ಹ್ಯಾರಿಸ್​ ಪುತ್ರನ ನಂತರ ಬಯಲಾಯ್ತು ಮತ್ತೊಬ್ಬ ಕೈ ಮುಖಂಡನ ಗೂಂಡಾಗಿರಿ

ಬೆಂಗಳೂರು: ಶಾಂತಿನಗರ ಕಾಂಗ್ರೆಸ್​ ಶಾಸಕ ಎನ್​. ಎ. ಹ್ಯಾರಿಸ್​ ಪುತ್ರ ಮಹಮ್ಮದ್​ ನಲಪಾಡ್​ ಗೂಂಡಾಗಿರಿ ವರ್ತನೆ ತೋರಿದ ಬೆನ್ನಲ್ಲೇ ರಾಜಧಾನಿಯ ಕೈ ಮುಖಂಡನೋರ್ವನ ಗೂಂಡಾ ವರ್ತನೆ ಬಯಲಾಗಿದೆ.

ಕೆ.ಆರ್​.ಪುರಂ ಬ್ಲಾಕ್​ ಕಾಂಗ್ರೆಸ್​ನ ಮಾಜಿ ಅಧ್ಯಕ್ಷ ಮತ್ತು ಜಲಮಂಡಳಿ ಸದಸ್ಯ ನಾರಾಯಣಸ್ವಾಮಿ ಬಿಬಿಎಂಪಿ ಕಚೇರಿಗೆ ಬಂದು ಪೆಟ್ರೋಲ್​ ಎರಚಿ ಬೆಂಕಿ ಹಚ್ಚಲು ಯತ್ನಿಸಿ ಗೂಂಡಾ ವರ್ತನೆ ತೋರಿದ್ದಾರೆ.

ಕಳೆದ ಶುಕ್ರವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಹೊರಮಾವುನಲ್ಲಿರುವ ಬಿಬಿಎಂಪಿ ಕಚೇರಿಗೆ ನುಗ್ಗಿ ನಾರಾಯಣಸ್ವಾಮಿ ದರ್ಪ ಮೆರೆದಿದ್ದು, ಎಆರ್​ಒ ಚೆಂಗಲ್​ ರಾಯಪ್ಪ ಅವರಿಗೆ ಬೆದರಿಕೆ ಹಾಕಿದ್ದಾರೆ.

ಎನ್​ಆರ್​ಐ ಬಡಾವಣೆ ಜಮೀನಿನ ಖಾತೆ ಮಾಡಿಕೊಡುವ ವಿಷಯದಲ್ಲಿ ನಾರಾಯಣಸ್ವಾಮಿ ಬಿಬಿಎಂಪಿ ಅಧಿಕಾರಿ ಜತೆ ವಾಗ್ವಾದ ನಡೆಸಿದ್ದಾರೆ. ಪ್ರಕರಣ ಕೋರ್ಟ್​ನಲ್ಲಿ ಇರುವುದರಿಂದ ಖಾತೆ ಮಾಡಲು ಸಾಧ್ಯವಿಲ್ಲ ಎಂದು ಅಧಿಕಾರಿ ತಿಳಿಸಿದ್ದಾರೆ. ಇದರಿಂದ ಸಿಟ್ಟಿಗೆದ್ದ ನಾರಾಯಣಸ್ವಾಮಿ ಬಿಬಿಎಂಪಿ ಕಚೇರಿಯಲ್ಲಿ ಪೆಟ್ರೋಲ್​ ಎರಚಿ ಖಾತೆ ಮಾಡಿಕೊಡದಿದ್ದರೆ ದಾಖಲೆಗಳನ್ನು ಸುಟ್ಟು ಹಾಕುವುದಾಗಿ ಬೆದರಿಕೆ ಹಾಕಿದ್ದಾರೆ.

ಇಷ್ಟಕ್ಕೇ ಸುಮ್ಮನಾಗದ ನಾರಾಯಣಸ್ವಾಮಿ ಸಿಎಂ ಸಿದ್ದರಾಮಯ್ಯ ಮತ್ತು ಕೆ.ಆರ್​.ಪುರಂ ಭೈರತಿ ಭಸವರಾಜ್​ ಪ್ರಭಾವ ಬಳಸಿ ಚೆಂಗಲ್​ ರಾಯಪ್ಪ ಅವರನ್ನು ವರ್ಗಾವಣೆ ಮಾಡಿಸಿದ್ದಾರೆ ಎಂದು ತಿಳಿದು ಬಂದಿದೆ. (ದಿಗ್ವಿಜಯ ನ್ಯೂಸ್​)

Leave a Reply

Your email address will not be published. Required fields are marked *