ಈಗಲ್ಟನ್ ರೆಸಾರ್ಟ್​ನಲ್ಲಿ ಮಧ್ಯಾಹ್ನ 3 ಕ್ಕೆ ಕಾಂಗ್ರೆಸ್​ ಸಭೆ, ಸಿದ್ದರಾಮಯ್ಯ ಸಾರಥ್ಯ

ಬೆಂಗಳೂರು: ಈಗಲ್ಟನ್​ ರೆಸಾರ್ಟ್​ನಲ್ಲಿ ಇಂದು ಮಧ್ಯಾಹ್ನ 3 ಗಂಟೆಗೆ ಕಾಂಗ್ರೆಸ್​ ಸಭೆ ಕರೆಯಲಾಗಿದ್ದು, ಎಲ್ಲಾ ಶಾಸಕರಿಗೂ ಸಭೆಗೆ ಹಾಜರಾಗುವಂತೆ ಸೂಚಿಸಲಾಗಿದೆ.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಸಭೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ವಂಡರ್​ಲಾ ರೆಸಾರ್ಟ್​ನಲ್ಲಿ ವಾಸ್ತವ್ಯ ಹೂಡಿರುವ ಶಾಸಕರು ಮತ್ತು ವಿಧಾನ ಪರಿಷತ್​ ಸದಸ್ಯರು ಈಗಲ್ಟನ್​ ರೆಸಾರ್ಟ್​ಗೆ ತೆರಳುತ್ತಿದ್ದಾರೆ.

ಈಗಲ್ಟನ್​ ರೆಸಾರ್ಟ್​ನಲ್ಲಿ ಕೊಠಡಿಗಳ ಕೊರತೆ ಇರುವ ಹಿನ್ನೆಲೆಯಲ್ಲಿ ಆಪರೇಷನ್​ ಕಮಲದ ಸುಳಿಗೆ ಸಿಲುಕಿರುವ ಅನುಮಾನ ಇರುವ ಶಾಸಕರನ್ನು ಮಾತ್ರ ರೆಸಾರ್ಟ್​ನಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. ಉಳಿದ ಕಟ್ಟಾ ಕಾಂಗ್ರೆಸ್ ಶಾಸಕರು ರೆಸಾರ್ಟ್​ನಿಂದ ಹೊರಗೆ ಉಳಿಯಲಿದ್ದಾರೆ. ಬೆಂಗಳೂರು ನಗರದ ಶಾಸಕರು ಮತ್ತು ಸಚಿವರು ಸಭೆ ಬಳಿಕ ಮನೆಗೆ ತೆರಳಿದ್ದಾರೆ. ಆದರೆ, ಎಲ್ಲರೂ ಬೆಂಗಳೂರಿನಲ್ಲೇ ಇರಬೇಕು. ಕರೆದಾಗ ಸಭೆಗೆ ಹಾಜರಾಗಬೇಕು ಎಂದು ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ರೆಸಾರ್ಟ್​ನಲ್ಲಿರುವ ಶಾಸಕರ ಮೇಲೆ ವಿಶೇಷ ನಿಗಾ ವಹಿಸಲಾಗಿದ್ದು, ಅವರ ಪ್ರತಿಯೊಂದು ಚಲನ ವಲನಗಳನ್ನು ಕಾಂಗ್ರೆಸ್ ನಾಯಕರು ಗಮನಿಸುತ್ತಿದ್ದಾರೆ. ಅವರ ದೂರವಾಣಿ ಕರೆಗಳನ್ನು ಪರಿಶೀಲಿಸುತ್ತಿದ್ದಾರೆ. ಯಾವುದೇ ಕಾರಣಕ್ಕೂ ಇವರನ್ನು ಬಿಜೆಪಿಯವರು ಸಂಪರ್ಕ ಮಾಡಬಾರದು ಎಂದು ಎಚ್ಚರಿಕೆ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.