ರಸ್ತೆ ನಿರ್ಮಾಣಕ್ಕೆ ಭೂ ಸ್ವಾಧೀನಪಡಿಸಿ

ಬೀರೂರು: ಪಟ್ಟಣ ಹೊರವಲಯದ ಭಗವತ್ ನಗರ ಬಡಾವಣೆ ರಸ್ತೆ ನಿರ್ಮಾಣಕ್ಕೆ ಕೂಡಲೇ ಕ್ರಮಕೈಗೊಳ್ಳುವಂತೆ ಪುರಸಭೆ ಸದಸ್ಯರು ಶಾಸಕ ಬೆಳ್ಳಿಪ್ರಕಾಶ್‌ಗೆ ಮನವಿ ಮಾಡಿದರು.
ಭಗವತ್ ನಗರ ಬಡಾವಣೆ ರಸ್ತೆ ನಿರ್ಮಾಣಕ್ಕೆ ಭೂಮಿ ನೀಡುವ ರೈತರಿಗೆ ಪುರಸಭೆಯಿಂದ ಪರಿಹಾರ ನೀಡಲು ಸಾಧ್ಯವಾಗಿಲ್ಲ. ಆದ್ದರಿಂದ ಸರ್ಕಾರದ ಅನುದಾನದಲ್ಲಿ ಭೂಸ್ವಾಧೀನ ಪಡಿಸಿಕೊಂಡು ರಸ್ತೆ ಅಭಿವೃದ್ಧಿಗೆ ಮುಂದಾಗಬೇಕು ಎಂದು ಪುರಸಭೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಸದಸ್ಯರು ಒಕ್ಕೂರಲಿನಿಂದ ಒತ್ತಾಯಿಸಿದರು.
ಶಾಸಕ ಬೆಳ್ಳಿ ಪ್ರಕಾಶ್ ಮಾತನಾಡಿ, ಬೀರೂರು ಪುರಸಭೆ ವ್ಯಾಪ್ತಿಯ ಹಲವು ಕಾಮಗಾರಿಗಳಿಗೆ ಬೇರೆ ಊರಿನ ಗುತ್ತಿಗೆದಾರರು ಟೆಂಡರ್ ಪ್ರಕ್ರಿಯೆಗಳಲ್ಲಿ ಭಾಗವಹಿಸುತ್ತಿರುವುದು ಗಮನಕ್ಕೆ ಬಂದಿದೆ. ಇವರು ಸರ್ಕಾರದ ಎಸ್‌ಆರ್ ಬೆಲೆಗಿಂತ ಕಡಿಮೆಗೆ ಟೆಂಡರ್ ಪಡೆದಿದ್ದಾರೆ. ಇವರಿಂದ ಗುಣಮಟ್ಟದ ಕಾಮಗಾರಿ ನಿರ್ವಹಿಸಲು ಸಾಧ್ಯವೇ?. ಮುಂದಿನ ದಿನಗಳಲ್ಲಿ ಅವರು ನಡೆಸುವ ಕಾಮಗಾರಿಗಳ ಖುದ್ದು ಸ್ಥಳ ಪರಿಶೀಲನೆ ನಡೆಸಿ ಬಿಲ್ ಪಾವತಿಸಲಾಗುವುದು. ಕಾಮಗಾರಿ ಕಳಪೆಯಾದರೆ ಸಂಬಂಧಪಟ್ಟ ಅಧಿಕಾರಿಗಳನ್ನು ಹೊಣೆ ಮಾಡಲಾಗುವುದು ಎಂದರು.
ಆಗಸ್ಟ್‌ನಲ್ಲಿ ಭದ್ರಾ ಕುಡಿಯುವ ನೀರು ಪೂರೈಕೆ ಕುರಿತು ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧಿಕಾರಿಗಳು ತರೀಕೆರೆ ಶಾಸಕರೊಂದಿಗೆ ಸಭೆ ನಡೆಸಲಾಗಿದೆ. ಈ ಯೋಜನೆ ವ್ಯಾಪ್ತಿಗೆ ಬರುವ ಕಡೂರು ಶಾಸಕರಿಗೆ ಮಾಹಿತಿ ನೀಡುವ ವ್ಯವದಾನ ಇರಲಿಲ್ಲವೇ? ಕಡೂರು, ಬೀರೂರು ಮತ್ತು 34 ಹಳ್ಳಿಗಳಿಗೆ ಕುಡಿಯುವ ನೀರು ಪೂರೈಕೆ ಕಾಮಗಾರಿ ಮತ್ತು ಪರಿಸ್ಥಿತಿ ಬಗ್ಗೆ ನಮ್ಮನ್ನು ಕತ್ತಲಲ್ಲಿ ಇಡಲಾಗಿದೆ ಎಂದು ಆಕ್ಷೇಪ ವ್ಯಕ್ತ ಪಡಿಸಿದರು.
ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಸಹಾಯಕ ಇಂಜಿನಿಯರ್ ಎಸ್.ಪಿ.ಬಾಂದೇಕರ್ ಮಾತನಾಡಿ, ಹಳ್ಳಿಗಳಿಗೆ ನೀರು ಪೂರೈಕೆಗೆ ಆರ್‌ಡಿಪಿಆರ್‌ನಿಂದ ಯೋಜನೆಗೆ 5.72 ಕೋಟಿ ರೂ. ನೀಡಲಾಗಿದೆ. ಯೋಜನೆ ವ್ಯಾಪ್ತಿಯಲ್ಲಿ ಬರುವ ತರೀಕೆರೆ, ಕಡೂರು ತಾಲೂಕಿನ 34 ಹಳ್ಳಿಗಳಿಗೆ ನೀರು ಪೂರೈಸಬೇಕಿದೆ. ಭವಿಷ್ಯದಲ್ಲಿ ನಿತ್ಯ 20 ದಶ ಲಕ್ಷ ಲೀ. ಪೂರೈಸಬೇಕಾಗುತ್ತದೆ. ಹಳ್ಳಿಗಳಿಗೆ ನೀರು ಪೂರೈಸುವ ಮುಖ್ಯಪಾಯಿಂಟ್‌ವರೆಗೆ ಪುರಸಭೆಗಳೆ ನಿರ್ವಹಿಸಬೇಕು. ಗ್ರಾಮಗಳ ಒಳಗಿನ ನಿರ್ವಹಣೆ ಗ್ರಾಪಂಗೆ ಸೇರಿದೆ ಎಂದು ತಿಳಿಸಿದರು.
ಸಭೆಯಲ್ಲಿ ಮುಖ್ಯಾಧಿಕಾರಿ ಮಂಜಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಶರತ್, ಸದಸ್ಯರಾದ ಎಂ.ಐ.ಬಸವರಾಜ್, ಎನ್.ಎಂ.ನಾಗರಾಜ್, ಲೋಕೇಶಪ್ಪ, ಈಶ್ವರಪ್ಪ, ಎಸ್.ಎಲ್.ಮಂಜುನಾಥ್, ಎಸ್.ಎಸ್.ದೇವರಾಜ್, ಅರ್ಜುನ, ಗೀತಾ ಹೇಮಂತ್, ವಸಂತ ರಾಮು, ವಿಶಾಲ ಜಯರಾಮ್, ಪುರಸಭೆ ಸಿಬ್ಬಂದಿ ಇದ್ದರು.
ಅನುದಾನ ವಾಪಸ್: ಸೆಪ್ಟಿಕ್‌ಟ್ಯಾಂಕ್ ನಿರ್ಮಿಸಲು ಪುರಸಭೆ ಜಾಗ ನೀಡದ ಕಾರಣ ಸರ್ಕಾರದಿಂದ ಬಿಡುಗಡೆಯಾದ ಅನುದಾನ ವಾಪಸ್ಸ್ ಹೋಗಿದೆ ಎಂದು ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಸಹಾಯಕ ಇಂಜಿನಿಯರ್ ಎನ್.ಸಿ.ಶಿಲ್ಪಾ ತಿಳಿಸಿದರು.
ಪರಿಶೋಧನೆ ಮಾಡಲು ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಸಹಾಯಕ ಇಂಜಿನಿಯರ್ ನೇಮಿಸಬೇಕು. ಸದಸ್ಯಕ್ಕೆ ಗುತ್ತಿಗೆದಾರರ ಪರವಾದ ನಿರ್ವಾಹಕರಿಂದ ಮನೆ ಸಂಪರ್ಕ ನೀಡುವವರ ಮಾಹಿತಿ ಪಡೆಯಬಹುದು ಎಂದರು.
ಇದಕ್ಕೆ ಆಕ್ಷೇಪಿಸಿದ ಸದಸ್ಯರು, ಪುರಸಭೆ ಮಂಡಳಿ ಅಧಿಕಾರಿಗಳೊಂದಿಗೆ ಚರ್ಚಿಸಬಹುದೇ ಹೊರತು ಗುತ್ತಿಗೆದಾರರ ಜತೆಗಲ್ಲ.ಅವರು ಮಾಹಿತಿ ನೀಡಲಿ, ನಿಮ್ಮವರು ಪರಿಶೀಲನೆ ನಡೆಸಲಿ. ಪುರಸಭೆ ಜಾಗ ಗುರುತಿಸಿದ್ದು, ಹಣ ಬಿಡುಗಡೆಗೆ ಮಂಡಳಿಯೊಂದಿಗೆ ಚರ್ಚಿಸುವಂತೆ ಶಾಸಕರು ಸೂಚಿಸದರು.
ಸಾಲ ತೀರುವಳಿ ಪತ್ರ ವಿತರಣೆಗೆ ಆಕ್ಷೇಪ: ಸಿದ್ದರಾಮಯ್ಯ ಸರ್ಕಾರ 2015ರಲ್ಲಿ ಘೋಷಿಸಿದ್ದ ಆಶ್ರಯ ಬಡಾವಣೆ ನಿವಾಸಿಗಳ ಸಾಲ ತೀರುವಳಿ ಪತ್ರವನ್ನು ಆಶ್ರಯ ಸಮಿತಿ ಅಧ್ಯಕ್ಷ ಬೆಳ್ಳಿಪ್ರಕಾಶ್ ವಿತರಿಸಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸಮಿತಿ ಸದಸ್ಯ ಬಿ.ಟಿ.ಚಂದ್ರಶೇಖರ್, ಸದಸ್ಯರ ಮನೆ ಬಾಗಿಲಿಗೆ ಹೋಗಿ ಪತ್ರ ವಿತರಿಸಬೇಕು. ಜಿಪಿಎಸ್ ಮಾಡಿಸಿಲ್ಲ, ಆಶ್ರಯ ಸಮಿತಿ ಸಭೆಯನ್ನೂ ನಡೆಸಿಲ್ಲ. ಏಕಮುಖ ತೀರ್ಮಾನ ಕೈಗೊಂಡಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ ಸದಸ್ಯರಾದ ಬಿ.ಟಿ.ಚಂದ್ರಶೇಖರ್, ವಿಜಯೇಂದ್ರಬಾಬು, ಬಿ.ಕೆ.ರುದ್ರಪ್ಪ, ಬಿ.ಕೆ.ಶಶಿಧರ ಸಭಾತ್ಯಾಗ ಮಾಡಿದರು. ಕೆಲ ಸದಸ್ಯರು ಜನರಿಗೆ ತೊಂದರೆ ಕೊಡುವುದು ಸರಿಯಲ್ಲ. ಶಾಸಕರ ಅನುಪಸ್ಥಿತಿಯಲ್ಲಿ ಪತ್ರ ವಿತರಣೆ ಸಾಧ್ಯವಾಗಿರಲಿಲ್ಲ. ಈಗ ಹೊಸ ಶಾಸಕರು ಬಂದಿದ್ದಾರೆ. ಅವರು ಸಾಲಮನ್ನಾ ಪತ್ರ ವಿತರಿಸಲಿ ಎಂದು ಕೆಲವು ಸದಸ್ಯರು ಹೇಳಿದಾಗ ಪತ್ರಗಳನ್ನು ವಿತರಿಸಲಾಯಿತು.