ಮಲಪ್ರಭಾ ನದಿಗೆ ನೀರು ಹರಿಸುವಂತೆ ಮಾಜಿ ಸಿಎಂ ಸಿದ್ದು ಪತ್ರ

ಬೆಂಗಳೂರು: ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಗ್ರಾಮಗಳಲ್ಲಿ ಮಳೆಯ ಅಭಾವದಿಂದಾಗಿ ಅನ್ನದಾತರಿಗೆ ತೊಂದರೆಯಾಗಿದೆ. ಹಾಗಾಗಿ ಮಲಪ್ರಭಾ ನದಿಗೆ ಮತ್ತು ಕಾಲುವೆಗೆ ನೀರು ಹರಿಸುವಂತೆ ಮಾಜಿ ಸಿಎಂ ಮತ್ತು ಬಾದಾಮಿ ಕ್ಷೇತ್ರದ ಶಾಸಕ ಸಿದ್ದರಾಮಯ್ಯ ಅವರು ಪ್ರಾದೇಶಿಕ ಆಯುಕ್ತರಿಗೆ ಪತ್ರ ಬರೆದಿದ್ದಾರೆ.

ಬಾದಾಮಿ ತಾಲೂಕಿನಲ್ಲಿ ಅಂತರ್ಜಲ ಮಟ್ಟ ಕುಸಿದಿದೆ, ಕೊಳವೆ ಬಾವಿ ಬತ್ತಿವೆ ಇದರಿಂದಾಗಿ ಮಲಪ್ರಭಾ ನದಿ ತೀರದ ಜನರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಹಾಗಾಗಿ 15 ದಿನಗಳ ಕಾಲ ನವಿಲುತೀರ್ಥ ಅಣೆಕಟ್ಟೆಯಿಂದ ಮಲಪ್ರಭಾ ನದಿಗೆ ನೀರು ಹರಿಸುವಂತೆ ಸಿದ್ದರಾಮಯ್ಯ ಅವರು ಬೆಳಗಾವಿಯ ಪ್ರಾದೇಶಿಕ ಆಯುಕ್ತರಿಗೆ ಆಗಸ್ಟ್​ 3 ರಂದು ಪತ್ರ ಬರೆದಿದ್ದಾರೆ.

ಸಿದ್ದರಾಮಯ್ಯ ಅವರ ಪತ್ರ ಆಧರಿಸಿ ಜಲಾಶಯ ವ್ಯಾಪ್ತಿಯ ಜನಪ್ರತಿನಿಧಿಗಳ ಮತ್ತು ಮುಖಂಡರ ಸಲಹೆ ಪಡೆದು ಕ್ರಮ ತೆಗೆದುಕೊಳ್ಳುವಂತೆ ಮಲಪ್ರಭಾ ಎಡದಂಡೆ ಕಾಲುವೆ ನಿರ್ಮಾಣ ವೃತ್ತದ ಅಧೀಕ್ಷಕ ಅಭಿಯಂತರಿಗೆ ಪ್ರಾದೇಶಿಕ ಆಯುಕ್ತರು ಸೂಚನೆ ನೀಡಿದ್ದಾರೆ.