ಇಂಡಿ: ಭಾರತೀಯ ಕಿಸಾನ್ ಸಂಘದ ಇಂಡಿ ತಾಲೂಕು ಘಟಕ ವತಿಯಿಂದ ನೂರಾರು ರೈತರು ಮಿನಿ ವಿಧಾನಸೌಧ ಮುಂಭಾಗದಲ್ಲಿ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಧರಣಿ ಮಾಡಿ ಶಿರಸ್ತೇದಾರ ಶ್ರೀಕಾಂತ ಪೂಜಾರಿ ಅವರಿಗೆ ಮನವಿ ಸಲ್ಲಿಸಿದರು.
ಸಂಘದ ರಾಜ್ಯ ಕಾರ್ಯಕಾರಣಿ ಸದಸ್ಯ ಗುರುನಾಥ ಬಗಲಿ ಮಾತನಾಡಿ, ವಿಜಯಪುರ ಜಿಲ್ಲಾಧಿಕಾರಿ ಆದೇಶ ಅನ್ವಯ ಸದರಿ ಇಂಡಿ ತಾಲೂಕಿನ ನಾದ ಕೆಡಿ ಗ್ರಾಮದ ಸರ್ವೆ ನಂಬರ್ 139 ರಿಂದ 147 ರವರೆಗೆ ಹಾಗೂ ಶಿರಶ್ಯಾಡ, ಅರ್ಜುಣಗಿ ಬಿಕೆ, ಕೆಡಿ ಗ್ರಾಮದ ರೈತರ ಪಹಣಿಗಳಲ್ಲಿ ಕಾಲಂ ನಂಬರ್ 11 ರಲ್ಲಿನ ಕರ್ನಾಟಕ ವಕ್ಘ್ ಬೋರ್ಡ್ ಹೆಸರು ತೆಗೆದು ಹಾಕಬೇಕು.
ನಾದ ಕೆಡಿ ಗ್ರಾಮದಲ್ಲಿರುವ ಜಮಖಂಡಿ ಶುಗರ್ಸ್ ಘಟಕ 2ರ ಚಿಮಣಿಯ ಹೊಗೆಯ ಜೊತೆಗೆ ಬೂದಿ ಹಾರುವುದರಿಂದ ನಾದ, ಅರ್ಜುಣಗಿ ಗ್ರಾಮದ ಎಲ್ಲ ರೈತರ ಬೆಳೆಗಳ ಮೇಲೆ ಹಾಗೂ ತೆರೆದ ಬಾವಿ ಮನೆಗಳ ಮೇಲೆ ಬೂದಿ ಬಿದ್ದು ಪರಿಸರ ಮಾಲಿನ್ಯ ಆಗುತ್ತಿರುವುದರಿಂದ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು ಕಾರ್ಖಾನೆಯ ಎಂ.ಡಿ. ಅವರಿಗೆ ಸೂಚನೆ ನೀಡಬೇಕೆಂದು ಆಗ್ರಹಿಸಿದರು.
ರೈತ ಮುಖಂಡರಾದ ಈರಣ್ಣ ಗೋಟ್ಯಾಳ, ದತ್ತಾತ್ರೇಯ ಡೋಣಿ, ಮಹಬೂಬಸಾಬ ಮುಲ್ಲಾ, ಈರಣ್ಣ ಬಿರಾದಾರ, ಚನ್ನಪ್ಪ ಮಿರಗಿ, ಶರಣಪ್ಪ ತಾರಾಪೂರ, ಚಂದಪ್ಪ ಮಿರಗಿ ಸೇರಿ ಅನೇಕ ರೈತರು ಇದ್ದರು.