ಗುಂಡ್ಲುಪೇಟೆಯಲ್ಲಿ ರೈತ ದಿನಾಚರಣೆ

ಗುಂಡ್ಲುಪೇಟೆ: ತಮ್ಮ ಹಿತಾಸಕ್ತಿ ರಕ್ಷಣೆಗೆ ಮುಂದಾದರೆ ಮಾತ್ರ ರೈತರ ಉಳಿವು ಸಾಧ್ಯವಾಗುತ್ತದೆ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಪಿ.ಚನ್ನಪ್ಪ ಹೇಳಿದರು.

ಪಟ್ಟಣದ ಗುರುಭವನದಲ್ಲಿ ಕೃಷಿ ಇಲಾಖೆಯು ಆಯೋಜಿಸಿದ್ದ ರಾಷ್ಟ್ರೀಯ ರೈತ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಇತ್ತೀಚೆಗೆ ರೈತ ಸಂಘಟನೆಗಳು ಜಾಗೃತಗೊಂಡ ಪರಿಣಾಮ ಸರ್ಕಾರದ ಸವಲತ್ತುಗಳು ರೈತರಿಗೆ ದೊರಕುವಂತಾಗಿದೆ. ಬಾಯಿ ಮಾತಿನಲ್ಲಿ ಮಾತ್ರ ರೈತನನ್ನು ಅನ್ನದಾತ ಎನ್ನಲಾಗುತ್ತಿದ್ದು, ಬಹುತೇಕ ಸರ್ಕಾರಿ ಯೋಜನೆಗಳು ಹಾಗೂ ಬೆಳೆಗಳಿಗೆ ಉತ್ತಮ ಬೆಲೆ ದೊರಕದೆ ರೈತರಿಗೆ ತೀವ್ರ ಸಂಕಷ್ಟ ಎದುರಿಸುವಂತಾಗಿದೆ. ಆದ್ದರಿಂದ ಸರ್ಕಾರ ಬೆಳೆಗಳಿಗೆ ಬೆಲೆ ನಿಗದಿ ಮಾಡಬೇಕು ಹಾಗೂ ತಮ್ಮ ಹಕ್ಕುಗಳು ಹಾಗೂ ಸವಲತ್ತುಗಳನ್ನು ಪಡೆಯಲು ರೈತರು ಸಂಘಟಿತರಾಗಬೇಕಾಗಿದೆ ಎಂದರು.

ಕೃಷಿ ವಿಜ್ಞಾನಿ ಡಾ.ಅರಸುಮಲ್ಲಯ್ಯ ಮಾತನಾಡಿ, ಮಣ್ಣಿನ ಆರೋಗ್ಯ ಸಂರಕ್ಷಣೆ ಮಾಡಿದರೆ ಮಾತ್ರ ಉತ್ತಮ ಬೆಳೆ ಬೆಳೆಯಲು ಸಾಧ್ಯವಿದ್ದು, ಈ ಬಗ್ಗೆ ರೈತರಲ್ಲಿ ಅರಿವು ಮೂಡಿಸಲಾಗುತ್ತಿದೆ ಎಂದರು.

ಇದಕ್ಕೂ ಮೊದಲು ಎತ್ತಿನ ಬಂಡಿಯಲ್ಲಿ ಚೌಧುರಿ ಚರಣ್‌ಸಿಂಗ್ ಹಾಗೂ ಡಾ.ಎಂ.ಡಿ.ನಂಜುಂಡಸ್ವಾಮಿಯವರ ಭಾವಚಿತ್ರವನ್ನು ಕಲಾತಂಡಗಳೊಂದಿಗೆ ಪ್ರವಾಸಿ ಮಂದಿರದಿಂದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ಗುರುಭವನಕ್ಕೆ ಕೊಂಡೊಯ್ಯಲಾಯಿತು.

ಧಾನ್ಯಗಳ ಕಣ ಹಾಗೂ ನೇಗಿಲಿಗೆ ಪೂಜೆ ಮಾಡುವ ಮೂಲಕ ವಿಶಿಷ್ಟವಾಗಿ ಉದ್ಘಾಟನೆ ಮಾಡಲಾಯಿತು.
ಕೃಷಿಕ ಸಮಾಜದ ಅಧ್ಯಕ್ಷ ಕೆ.ಸಿ.ಮಧು, ಉಪಾಧ್ಯಕ್ಷ ಭಿಕ್ಷೇಶ್ ಪ್ರಸಾದ್, ತಾಪಂ ಸದಸ್ಯರಾದ ಎಸ್.ಎಸ್.ಮಧುಶಂಕರ್, ಕೆ.ಪ್ರಭಾಕರ್, ರೈತ ಸಂಘದ ಅಧ್ಯಕ್ಷ ಕುಂದಕೆರೆ ಸಂಪತ್ತು, ಜಿಲ್ಲಾ ಸಂಚಾಲಕ ಮಾಡ್ರಹಳ್ಳಿ ಮಹದೇವಪ್ಪ, ಕಡಬೂರು ಮಂಜುನಾಥ್, ಮಹದೇವಪ್ಪ, ಮಹೇಶ್, ಕುಂದಕೆರೆ ನಾಗಮಲ್ಲಪ್ಪ, ಸಹಾಯಕ ಕೃಷಿ ನಿರ್ದೇಶಕ ವೆಂಕಟೇಶ್, ಗುಡಿಮನೆ ಅಭಿಷೇಕ್ ಹಾಜರಿದ್ದರು.