ಮುಖ್ಯಮಂತ್ರಿ ಕುಮಾರಸ್ವಾಮಿ ಪತ್ನಿಯೂ ಆಂಧ್ರ ಗೌಡ್ತಿಯಲ್ಲವೇ: ಅಂಬಿ ಅಭಿಮಾನಿಗಳ ಪ್ರಶ್ನೆ

ಮಂಡ್ಯ: ಸುಮಲತಾ ಅಂಬರೀಷ್‌ ಅವರು ಮಂಡ್ಯದ ಗೌಡ್ತಿ ಅಲ್ಲವೆಂದು ಹೇಳಿದ್ದ ಜೆಡಿಎಸ್‌ ಪರಿಷತ್‌ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಅವರ ಹೇಳಿಕೆ ವಿವಾದಕ್ಕೆ ತಿರುಗಿರುವ ಬೆನ್ನಲ್ಲೇ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರ ಪತ್ನಿ ಅನಿತಾ ಕುಮಾರಸ್ವಾಮಿ ಅವರು ಕೂಡ ಆಂಧ್ರ ಗೌಡ್ತಿ ಎನ್ನುವ ವಿಡಿಯೋ ಇದೀಗ ವೈರಲ್‌ ಆಗಿದೆ.

ಸುಮಲತಾ ಬಗ್ಗೆ ವಿವಾದಾತ್ಮಕ ಹೇಳಿಕೆ ಹಿನ್ನೆಲೆಯಲ್ಲಿ ಅಭಿಮಾನಿಗಳು, ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಸ್ವತಃ ಎಚ್‌.ಡಿ.ಕುಮಾರಸ್ವಾಮಿಯವರೇ ಖಾಸಗಿ ಚಾನೆಲ್‌ವೊಂದರ ಸಂದರ್ಭದಲ್ಲಿ ತಾನು ಕೂಡ ಕೋಲಾರದ ತೆಲುಗು ಕುಟುಂಬದ ಹೆಣ್ಣನ್ನು ಮದುವೆಯಾಗಿದ್ದೇನೆ ಎಂದಿರುವ ವಿಡಿಯೋ ವಾಟ್ಸ್​ಆ್ಯಪ್‌ ಗ್ರೂಪ್‌ಗಳಲ್ಲಿ ಹರಿದಾಡುತ್ತಿದೆ.

ತಮ್ಮ ಮಗ ನಿಖಿಲ್‌ ಕುಮಾರಸ್ವಾಮಿ ನಾಯಕ ನಟನಾಗಿ ನಟಿಸಿದ್ದ ಜಾಗ್ವಾರ್ ಸಿನಿಮಾ ಪ್ರಮೋಷನ್ ಸಂದರ್ಭದಲ್ಲಿ ಕುಮಾರಸ್ವಾಮಿ ಅವರು ಚಾನೆಲ್‌ವೊಂದಕ್ಕೆ ಸಂದರ್ಶನ ನೀಡಿದ್ದರು. ಈ ವೇಳೆ ನಾನು ಕೋಲಾರದ ತೆಲುಗು ಕುಟುಂಬದ ಹೆಣ್ಣನ್ನು ಮದುವೆಯಾಗಿದ್ದೇನೆ ಎಂದಿದ್ದು, ಸಿಎಂ ಪತ್ನಿಯೂ ‘ಆಂಧ್ರ ಗೌಡ್ತಿ’ ಎನ್ನುವುದು ತಿಳಿದುಬಂದಿದೆ. ಸುಮಲತಾ ಮಂಡ್ಯ ಗೌಡ್ತಿ ಅಲ್ಲ ಎಂದ ಮೇಲೆ ಅನಿತಾ ಕುಮಾರಸ್ವಾಮಿ ಯಾರು ಎಂದು ಪ್ರಶ್ನಿಸಿರುವ ಅಂಬಿ ಅಭಿಮಾನಿಗಳು ವೀಡಿಯೋ ವೈರಲ್ ಮಾಡಿದ್ದಾರೆ. (ದಿಗ್ವಿಜಯ ನ್ಯೂಸ್)