ಸಂಪೂರ್ಣ ಸಾಲಮನ್ನಾಕ್ಕೆ ಒತ್ತಾಯ

ಹಾವೇರಿ: ರೈತರ ಸಂಪೂರ್ಣ ಸಾಲಮನ್ನಾ ಮತ್ತಿತರ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ನೇತೃತ್ವದಲ್ಲಿ ನಗರದ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ರೈತರು ಸೋಮವಾರ ಪ್ರತಿಭಟನೆ ನಡೆಸಿದರು.

ಮುರುಘಾಮಠದಿಂದ ಸಿದ್ದಪ್ಪ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಸಿದ್ದಪ್ಪ ವೃತ್ತದಲ್ಲಿ ವಾಹನ ಸಂಚಾರ ತಡೆ ನಡೆಸಿದರು.

ಪ್ರತಿಭಟನೆಯ ನೇತೃತ್ವ ವಹಿಸಿದ್ದ ರಾಜ್ಯಾಧ್ಯಕ್ಷ ಕೆ.ಟಿ. ಗಂಗಾಧರ ಮಾತನಾಡಿ, ರೈತರ ಸಂಪೂರ್ಣ ಸಾಲಮನ್ನಾ ಗೊಂದಲ ನಿವಾರಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ಬಜೆಟ್​ನಲ್ಲಿ ಘೊಷಣೆ ಮಾಡಿರುವ ಸಾಲಮನ್ನಾ ರೈತರ ಕಣ್ಣೊರೆಸುವ ತಂತ್ರವಾಗಿದೆ. 5ವರ್ಷಗಳಿಂದ ರೈತರು ಬರದಿಂದ ಕಂಗಾಲಾಗಿದ್ದು, ಇದರ ನಡುವೆ ಬೆಲೆ ಕುಸಿತದಿಂದ ಸಾಲದ ಸುಳಿಗೆ ಸಿಲುಕಿದ್ದಾರೆ. 2009ರಿಂದ ಈಚೆಗೆ ಸಾಲ ಪಡೆದವರಿಗೆ ಮಾತ್ರ ಸಾಲ ಮನ್ನಾ ಯೋಜನೆ ಅನ್ವಯವಾಗುತ್ತದೆ. 2008ರಲ್ಲಿ ಕೇಂದ್ರ ಸರ್ಕಾರ ರೈತರ ಸಾಲಮನ್ನಾ ಮಾಡಿತ್ತು. ಆದರೆ, ಕೆಲ ನಿಬಂಧನೆ ವಿಧಿಸಿದ್ದರಿಂದ ಹಲವು ರೈತರ ಸಾಲಮನ್ನಾವಾಗಿಲ್ಲ. ಬಾಕಿ ಉಳಿದಿರುವ ರೈತರ ಬೆಳೆಸಾಲ ಮತ್ತು ಅಭಿವೃದ್ಧಿ ಸಾಲ ಮನ್ನಾ ಮಾಡಲು ಸರ್ಕಾರ ಮುಂದಾಗಬೇಕು ಎಂದರು.

ಯಾವುದೇ ಪಕ್ಷದ ರಾಜಕಾರಣಿಗಳು ರೈತರ ವಿಷಯದಲ್ಲಿ ರಾಜಕೀಯ ಮಾಡುವುದು ಸರಿಯಲ್ಲ. ಬಜೆಟ್​ನಲ್ಲಿ ರೈತರ ಮೊದಲನೇ ಹಂತದ ಸಾಲಮನ್ನಾವಾಗಿದೆ ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ. ಹಾಗಾದರೇ ಎರಡನೇಯ ಹಂತದ ಸಾಲಮನ್ನಾ ಯಾವಾಗ ಎಂಬುದನ್ನು ಸ್ಪಷ್ಟಪಡಿಸಬೇಕೆಂದು ಒತ್ತಾಯಿಸಿದರು.

ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚಳ್ಳೇರ ಮಾತನಾಡಿದರು. ಪ್ರತಿಭಟನೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ, ಸದಸ್ಯರಾದ ಶಿವಬಸಪ್ಪ ಗೋವಿ, ಕಿರಣಕುಮಾರ ಗಡಿಗೋಳ, ಅಡಿವೆಪ್ಪ ಆಲದಕಟ್ಟಿ, ಮಹ್ಮದಗೌಸ್ ಪಾಟೀಲ, ಬಸನಗೌಡ ಗಂಗಪ್ಪಳವರ, ಮಂಜುಳಾ ಅಕ್ಕಿ, ಗಂಗಣ್ಣ ಎಲಿ, ಸೋಮಶೇಖರಪ್ಪ ಚಪ್ಪರದಹಳ್ಳಿ, ಮಲ್ಲೇಶಪ್ಪ ಪರಪ್ಪನವರ ಇತರರು ಪಾಲ್ಗೊಂಡಿದ್ದರು.

ರೈತರ ಬೇಡಿಕೆಗಳು: ಸರ್ಕಾರ ಕೇವಲ ಬೆಂಬಲ ಬೆಲೆ ಘೊಷಿಸಿದರೆ ಸಾಲದು ಹೋಬಳಿ ಮಟ್ಟದಲ್ಲಿ ಖರೀದಿ ಕೇಂದ್ರ ತೆರೆಯಬೇಕು. ಕಳೆದ ಸರ್ಕಾರದ ಅವಧಿಯ ಮೊದಲ ಬಜೆಟ್​ನಲ್ಲಿಯೇ ಜಿಲ್ಲೆಗೆ ಡಿಸಿಸಿ ಬ್ಯಾಂಕ್ ಘೊಷಣೆ ಮಾಡಿದ್ದು ಇಲ್ಲಿಯವರೆಗೆ ಬ್ಯಾಂಕ್ ಸ್ಥಾಪನೆಯಾಗಿಲ್ಲ. ಶೀಘ್ರದಲ್ಲಿಯೇ ಡಿಸಿಸಿ ಬ್ಯಾಂಕ್ ಸ್ಥಾಪನೆಗೆ ಕ್ರಮ ಕೈಗೊಳ್ಳಬೇಕು. ಬೆಳೆವಿಮೆ ಕಂಪನಿಗಳು ವಿಮೆ ತುಂಬಿಸಿ ಕೊಳ್ಳಲು ನಿರ್ದಿಷ್ಟ ಅವಧಿ ನಿಗದಿಪಡಿಸಬೇಕು. ರೈತರ ಬೆಳೆವಿಮೆ ಪರಿಹಾರ ಘೊಷಿಸಲು ನಿಗದಿತ ದಿನಾಂಕ ಘೊಷಿಸಬೇಕು. ತುಂಗಾ ಮೇಲ್ದಂಡೆ ಯೋಜನೆಯಡಿ ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರ ವಿತರಿಸಬೇಕು ಮತ್ತಿತರ ಬೇಡಿಕೆಗಳ ಮನವಿಯನ್ನು ಉಪವಿಭಾಗಾಧಿಕಾರಿ ಲೋಕೇಶ ಅವರ ಮೂಲಕ ಸರ್ಕಾರಕ್ಕೆ ಸಲ್ಲಿಸಲಾಯಿತು.

ರಗುಂದ ನವಲಗುಂದ ರೈತ ಬಂಡಾಯದ 39ನೇ ವರ್ಷದ ಸವಿನೆನಪಿಗಾಗಿ ಜು. 21ರಂದು ಕೊಪ್ಪಳ ತಾಲೂಕಿನ ಹಿಟ್ನಾಳ ಗ್ರಾಮದಲ್ಲಿ ರಾಜ್ಯಮಟ್ಟದ ರೈತ ಸಮಾವೇಶ ಏರ್ಪಡಿಸಲಾಗಿದೆ. ರೈತರ ಬೆಳೆಗಳಿಗೆ ವೈಜ್ಞಾನಿಕ ಬೆಲೆ ಹಾಗೂ ಸಾಲಮನ್ನಾ ಇತರೆ ರೈತ ಸಂಬಂಧಿ ವಿಚಾರಗಳು ಚರ್ಚೆಯಾಗಲಿವೆ.

|ಕೆ.ಟಿ. ಗಂಗಾಧರ, ರಾಜ್ಯಾಧ್ಯಕ್ಷ