ಹುಕ್ಕೇರಿ: ಅನುತ್ತೀರ್ಣಗೊಂಡವರನ್ನು ಪ್ರೇರೇಪಿಸುವುದು ಬಹುಮುಖ್ಯ

ಹುಕ್ಕೇರಿ: ಸಾಧನೆಗೆ ಪ್ರೋತ್ಸಾಹ ನೀಡಿದಂತೆ, ಅನುತ್ತೀರ್ಣವಾದವರನ್ನು ಹುರಿದುಂಬಿಸಿ ಅವರಲ್ಲಿ ಆತ್ಮವಿಶ್ವಾಸ ಹೆಚ್ಚಿಸುವ ಕರ್ತವ್ಯ ನಮ್ಮದಾಗಬೇಕು ಎಂದು ಬಿ.ಇ.ಒ ಮೋಹನ ದಂಡಿನ ಹೇಳಿದ್ದಾರೆ.

ಸ್ಥಳೀಯ ಎಸ್.ಕೆ ಹೈಸ್ಕೂಲ್‌ನಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಚಿಕ್ಕೋಡಿ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹುಕ್ಕೇರಿ ಸಂಯುಕ್ತ ಆಶ್ರಯದಲ್ಲಿ ಶುಕ್ರವಾರ ನಡೆದ ಎಸ್.ಎಸ್.ಎಲ್.ಸಿ. ಫಲಿತಾಂಶ ವಿಶ್ಲೇಷಣೆ ಹಾಗೂ ಸಾಧನೆಗೈದ ಶಾಲೆಗಳು ಮತ್ತು ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸನ್ಮಾನ ನೆರವೇರಿಸಿ ಮಾತನಾಡಿದರು. ಅನುತ್ತೀರ್ಣಗೊಂಡ ವಿದ್ಯಾರ್ಥಿಗಳನ್ನು ಪ್ರೇರೆಪಿಸಿ ಅವರಿಗೆ ಸೂಕ್ತ ತರಬೇತಿ ನೀಡುವುದರ ಜತೆಗೆ ಪೂರಕ ಪರೀಕ್ಷೆ ಬರೆಯಲು ಮಾರ್ಗದರ್ಶನ ಮಾಡುವಂತೆ ತಾಲೂಕಿನ ಎಲ್ಲ ಪ್ರೌಢಶಾಲೆಗಳ ಮುಖ್ಯೋಪಾಧ್ಯಾಯರಿಗೆ ತಿಳಿಸಿದರು.

ಜಿಲ್ಲಾ ಹಾಗೂ ತಾಲೂಕುಮಟ್ಟದಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಹಾಗೂ ಪ್ರತಿಶತ ನೂರರ ಸಾಧನೆ ಮಾಡಿದ ಪ್ರೌಢಶಾಲೆಗಳ ಮುಖ್ಯೋಪಾಧ್ಯಾಯರನ್ನು ಸತ್ಕರಿಸಿದರು. ಕ್ಷೇತ್ರ ಸಮನ್ವಯಾಧಿಕಾರಿ ಎಸ್.ಡಿ. ನಾಯಿಕ, ಮುಂಬರುವ ಶೈಕ್ಷಣಿಕ ವರ್ಷದಿಂದ ಶಾಲೆಗಳಲ್ಲಿ ಕೈಗೊಳ್ಳಬೇಕಾದ ಶೈಕ್ಷಣಿಕ ಚಟುವಟಿಕೆ ವಿವರಿಸಿದರು.

ರಾಜ್ಯ ಪ್ರೌಢಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳಾದ ಎನ್.ಬಿ.ತೇರದಾಳ, ಎಸ್.ಎಸ್.ಕರಿಗಾರ, ಅತ್ತಿಹಾಳ ಸರ್ಕಾರಿ ಪ್ರೌಢಶಾಲೆ ಮುಖ್ಯೋಪಾಧ್ಯಾಯ ಪಿ.ಡಿ.ಪಾಟೀಲ, ಎಸ್.ಕೆ ಹೈಸ್ಕೂಲ್ ಉಪ ಪ್ರಾಚಾರ್ಯ ಬಿ.ಬಿ.ಹಿಡಕಲ್ ಮತ್ತಿತರರಿದ್ದರು. ಶಿಕ್ಷಣ ಸಂಯೋಜಕ ರಾಜೇಂದ್ರ ಘಸ್ತಿ ಸ್ವಾಗತಿಸಿದರು. ಶಿಕ್ಷಕ ಎಂ.ಎಸ್.ಪಾಟೀಲ ನಿರೂಪಿಸಿದರು. ಸುನೀಲ ಕಾಜಗಾರ ವಂದಿಸಿದರು.


8 ಪ್ರೌಢಶಾಲೆ ಶೇ.100 ಫಲಿತಾಂಶ


ಸರಕಾರಿ ಪ್ರೌಢಶಾಲೆ ಅತ್ತಿಹಾಳ, ಮಾವನೂರ, ಮೊರಾರ್ಜಿ ವಸತಿ ಶಾಲೆಗಳಾದ ಹಿಡಕಲ್ ಡ್ಯಾಂ, ಹೊಸೂರ, ಸಂಕೇಶ್ವರ,ನಿಡಸೋಸಿ, ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆ ನಿಡಸೋಸಿ, ಗಂಗಾಧರ ವಸತಿ ಪ್ರೌಢಶಾಲೆ ಶಿರಢಾಣತಾಲೂಕಿನಲ್ಲಿ ಪ್ರತಿಶತಃ ನೂರು ಸಾಧನೆ ಮಾಡಿವೆ.

Leave a Reply

Your email address will not be published. Required fields are marked *