ಅಪರೂಪದ ಹಣ್ಣುಗಳ ತೋಟ

| ಅನುಷಾ ನಾಯಕ್ ಕಾಜರಗುತ್ತು

ಮಂಗಳೂರು: ಓದಿದ್ದು ಪಿಯುಸಿ. ಕೃಷಿ ಪ್ರೇಮಿ. ಸಂಶೋಧಕ. ವಿಜ್ಞಾನಿಯಂಥ ಜ್ಞಾನ ಭಂಡಾರ. ಹಣ್ಣುಗಳ ಮೇಲೆ ವಿಶೇಷ ಪ್ರೀತಿ. ಅದರಲ್ಲೂ ವಿದೇಶಿ ಹಣ್ಣುಗಳ ಬಗ್ಗೆ ಅಪರಿಮಿತ ಕುತೂಹಲ. ಪರಿಣಾಮ ಅತಿ ಹೆಚ್ಚು ವಿದೇಶಿ ಹಣ್ಣುಗಳ ಬೆಳೆಗಾರನೆಂಬ ಗರಿಮೆ. ಇವರು ಅನಿಲ್ ಬಳಂಜ. ದ.ಕ. ಜಿಲ್ಲೆ ಬೆಳ್ತಂಗಡಿ ತಾಲೂಕಿನ ಬಳಂಜ ನಿವಾಸಿ. ಓದಬೇಕೆಂಬ ಹಂಬಲವಿದ್ದರೂ ತಂದೆಯ ಅನಾರೋಗ್ಯದಿಂದಾಗಿ ಪಿಯುಸಿಗೆ ಓದು ನಿಲ್ಲಿಸಬೇಕಾಯಿತು. ನಿರಾಸೆಗೊಳಗಾಗದೆ ತಂದೆಯ ಸುಮಾರು 25 ಎಕರೆ ಜಮೀನಿನಲ್ಲಿ ಅಡಕೆ, ರಬ್ಬರ್ ಮತ್ತಿತರ ವಾಣಿಜ್ಯ ಬೆಳೆಗಳನ್ನು ಅಭಿವೃದ್ಧಿ ಮಾಡಿದ್ದಾರೆ. ಕ್ರಮೇಣ ತರಕಾರಿ, ಹಣ್ಣುಗಳ ಬಗ್ಗೆ ಒಲವು ಮೂಡಿ ಅವುಗಳ ಅಧ್ಯಯನ ನಡೆಸಿದರು. ಹಣ್ಣು ಬೆಳೆಯುವ ವಿಧಾನ, ಅದರ ಔಷಧೀಯ ಗುಣದ ಬಗ್ಗೆ ಅರಿತುಕೊಂಡು ತೋಟದಲ್ಲಿ ಹಣ್ಣುಗಳ ಸಂಶೋಧನೆಯನ್ನೂ ನಡೆಸುತ್ತಿದ್ದಾರೆ.

ವಿದೇಶ ಪ್ರಯಾಣ: ಹಣ್ಣುಗಳ ಮೇಲಿನ ಮೋಹ ಅನಿಲ್​ರನ್ನು ಮಲೇಷ್ಯಾ, ಇಂಡೋನೇಷ್ಯಾ, ಥಾಯ್ಲೆಂಡ್ ದೇಶಗಳಿಗೆ ಪ್ರವಾಸ ಮಾಡಿಸಿದೆ. ಅಲ್ಲಿಂದ ಹಣ್ಣು ಬೀಜಗಳನ್ನು ತರಿಸಿ ಬೆಳೆದಿದ್ದಾರೆ. ಬ್ರೆಜಿಲ್, ಇಂಡೋನೇಷ್ಯಾ, ಥಾಯ್ಲೆಂಡ್, ಮಲೇಷ್ಯಾ, ಆಫ್ರಿಕಾ, ಆಸ್ಟ್ರೇಲಿಯಾ, ಮೆಕ್ಸಿಕೋ ಮತ್ತಿತರ ದೇಶಗಳಿಂದ ಹಣ್ಣುಬೀಜಗಳನ್ನು ಆಮದು ಮಾಡಿಕೊಂಡಿದ್ದಾರೆ. ವಿದೇಶಿಯರಿಂದ ಹಣ್ಣು ಬೆಳೆಯುವ ವಿಧಾನದ ಬಗ್ಗೆ ತಿಳಿದುಕೊಂಡಿದ್ದಾರೆ. ನಮ್ಮ ದೇಶದ ವಿವಿಧ ಭಾಗಗಳ ಹಣ್ಣುಗಳನ್ನೂ ಬೆಳೆಸಿದ್ದಾರೆ. ವಾಟ್ಸಾಪ್, ಫೇಸ್​ಬುಕ್​ನಲ್ಲಿನ ಕೃಷಿ ಸಂಬಂಧಿತ ಗ್ರೂಪ್​ಗಳನ್ನು ಬಳಸಿ, ಹಣ್ಣು ಬೆಳೆಯುವ ಹೊಸ ವಿಧಾನ, ಸಲಹೆಗಳನ್ನು ಪಡೆಯತ್ತಾರೆ.

‘ಹೊರದೇಶಗಳಲ್ಲಿ ಜನರು ಕೃಷಿ ಮಾಡುವ ವಿಧಾನ ವಿಭಿನ್ನ. ಅವರು ಲಾಭಕ್ಕಾಗಿ ಬೆಳೆಯದೆ ಹವ್ಯಾಸವಾಗಿ ಕೃಷಿಯಲ್ಲಿ ತೊಡಗಿಕೊಳ್ಳುತ್ತಾರೆ. ಪರ್ಯಾಯ ಬೆಳೆಗಳನ್ನೂ ಮಾಡುತ್ತಾರೆ. ನಮ್ಮ ದೇಶಕ್ಕೆ ಹೊಂದುವ ವಿದೇಶಿ ತಂತ್ರಜ್ಞಾನ, ಕೃಷಿ ವಿಧಾನಗಳನ್ನು ಅಳವಡಿಸಿಕೊಂಡರೆ ಖಂಡಿತ ಅಭಿವೃದ್ಧಿಯಾಗುತ್ತದೆ. ಈ ನಿಟ್ಟಿನಲ್ಲಿ ಯುವಕರು ಆಸಕ್ತಿ ಬೆಳೆಸಿಕೊಳ್ಳಬೇಕು. ಸರ್ಕಾರದ ಪ್ರೋತ್ಸಾಹ, ಬೆಂಬಲವೂ ಬೇಕಿದೆ’ ಎನ್ನುತ್ತಾರೆ ಅನಿಲ್. ಇವರ ಈ ಹವ್ಯಾಸಕ್ಕೆ ತಂದೆ, ತಾಯಿ, ಪತ್ನಿಯ ಸಹಕಾರವಿದೆ.

ಸಂಶೋಧನೆ

ಹಣ್ಣುಗಳ ತಳಿ ಅಧ್ಯಯನ ನಡೆಸುವ ಅನಿಲ್, ಕಸಿ ಮಾಡುವುದರಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದಾರೆ. ಬೀಜಗಳನ್ನು ಕಾಪಿಡುವ ವೈಜ್ಞಾನಿಕ ವಿಧಾನಗಳನ್ನು ಅನುಸರಿಸುತ್ತಾರೆ. ಈ ಬಗ್ಗೆ ಸಂಶೋಧನೆಗಳನ್ನೂ ನಡೆಸುತ್ತಾರೆ. ಅನೇಕ ವಿದೇಶಿ ಹಣ್ಣು ಗಿಡಗಳಿಗೆ ಇಲ್ಲಿನ ವಾತಾವರಣ ಹೊಂದುವುದಿಲ್ಲ. ಹವಾಮಾನ, ನೀರು ನಿರ್ವಹಣೆ, ಮಣ್ಣಿನ ಪರಿಸ್ಥಿತಿ, ಬಿಸಿಲು-ನೆರಳಿನ ಹೊಂದಾಣಿಕೆ ಎಲ್ಲವೂ ಮುಖ್ಯವಾಗುತ್ತವೆ. ಇದಕ್ಕಾಗಿ ಪಾಲಿಹೌಸ್ ನಿರ್ವಿುಸಿದ್ದಾರೆ. ‘ಈ ನಿಟ್ಟಿನಲ್ಲಿ, ದೇಶ-ವಿದೇಶಗಳಲ್ಲಿರುವ ಗೆಳೆಯರು ಈ ಬಗ್ಗೆ ನೀಡುವ ಸಲಹೆಗಳನ್ನು ಪಾಲಿಸುತ್ತೇನೆ. ತಂತ್ರಜ್ಞಾನಗಳ ನೆರವು ಪಡೆದುಕೊಳ್ಳುತ್ತೇನೆ’ ಎಂದು ಅನಿಲ್ ವಿವರಿಸುತ್ತಾರೆ.

800ಕ್ಕೂ ಹೆಚ್ಚು ತಳಿ

ಅನಿಲ್ ಅವರು 8 ಎಕರೆಯಲ್ಲಿ 800ಕ್ಕೂ ಹೆಚ್ಚು ದೇಸಿ ಮತ್ತು ವಿದೇಶಿ ತಳಿಯ ಹಣ್ಣು ಗಿಡಗಳನ್ನು ಬೆಳೆಸಿದ್ದಾರೆ. ಜಪಾನೀಸ್ ಬ್ಲ್ಯಾಕ್​ಬೆರಿ, ರೊಲಿನಿಯಾ ಮುಕೊಸಾ, ರಷ್ಯನ್ ಪಪಿನೊ, ಗ್ಯಾಕ್, ಮೆಕ್ಸಿಕನ್ ಸಪೋಟಾ, ಜಬೋಟಿಕಾ, ಜ್ಯಾಮ್್ರುಟ್, ಮಲೇಷ್ಯನ್ ವಾಟರ್​ವೆುಲನ್ ಮತ್ತಿತರ ಗಿಡಗಳಿದ್ದು, ಹಣ್ಣು ಬಿಡುತ್ತಿವೆ. ಹಣ್ಣಿನ ವೈಜ್ಞಾನಿಕ ಹೆಸರು, ಅವುಗಳ ಔಷಧೀಯ ಗುಣಗಳನ್ನೂ ಅನಿಲ್ ಅರಿತಿದ್ದಾರೆ. ಇವರ ಕೃಷಿ ನೋಡಲು ವಿದೇಶಗಳಿಂದಲೂ ಆಸಕ್ತರು ಬರುತ್ತಾರೆ. ಸಂಪರ್ಕಕ್ಕೆ: 9448067466.

ಲಾಭಕ್ಕಲ್ಲ, ಹವ್ಯಾಸ

ವಿದೇಶಗಳಿಂದ ಹಣ್ಣು ಬೀಜಗಳನ್ನು ತರಿಸುವುದೆಂದರೆ ದುಬಾರಿ ವೆಚ್ಚವಾಗುತ್ತದೆ. ಹೀಗೆ ಲಕ್ಷಾಂತರ ರೂ. ಖರ್ಚು ಮಾಡಿ ದೇಶ-ವಿದೇಶಗಳ ಹಣ್ಣಿನ ಗಿಡಗಳನ್ನು ನೆಟ್ಟು ಪೋಷಿಸುತ್ತಿರುವ ಅನಿಲ್ ಲಾಭದ ಉದ್ದೇಶ ಇಟ್ಟುಕೊಂಡಿಲ್ಲ. ನರ್ಸರಿ ಮಾಡುವ ಉದ್ದೇಶವೂ ಇವರದ್ದಲ್ಲ. ಒಂದು ಉತ್ತಮ ಹಣ್ಣಿನ ತೋಟ ಮಾಡುವುದು ಗುರಿ. ತಿಂದುಳಿದ ಹಣ್ಣು ಪ್ರಾಣಿಪಕ್ಷಿಗಳಿಗೆ ಆಹಾರವಾಗುತ್ತದೆ. ಅದರಲ್ಲೂ ಖುಷಿ ಸಿಗುತ್ತದೆ ಎನ್ನುತ್ತಾರೆ.

ನಾನು ಯಾವುದೇ ಪದವಿ ಪಡೆದವನಲ್ಲ, ಆದರೆ ಬೆಳೆಯುವ ಪ್ರತಿಯೊಂದು ಹಣ್ಣಿನ ಸಂಪೂರ್ಣ ಮಾಹಿತಿ ಹೊಂದಿದ್ದೇನೆ. ತಿಳಿದುಕೊಳ್ಳಬೇಕೆಂಬ ತುಡಿತವಿದ್ದರೆ ಏನು ಬೇಕಾದರೂ ಸಾಧಿಸಬಹುದಾಗಿದೆ.

| ಅನಿಲ್ ಬಳಂಜ, ಕೃಷಿಕ