ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ 6 ಗಂಟೆಗಳಲ್ಲಿ ರೈತರ ಸಾಲಮನ್ನಾ

ಚಂಡೀಗಢ: ಒಂದು ವೇಳೆ ಹರಿಯಾಣದ ಜನ ಕಾಂಗ್ರೆಸ್​ಗೆ ಅಧಿಕಾರ ನೀಡಿದರೆ, ಸರ್ಕಾರ ರಚಿಸಿದ ಆರು ಗಂಟೆಗಳಲ್ಲೇ ರೈತರ ಸಾಲಮನ್ನಾ ಮಾಡಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಭೂಪಿಂದರ್​ ಸಿಂಗ್​ ಹೂಡಾ ಘೋಷಿಸಿದ್ದಾರೆ.

ಇತ್ತೀಚೆಗೆ ನಡೆದ ಪಂಚ ರಾಜ್ಯಗಳ ಚುನಾವಣೆ ವೇಳೆ ಕಾಂಗ್ರೆಸ್​ ರೈತರ ಸಾಲಮನ್ನಾದ ಅಸ್ತ್ರವನ್ನು ಸಮರ್ಪಕವಾಗಿ ಬಳಸಿಕೊಂಡಿತ್ತು. ಇದೇ ಆಧಾರದ ಮೇಲೆ ರಾಜಸ್ಥಾನ, ಮಧ್ಯಪ್ರದೇಶ, ಚತ್ತೀಸ್​ಗಢದಲ್ಲಿ ಅಧಿಕಾರ ಹಿಡಿಯುವಲ್ಲಿಯೂ ಸಫಲವಾಗಿದ್ದ ಕಾಂಗ್ರೆಸ್​, ಮೂರು ರಾಜ್ಯಗಳಲ್ಲೂ ಸರ್ಕಾರ ರಚನೆಯಾಗುತ್ತಲೇ ಸಾಲಮನ್ನಾ ಘೋಷಣೆ ಮಾಡಿತ್ತು.

ರೈತರ ಸಾಲಮನ್ನಾ ವಿಚಾರ ರಾಜಕೀಯ ಪುನಶ್ಚೇತನಕ್ಕೆ ಸಹಕಾರಿಯಾಗಲಿದೆ ಎಂಬುದನ್ನು ಮನಗಂಡಿರುವ ಹರಿಯಾಣ ಕಾಂಗ್ರೆಸ್​ನ ಮುಖಂಡ ಮತ್ತು ಮಾಜಿ ಮುಖ್ಯಮಂತ್ರಿ ಭೂಪಿಂದರ್​ ಸಿಂಗ್​ ಹೂಡಾ ಒಂದು ವೇಳೆ ರಾಜ್ಯದಲ್ಲಿ ಕಾಂಗ್ರೆಸ್​ ಅಧಿಕಾರಕ್ಕೆ ಬಂದರೆ ತಾವೂ ಕೂಡ ಸಾಲಮನ್ನಾ ಮಾಡುವುದಾಗಿ ಘೋಷಿಸಿದ್ದಾರೆ. ಅಲ್ಲದೆ, ವೃದ್ಧಾಪ್ಯ ವೇತನವನ್ನು 2 ಸಾವಿರಗಳಿಂದ 3 ಸಾವಿರಗಳಿಗೆ ಏರಿಸುವುದಾಗಿಯೂ, ವಿದ್ಯುತ್​ ಬಿಲ್​ ಅನ್ನು ಶೇ. 50 ರಷ್ಟು ಕಡಿತ ಮಾಡುವುದಾಗಿಯೂ ಭರವಸೆ ನೀಡಿದ್ದಾರೆ.

ಹರಿಯಾಣದಲ್ಲಿ ಸದ್ಯ ಬಿಜೆಪಿ ಸರ್ಕಾರ ಅಸ್ತಿತ್ವದಲ್ಲಿದ್ದು, ಮುಂದಿನ ವರ್ಷ ವಿಧಾನಸಭೆ ಚುನಾವಣೆ ನಡೆಯಲಿದೆ.
ಕಳೆದ ಆರು ತಿಂಗಳ ಹಿಂದೆ ಕರ್ನಾಟಕದಲ್ಲಿ ನಡೆದ ವಿಧಾನಸಭೆ ಚುನಾವಣೆ ವೇಳೆ ಜೆಡಿಎಸ್​ ಪಕ್ಷ ಸಾಲಮನ್ನಾ ಮಾಡುವುದಾಗಿ ಘೋಷಿಸಿತ್ತು. ಕಾಂಗ್ರೆಸ್​ನೊಂದಿಗೆ ಕೈ ಜೋಡಿಸಿ ಸರ್ಕಾರ ರಚನೆ ಮಾಡಿದ ನಂತರ ಕರ್ನಾಟಕದಲ್ಲಿ ಸಾಲಮನ್ನಾ ಜಾರಿ ಮಾಡಲಾಗಿದೆ. ಈ ಸಾಲ ಮನ್ನಾ ಯೋಜನೆಯನ್ನು ಕಾಂಗ್ರೆಸ್​ ರಾಷ್ಟ್ರ ಮಟ್ಟದ ಚರ್ಚಿತ ವಿಷಯವನ್ನಾಗಿ ಪರಿಗಣಿಸಿದ್ದು, ಲೋಕಸಭೆ ಚುನಾವಣೆಗೂ ಇದೇ ಅಸ್ತ್ರವನ್ನು ಪ್ರಯೋಗಿಸುವ ಚಿಂತನೆಯಲ್ಲಿದೆ. ವಿಧಾನಸಭೆ ಚುನಾವಣೆಗಳು ನಡೆಯುತ್ತಿರುವ ರಾಜ್ಯಗಳಲ್ಲೂ ಕಾಂಗ್ರೆಸ್​ ಇದನ್ನೇ ಬಳಸಿಕೊಳ್ಳುತ್ತಿದೆ.

ಹೀಗಿರುವಾಗಲೇ ಅಸ್ಸಾಂನ ಬಿಜೆಪಿ ಸರ್ಕಾರ ರೈತರ ಸಾಲಮನ್ನಾ ಘೋಷಿಸಿದೆ. ಗುಜರಾತ್​ನಲ್ಲಿಯೂ ಗ್ರಾಮೀಣ ವಿದ್ಯುತ್​ ಬಿಲ್​ ಮನ್ನಾ ಮಾಡುವ ಕಾರ್ಯಕ್ರಮ ಘೋಷಿಸಲಾಗಿದೆ.