ತಾವು ಬೆಳೆದ ಬೆಳೆಗಳನ್ನು ರಕ್ಷಿಸಿಕೊಳ್ಳಲು ಎಫ್​ಎಂ ರೇಡಿಯೋ ಮೊರೆ ಹೋದ ರೈತರು

ಕೋಲಾರ: ರೈತರು ಕಷ್ಟಪಟ್ಟು ಬೆಳೆದ ಬೆಳೆಗಳು ಕೆಲವೊಮ್ಮೆ ಪ್ರಾಣಿಗಳ ದಾಳಿಯಿಂದ ಹಾಳಾಗಿ ಬಿಡುತ್ತವೆ. ಹಲವು ತಿಂಗಳು ಕಾಲ ಬೆವರು ಹರಿಸಿ ಬೆಳೆದ ಬೆಳೆಗಳನ್ನು ಪ್ರಾಣಿಗಳು ಕೇವಲ ಗಂಟೆಗಳಲ್ಲಿ ನಾಶ ಮಾಡಿಬಿಡುತ್ತವೆ. ಹೀಗಾಗಿ ರೈತರು ತಮ್ಮ ಬೆಳೆಗಳನ್ನು ಉಳಿಸಿಕೊಳ್ಳಲು ಏನೆಲ್ಲ ಕಸರತ್ತು ಮಾಡುತ್ತಾರೆ ಎಂಬುದಕ್ಕೆ ಇದೊಂದು ಸಣ್ಣ ಉದಾಹರಣೆ.

ಹೌದು, ಕೋಲಾರ ತಾಲೂಕಿನ ಹೋಳೂರು ಗ್ರಾಮದ ನಂಜುಂಡರೆಡ್ಡಿಯವರಿಗೆ ಸೇರಿದ ತೋಟದಲ್ಲಿ ರಾತ್ರಿಯಾದರೆ ಸಾಕು ಕಾಡು ಪ್ರಾಣಿಗಳ ಕಾಟ ಹೆಚ್ಚಾಗಿರುತ್ತದೆ. ಹಾಗಾಗಿ ಕಾಡು ಪ್ರಾಣಿಗಳನ್ನು ನಿಯಂತ್ರಿಸಲು ರೈತರು ಎಫ್​ಎಂ ಮೊರೆ ಹೋಗಿದ್ದಾರೆ.

ಎಫ್‌ಎಂನಲ್ಲಿ ನಿರಂತರವಾಗಿ ಆರ್​​​ಜೆಗಳ ಗದ್ದಲ ಕೇಳಿಸುತ್ತೆ. ಇದರಿಂದಾಗಿ ಕಾಡುಪ್ರಾಣಿಗಳು ಹೆದರಿ ಹೊಲದತ್ತ ಸುಳಿಯುವುದಿಲ್ಲವಂತೆ. ಇಷ್ಟೇ ಅಲ್ಲದೆ ಬಿಯರ್​ ಬಾಟಲುಗಳನ್ನು ಹೊಲದ ಸುತ್ತಮುತ್ತ ಕಟ್ಟಲಾಗಿದೆ. ಇದರಿಂದ ಬರೋ ಸದ್ದಿನಿಂದ ಕಾಡು ಪ್ರಾಣಿಗಳು ಇತ್ತ ಬರುವುದಿಲ್ಲ ಎಂಬುದು ರೈತರ ಅಭಿಪ್ರಾಯವಾಗಿದೆ.

ಈ ಹಿಂದೆ ರೈತರು ತಾವು ಬೆಳೆದ ಬೆಳಗಳನ್ನು ರಕ್ಷಿಸಲು ಇನ್ನಿಲ್ಲದ ಸಾಹಸ ಮಾಡುತ್ತಿದ್ದರು. ಬೆಂಕಿ ಹಾಕುವುದು, ತಮಟೆ ಹೊಡೆಯುವುದು, ಮುಳ್ಳು ಕಂಬಿಯ ಬೇಲಿ ನಿರ್ಮಾಣ ಮಾಡುವುದು ಹೀಗೆ ನಾನಾ ಪ್ರಯತ್ನ ಮಾಡುತ್ತಿದ್ದರು. ಆದರೆ, ಈಗ ವಿದ್ಯುತ್ ದೀಪಗಳನ್ನು ಹಾಕಿ ಎಫ್‌ಎಂ ರೇಡಿಯೋಗಳನ್ನು ಅಳವಡಿಸಿದ್ದಾರೆ. ಇದರಿಂದ ಕಾಡು ಪ್ರಾಣಿಗಳ ಕಾಟ ಕಡಿಮೆಯಾಗಿದೆ ಎನ್ನುತ್ತಾರೆ ರೈತರು. ಆದರೂ ಪ್ರಾಣಿಗಳನ್ನು ಸಂಪೂರ್ಣ ನಿಯಂತ್ರಣ ಮಾಡುವುದು ಕಷ್ಟ. ಹೀಗಾಗಿ ಸಂಬಂಧಪಟ್ಟ ಇಲಾಖೆ ನೆರವಿಗೆ ಬರಲಿ ಎನ್ನುವುದು ರೈತರ ಆಗ್ರಹ. (ದಿಗ್ವಿಜಯ ನ್ಯೂಸ್​)