಗೆ ಬಿತ್ತನೆ ಕೈಗೊಂಡಿದ್ದಾರೆ. ಈಗ 165 ಎಕರೆ ಪ್ರಾಯೋಗಿಕವಾಗಿ ಮಾಡಿದ್ದು, ಇದರ ಲಾಭ ಗಮನಿಸಿ ಮುಂಬರುವ ವರ್ಷ ಸಹ ಈ ಯೋಜನೆ ಕೈಗೊಳ್ಳಲಾಗುವುದು ಎಂದರು.
ಐಡಿಎಫ್ ಸಂಸ್ಥೆಯ ಡಾ. ರಾಜೇಂದ್ರ ಹೆಗಡೆ ಅವರು ಕೃಷಿ ಉತ್ಪನ್ನದ ಮೌಲ್ಯವರ್ಧನೆ ವಿಧಾನಗಳ ಬಗ್ಗೆ ವಿವರಿಸಿದರು. ಕಂಪನಿ ಸಲಹೆಗಾರ ಡಾ. ಶಿವನಗೌಡ ಪಾಟೀಲ, ಶೇಂಗಾ, ಹೆಸರು, ಮೆಣಸಿನಕಾಯಿ, ಹತ್ತಿ ಬೆಳೆಗಳಲ್ಲಿ ವಿವಿಧ ಸುಸ್ಥಿರ ಕೃಷಿ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು.
ಕಂಪನಿ ಸಿಇಒ ಸಂಗಮೇಶ, 2023 -24ನೇ ಸಾಲಿನ ವರದಿ ಮಂಡಿಸಿ ಅನುಮೋದನೆ ಪಡೆದರು. ಪ್ರವಿಣ ಹೂಗಾರ ಸ್ವಾಗತಿಸಿದರು.
ಕಂಪನಿಯ ನಿರ್ದೇಶಕರಾದ ಚಿನ್ನಪ್ಪ ಕುನ್ನೂರ, ಅಡಿವೆಪ್ಪಗೌಡ ಪಾಟೀಲ, ಮಲ್ಲಿಕಾರ್ಜುನ ರೆಡ್ಡೇರ, ಬಸವರಾಜ ರೂಡಗಿ, ಈಶ್ವರಗೌಡ ಪಾಟೀಲ, ಷೇರುದಾರರು ಭಾಗವಹಿಸಿದ್ದರು.