ಕೆ.ಕೆಂಚಪ್ಪ ಮೊಳಕಾಲ್ಮೂರು
ರಾಜ್ಯದ ಎಲ್ಲೆಡೆ ವರುಣನ ಅಬ್ಬರ ಜೋರು ಇದೆ. ಕೆರೆ-ಕಟ್ಟೆಗಳು, ಜಲಾಶಯಗಳು ಮೈದುಂಬಿ ಹರಿಯುತ್ತಿವೆ. ಆದರೆ, ಮೊಳಕಾಲ್ಮೂರಲ್ಲಿ ಮಾತ್ರ ಮಳೆರಾಯ ನಾಪತ್ತೆ…
ಹೌದು, ತಾಲೂಕಿನಲ್ಲಿ ಆರಂಭದಲ್ಲಿ ಅಬ್ಬರಿಸಿದ ಮುಂಗಾರು ಮಳೆ ನಂತರದ ದಿನಗಳಲ್ಲಿ ಆಗೊಮ್ಮೆ ಈಗೊಮ್ಮೆ ಗಾಳಿ ಸಹಿತ ತುಂತುರು ಹನಿಗೆ ಸೀಮಿತವಾಗಿದ್ದು, ಈ ವರ್ಷ ಉತ್ತಮ ಬೇಸಾಯದ ಉತ್ಸಾಹದಲ್ಲಿದ್ದ ರೈತರಿಗೆ ತಣ್ಣೀರೆೆರಚಿದೆ.
ಉತ್ತರ ಕರ್ನಾಟಕ, ಮಲೆನಾಡಿನಲ್ಲಿ ಅಬ್ಬರಿಸುತ್ತಿರುವ ಮಳೆಗೆ ಜನ, ಜಾನುವಾರು ತತ್ತರಿಸಿವೆ. ಜಲಪಾತ್ರೆಗಳು ತುಂಬಿ ಹರಿಯುತ್ತಿವೆ. ಆದರೆ, ಮಧ್ಯ ಕರ್ನಾಟಕದ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು, ಚಳ್ಳಕೆರೆ ತಾಲೂಕುಗಳಲ್ಲಿ ಮಳೆಯ ಅಭಾವ ಉಂಟಾಗಿದೆ.
ಮುಂಗಾರಿನ ಮೇ-ಜೂನ್ ತಿಂಗಳಲ್ಲಿ ಸುರಿದ ಉತ್ತಮ ಮಳೆಯ ಖುಷಿಯಲ್ಲಿ ಕೃಷಿಕರು ಭೂಮಿ ಹದ ಮಾಡಿಕೊಂಡು ಬಿತ್ತನೆಗೆ ಸಜ್ಜಾಗಿದ್ದರು. ಆದರೆ, ಕಳೆದ 15 ದಿನಗಳಿಂದ ಮಳೆ ಕೈಕೊಟ್ಟಿದೆ. ಮೋಡ ಕವಿದ ವಾತಾವರಣ, ತುಂತುರು ಮಳೆ ಬಿಟ್ಟರೆ ಒಮ್ಮೆಯೂ ಉತ್ತಮ ಮಳೆ ಆಗಿಲ್ಲ. ಕಳೆದ ವರ್ಷ ಕಾಣಿಸಿಕೊಂಡಿದ್ದ ಬರ ಈ ಸಾಲಿನಲ್ಲೂ ಮುಂದುವರಿಯುವ ಆತಂಕ ರೈತರ ನಿದ್ದೆಗೆಡಿಸಿದೆ.
ಮೊಳಕಾಲ್ಮೂರು ತಾಲೂಕಿನ ಕೃಷಿ ಬಹುತೇಕ ಮಳೆಯನ್ನೇ ಆಶ್ರಯಿಸಿದೆ. 32,500 ಹೆಕ್ಟೇರ್ ಕೃಷಿ ಪ್ರದೇಶದ ಪೈಕಿ 29,500 ಹೆಕ್ಟೇರ್ ಮಳೆಯನ್ನೇ ಆಶ್ರಯಿಸಿದೆ. ಕಳೆದ ಮೇ, ಜೂನ್ ತಿಂಗಳಲ್ಲಿ ಉತ್ತಮ ಮಳೆಯಾದ ಹಿನ್ನೆಲೆಯಲ್ಲಿ ತೊಗರಿ, ಹರಳು, ಎಳ್ಳು, ಹಲಸಂದೆ ಸೇರಿ 3500 ಹೆಕ್ಟೇರ್‌ನಲ್ಲಿ ಬಿತ್ತನೆ ಮಾಡಲಾಗಿದೆ. ಈಗಾಗಲೇ ಎಳ್ಳು ಕಾಯಿ ಕಟ್ಟಿದೆ. ಉಳಿದ ಬೆಳೆಗಳೂ ಉತ್ತಮ ಸ್ಥಿತಿಯಲ್ಲಿವೆ.
ವಾಡಿಕೆಯಂತೆ ಚಿಕ್ಕಪುಸೆ ಮಳೆಗೆ ಶೇಂಗಾ ಹೆಚ್ಚಾಗಿ ಬಿತ್ತನೆಯಾಗುವ ಗುರಿ ಇದೆ. ಈಗಾಗಲೇ 1 ಸಾವಿರ ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದೆ. ಉಳಿದಂತೆ ಭೂಮಿ ಹದ, ಬೀಜ, ಗೊಬ್ಬರ ಸಿದ್ಧತೆ ಮಾಡಿಕೊಂಡು ರೈತರು ಮಳೆಗಾಗಿ ಕಾದು ಕುಳಿತಿದ್ದಾರೆ.
ಶೇಂಗಾ ಮಾರಾಟ
ತಾಲೂಕಿನಿ ಪ್ರಧಾನ ಬೆಳೆಯಾದ ಶೇಂಗಾ ಬಿತ್ತನೆ ಬೀಜದ ದಾಸ್ತಾನಿದೆ. ಈಗಾಗಲೇ 4900 ಕ್ವಿಂಟಾಲ್ ಬಿತ್ತನೆ ಬೀಜದ ಕಾಯಿ ಮಾರಾಟವಾಗಿದೆ. ಇನ್ನೂ 1 ಸಾವಿರ ಕ್ವಿಂಟಾಲ್ ದಾಸ್ತಾನಿದೆ. ಅನೇಕ ರೈತರು ಮಳೆ ಬಂದ ತಕ್ಷಣ ಖರೀದಿ ಮಾಡುವ ಆಲೋಚನೆಯಲ್ಲಿದ್ದಾರೆ. ಆಗಸ್ಟ್ ಮೊದಲ ವಾರದವರೆಗೂ ಬಿತ್ತನೆಗೆ ಅವಕಾಶವಿದೆ. ನಂತರ ಹಿಂಗಾರು ಬೆಳೆ ಬಿತ್ತನೆ ಅನಿವಾರ್ಯ ಎನ್ನುತ್ತಾರೆ ಸಹಾಯಕ ಕೃಷಿ ಅಧಿಕಾರಿ ಗಿರೀಶ್.
ರೈತರು ಆತಂಕ ಪಡುವ ಅಗತ್ಯ ಇಲ್ಲ ಎನ್ನುವ ರಾಜ್ಯ ಹವಾಮಾನ ಇಲಾಖೆ ವರದಿ ಸಮಾಧಾನ ತರಿಸಿದೆ. ಒಂದು ಬೆಳೆ ಕೈಕೊಟ್ಟರೂ ಇನ್ನೊಂದು ಆದಾಯ ತಂದು ಕೊಡುವ ಬೆಳೆ ನಾಟಿ ಮಾಡಬೇಕಾಗಿದೆ. ಶೇಂಗಾ ನಡುವೆ ಅಕ್ಕಡಿ ಸಾಲಿಗೆ ತೊಗರಿ, ಹಲಸಂದೆ, ಹರಳು, ಹುರುಳಿ ಬಿತ್ತನೆ ಮಾಡುವುದು ಒಳ್ಳೆಯದು. ಈ ಪದ್ಧತಿ ಅನುಸರಿಸುವುದರಿಂದ ರೋಗ ರಹಿತ ಶೇಂಗಾ ಇಳುವರಿ ಬರಲಿದೆ. ಜತೆಗೆ ಭೂಮಿ ಫಲವತ್ತತೆ ಹೆಚ್ಚಲಿದೆ. ಹಿಂಗಾರಿನಲ್ಲಿ ಸಿರಿಧಾನ್ಯ ಬೆಳೆಗಳಾದ ನವಣೆ, ಆರ್ಕ, ಸಾವೆ, ಔಡಲ ಪರ್ಯಾಯವಾಗಿ ಬಿತ್ತನೆ ಮಾಡುವುದು ಉತ್ತಮ.
ಪ್ರಕಾಶ್, ಕೃಷಿ ಅಧಿಕಾರಿ, ಮೊಳಕಾಲ್ಮೂರು