ಮೈಸೂರು: ಯುವರಾಜ ಕಾಲೇಜು ಅಣುಜೀವ ವಿಜ್ಞಾನ ವಿಭಾಗದ ಪ್ರಾಧ್ಯಾಪಕಿ ಹಾಗೂ ಮುಖ್ಯಸ್ಥೆ ಡಾ.ಎನ್.ಎಸ್.ದೇವಕಿ ಅವರು ನಿವೃತ್ತಿಯಾಗುತ್ತಿರುವ ಹಿನ್ನೆಲೆಯಲ್ಲಿ ಕನ್ನಡ ವಿಭಾಗದಿಂದ ಗೌರವಿಸಲಾಯಿತು.
ಕನ್ನಡ ವಿಭಾಗದ ಮುಖ್ಯಸ್ಥ ಡಾ. ಸಿ.ಡಿ.ಪರಶುರಾಮ, ಪ್ರಾಧ್ಯಾಪಕರಾದ ಡಾ. ಎಂ.ಎಸ್.ವಸಂತಮ್ಮ, ಡಾ. ಜಿ. ಶ್ರೀನಿವಾಸ್, ಡಾ. ಕೋಕಿಲಾ, ಡಾ ಎಂ.ಪಿ.ರೇಖಾ ಇತರರು ಇದ್ದರು.
ಡಾ. ಎನ್.ಎಸ್.ದೇವಕಿ ಅವರು ಯುವರಾಜ ಕಾಲೇಜಿನಲ್ಲಿ ಮೂರು ದಶಕಗಳಿಂದ ಅಧ್ಯಾಪಕರಾಗಿ, ಸಹ ಪ್ರಾಧ್ಯಾಪಕಿಯಾಗಿ, ಪ್ರಾಧ್ಯಾಪಕಿಯಾಗಿ, ವಿಭಾಗದ ಮುಖ್ಯಸ್ಥೆಯಾಗಿ ವಿದ್ಯಾರ್ಥಿಗಳ ಅಚ್ಚು ಮೆಚ್ಚಿನ ಗುರುವಾಗಿದ್ದಾರೆ. ಅಣುಜೀವ ವಿಜ್ಞಾನ ವಿಭಾಗದ ಅಧ್ಯಯನ ಮಂಡಳಿ ಹಾಗೂ ಪರೀಕ್ಷಾ ಮಂಡಳಿಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.
ಕಾಲೇಜಿನ ಐಕ್ಯೂಎಸಿ ಸಂಯೋಜಕರಾಗಿ, ವಿಜ್ಞಾನ ವೇದಿಕೆಯ ಸಂಯೋಜಕರಾಗಿ, ಪರಿಸರ ಸಂರಕ್ಷಣಾ ವೇದಿಕೆ ಸಂಯೋಜಕರಾಗಿಯೂ ಉತ್ತಮವಾಗಿ ಕಾರ್ಯನಿರ್ವಹಿಸಿ ಅಧ್ಯಾಪಕರ, ವಿದ್ಯಾರ್ಥಿಗಳ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಯುಜಿಸಿ ಅನುದಾನದಿಂದ ಭತ್ತದ ಬೆಳೆಗೆ ತಗಲುವ ಬೆಂಕಿ ರೋಗದ ಬಗ್ಗೆ ಇವರು ಸಂಶೋಧನೆ ಮಾಡಿದ್ದಾರೆ. ಡಾ. ಎನ್.ಎಸ್.ದೇವಕಿ ಅವರ ಅಧ್ಯಯನ, ಬೋಧನೆ, ಸಂಶೋಧನೆಗಾಗಿ 2016ರಲ್ಲಿ ನವದೆಹಲಿಯ ಇನ್ಸಾ ಟೀಚರ್ಸ್ ಅಕಾಡೆಮಿ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಿದೆ. 2018ರಲ್ಲಿ ಕರ್ನಾಟಕ ರಾಜ್ಯ ಮಹಿಳಾ ಸಾಧಕಿ ಪ್ರಶಸ್ತಿ ಬಂದಿದೆ. ಇವರು ಬರೆದಿರುವ ಐವತ್ತೆರಡು ಸಂಶೋಧನಾ ಲೇಖನಗಳು ರಾಷ್ಟ್ರಮಟ್ಟದ ನಿಯತಕಾಲಿಕೆಗಳಲ್ಲಿ ಪ್ರಕಟವಾಗಿವೆ. ಇವರ ಮಾರ್ಗದರ್ಶನದಲ್ಲಿ ಹತ್ತು ಮಂದಿ ವಿದ್ಯಾರ್ಥಿಗಳು ಪಿಎಚ್.ಡಿ ಪದವಿ ಪಡೆದಿದ್ದಾರೆ.
